ನೀರು ಬಿಡಲು ಮಹಾ ವಿಳಂಬ: ನದಿ ಪಾತ್ರದ ಜನರ ಹಿಡಿ ಶಾಪ
ಮಾಂಜರಿ, 23: ಕೃಷ್ಣಯ ಒಡಲು ದಿನದಿಂದ ದಿನಕ್ಕೆ ಬರಿದಾಗುತ್ತಿದೆ. ಕೃಷ್ಣಯ ತೀರದ ಮಕ್ಕಳು ನೀರಿಗಾಗಿ ಅಂಗಲಾಚುತ್ತಿದ್ದಾರೆ. ಮಹಾರಾಷ್ಟ್ರಕ್ಕೆ ನೀರು ಹರಿಸುವಂತೆ ಕರ್ನಾಟಕ ಸಿಎಂ ಪತ್ರ ಬರೆದು 22 ದಿನಗಳು ಕಳೆದವು. ಪತ್ರಕ್ಕೆ ಮಹಾ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ. ಬರೀ ಪತ್ರ ಬರೆದು ಕೈಕಟ್ಟಿ ಕುಳಿತ ಕರ್ನಾಟಕ ಸರ್ಕಾರಕ್ಕೆ ನದಿಪಾತ್ರದ ಜನ ಹಿಡಿಶಾಪ ಹಾಕುತ್ತಿದ್ದಾರೆ. ನಿಮ್ಮ ನೀರು ವಿನಿಮಯ ಒಪ್ಪಂದ ಏನಾಯಿತು ಎಂದು ಪ್ರಶ್ನಿಸುತ್ತಿದ್ದಾರೆ. ಹಾಗಾದ್ರೆ ಏನಿದು ಒಪ್ಪಂದ? ಯಾಕೆ ಇದು ಅನುಷ್ಠಾನಕ್ಕೆ ಬರುತ್ತಿಲ್ಲ? ಇಲ್ಲಿದೆ ವಿಶೇಷ ವರದಿ.
ಈ ಬಾರಿ ರಾಜ್ಯದಲ್ಲಿ ಉದ್ಭವಿಸಿರುವ ಬಿರು ಬೇಸಿಗೆಗೆ ಉತ್ತರ ಕರ್ನಾಟಕ ಜನತೆ ತತ್ತರಿಸಿ ಹೋಗಿದ್ದಾರೆ. ಕೃಷ್ಣಾ ನದಿಯ ಒಡಲು ಖಾಲಿಯಾಗುತ್ತಿದೆ. ಕೆರೆ, ಬಾವಿ, ಕೊಳವೆಬಾವಿಗಳು ಬತ್ತಿವೆ. ಹಾಗಾಗಿ, ಚಿಕ್ಕೋಡಿ ಉಪವಿಭಾಗದ ನದಿ ತೀರದಲ್ಲಿ ಜನಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಇದರಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏ. 1ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದು ಕೋಯ್ತಾ ಜಲಾಶಯದಿಂದ ಕೃಷ್ಣಾ ನದಿಗೆ 2 ಟಿಎಂಸಿ ನೀರು ಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ, ಸಿದ್ದರಾಮಯ್ಯ ಪತ್ರ ಬರೆದು ಮೂರು ವಾರ ಆಗುತ್ತಾ ಬಂದರೂ ಕೂಡ ಮಹಾರಾಷ್ಟ್ರ ಸರ್ಕಾರ ಈವರೆಗೆ ಕೃಷ್ಣಾ ನದಿಗೆ ಒಂದು ಹನಿ ನೀರು ಬಿಡುಗರು ಮಾಡದೇ ನಿರ್ಲಕ್ಷ್ಯ ವಹಿಸಿದೆ.
ಗಡಿ, ಭಾಷೆಯ ಗೊಂದಲದ ನಡುವೆ ನೆರೆಯ ಮಹಾರಾಷ್ಟ್ರ ಕರ್ನಾಟಕದೊಂದಿಗೆ ಜಲ ಸಂಘರ್ಷಕ್ಕೆ ಇಳಿದಂತೆ ತೋರುತ್ತಿದೆ. ಕೃಷ್ಣಾ ನದಿಗೆ ನೀರು ಹರಿಸಲು ಹಿಂದೇಟು ಹಾಕುತ್ತಿರುವ 'ಮಹಾ' ಮೊಂಡುತನಕ್ಕೆ ಕೃಷ್ಣಾ ನದಿ ತೀರದ ಜನತೆ ಈಗ ಅಕ್ಷರಶಃ ಕಂಗಾಲಾಗಿದ್ದಾರೆ.
ಒಂದು ವೇಳೆ ಕೃಷ್ಣಾ ನದಿಗೆ 2 ಟಿಎಂಸಿ ನೀರು ಬಿಟ್ಟಲ್ಲಿ ಕೇವಲ ಬೆಳಗಾವಿಯಷ್ಟೇ ಅಲ್ಲ ವಿಜಯಪುರ, ಬಾಗಲಕೋಟೆ ಜಿಲ್ಲೆಯ ಜನರ ದಾಹವೂ ನೀಗಲಿದೆ. ಆದರೂ ಕರ್ನಾಟಕ ಸರ್ಕಾರದ ಮನವಿಗೆ ಮಹಾರಾಷ್ಟ್ರ ಸರ್ಕಾರ ಸ್ಪಂದಿಸುತ್ತಿಲ್ಲ. 2004ರಿಂದ ಕೋಯ್ತಾ ಜಲಾಶಯದಿಂದ ನೀರು ಬಿಡಲು ಮಹಾರಾಷ್ಟ್ರಕ್ಕೆ ಕರ್ನಾಟಕ ಸರ್ಕಾರ ದುಡ್ಡು ಕೊಡುತ್ತಿತ್ತು. 1 ಟಿಎಂಸಿ ನೀರಿಗೆ 2 ಕೋಟಿ ರೂ. ದರ ನಿಗದಿಪಡಿಸಲಾಗಿತ್ತು. ಇದು 2015ವರೆಗೂ ಮುಂದುವರಿದಿತ್ತು. 2016ಕ್ಕೆ ಮಹಾ ಸರ್ಕಾರ ಕ್ಯಾತೆ ತೆಗೆದು ನೀರು ವಿನಿಮಯ ಒಪಂದಕೆ ಬೇಡಿಕೆ ಇಟ್ಟಿತು.
1 ಟಿಎಂಸಿ ನೀರಿಗೆ 2 ಕೋಟಿ ರೂ. ದರ ನಿಗದಿಪಡಿಸಲಾಗಿತ್ತು. ಇದು 2015ವರೆಗೂ ಮುಂದುವರಿದಿತ್ತು. 2016ಕ್ಕೆ ಮಹಾ ಸರ್ಕಾರ ಕ್ಯಾತೆ ತೆಗೆದು ನೀರು ವಿನಿಮಯ ಒಪ್ಪಂದಕ್ಕೆ ಬೇಡಿಕೆ ಇಟ್ಟಿತು. ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಮಹಾರಾಷ್ಟ್ರದ ಜತ್ತ ತಾಲ್ಲೂಕಿಗೆ 4 ಟಿಎಂಸಿ ನೀರು ಬಿಡಬೇಕು. ಅಷ್ಟೇ ಪ್ರಮಾಣದ ನೀರನ್ನು ನಾವು ಕೋಯ್ತಾ ಮತ್ತು ವಾರಣಾ ಜಲಾಶಯದಿಂದ ಕೃಷ್ಣಾ ನದಿಗೆ ಬಿಡುತ್ತೇವೆ ಎಂದು ವಾದ ಮಂಡಿಸಿತು.
ಈ ಬಗ್ಗೆ ಮಾತನಾಡಿದ ಚಿಕ್ಕೋಡಿಯ ಸಾಮಾಜಿಕ ಹೋರಾಟಗಾರರಾದ ಚಂದ್ರಕಾಂತ್ ಹುಕ್ಕೇರಿ "ಇನ್ನು 2019ರ ಜನವರಿಯಲ್ಲಿ ನೀರು ಬಿಡುವಂತೆ ಅಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಮಹಾರಾಷ್ಟ್ರಕ್ಕೆ ಮನವಿ ಮಾಡಿಕೊಂಡರು. ಆದರೂ ನೀರು ಬಿಡಲಿಲ್ಲ. ನಂತರ ಸಮ್ಮಿಶ್ರ ಸರ್ಕಾರ ಪತನವಾಗಿ ಅಧಿಕಾರಕ್ಕೆ ಬಂದ ಯಡಿಯೂಪ್ಪ ಅವರು ಕೂಡ ನೀರಿಗಾಗಿ ಕೇಳಿಕೊಂಡರು. ಆದರೂ, ಜನವರಿ-ಜೂನ್‌ವರೆಗೂ ಮಹಾರಾಷ್ಟ್ರ ನೀರು ಬಿಡಲೇ ಇಲ್ಲ. ಜುಲೈ ತಿಂಗಳಲ್ಲಿ ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ಏಕಾಏಕಿ ಕೃಷ್ಣಾ ನದಿಗೆ 8 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿದರು. ಆಗ ಕಂಡು ಕೇಳರಿಯದ ಪರಿಸ್ಥಿತಿ ಉಂಟಾಗಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಸುಮಾರು 35 ಸಾವಿರ ಕೋಟಿ ರೂ. ನಷ್ಟವಾಯಿತು. ಈ ಹಾನಿಗೆ ಮಹಾರಾಷ್ಟ್ರವೇ ಹೊಣೆ. ಪರಿಹಾರ ತುಂಬಿಕೊಡುವಂತೆ ಕರ್ನಾಟಕ ಕೇಳಿಕೊಂಡರು ಮಹಾರಾಷ್ಟ್ರ ಯಾವುದೇ ರೀತಿ ಸ್ಪಂದಿಸಲಿಲ್ಲ" ಎಂದು ವಿವರಿಸಿದರು.
ನೀರು ವಿನಿಮಯ ಒಪ್ಪಂದಕ್ಕೆ ಏನು ಅಡ್ಡಿ?
105 ಟಿಎಂಸಿ ಸಾಮರ್ಥ್ಯದ ಕೋಯ್ತಾ ಜಲಾಶಯದಲ್ಲಿ ಇವತ್ತಿನವರೆಗೂ 42 ಟಿಎಂಸಿ ನೀರಿದೆ. ಇನ್ನು 34 ಟಿಎಂಸಿ ಸಾಮರ್ಥ್ಯದ ವಾರಣಾ ಜಲಾಶಯದಲ್ಲಿ 14 ಟಿಎಂಸಿ ನೀರಿದೆ. ಎರಡೂ ಕಡೆ ಶೇ.40ರಷ್ಟು ನೀರಿದ್ದರೂ ಕರ್ನಾಟಕಕ್ಕೆ ನೀರು ಬಿಡಲು ಮಹಾರಾಷ್ಟ್ರ ಮನಸ್ಸು ಮಾಡುತ್ತಿಲ್ಲ. ತಿಕೋಟಾ ನೀರು ವಿತರಣಾ ಕೇಂದ್ರದಿಂದ ಜತ್ತ ತಾಲ್ಲೂಕಿಗೆ ನೀರು ಹರಿಸಲು 30ಕಿ.ಮೀ. ಕೊಳವೆ ಮಾರ್ಗ ಅಳವಡಿಸಬೇಕಿದೆ. 2019ರ ಪ್ರಕಾರ ಕಾಮಗಾರಿ ವೆಚ್ಚ 300 ಕೋಟಿ ರೂ. ಆಗಿತ್ತು. ಆದರೆ, ಈಗ ಅದರ ವೆಚ್ಚ ಮೂರು ಪಟ್ಟು ಹೆಚ್ಚಾಗಿದ್ದು, 1000 ಕೋಟಿ ರೂ. ಅನುದಾನ ಬೇಕಿದೆ. ಆ ವೆಚ್ಚವನ್ನು ಕರ್ನಾಟಕವೇ ಭರಿಸಬೇಕು ಎಂದು ಮಹಾರಾಷ್ಟ್ರ ಪಟ್ಟು ಹಿಡಿದಿರುವುದು ನೀರು ವಿನಿಮಯ ಒಪ್ಪಂದ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ ಎಂದು ಮಾಹಿತಿ ನೀಡಿದರು.