ವಿಜಯವಾಡ, ಜ 19 : ಆಂಧ್ರ ರಾಜಧಾನಿ ವಿಕೇಂದ್ರೀಕರಣದ ರಾಜ್ಯ ಸರ್ಕಾರದ ಪ್ರಸ್ತಾಪವನ್ನು ಬೆಂಬಲಿಸಿ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷ (ವೈಎಸ್ಆರ್ ಪಿ) ಭಾನುವಾರ ಇಲ್ಲಿ ಬೃಹತ್ ಮೆರವಣಿಗೆಯನ್ನು ಆಯೋಜಿಸಿತ್ತು.
ಧಾಮರ್ಿಕ ದತ್ತಿ ಸಚಿವ ವೆಲ್ಲಂಪಲ್ಲಿ ಶ್ರೀನಿವಾಸ್ ರಾವ್ ನೇತೃತ್ವದ ಮೆರವಣಿಗೆಯು ಬಿಆರ್ಟಿಎಸ್ ರಸ್ತೆಯ ಸೀತನ್ನಪೇಟದಲ್ಲಿ ಆರಂಭವಾಗಿ ಮಧುರಾ ನಗರದಲ್ಲಿ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಫಲಕಗಳು ಮತ್ತು ಫ್ಲೆಕ್ಸಿ ಬ್ಯಾನರ್ಗಳನ್ನು ಹಿಡಿದಿದ್ದರು. ವೈಎಸ್ಆರ್ಸಿಪಿ ಶಾಸಕರಾದ ಮಲ್ಲಾಡಿ ವಿಷ್ಣು, ಜೋಗಿ ರಮೇಶ್, ಕೊಲುಸು ಪಾರ್ಥಸಾರಥಿ ಸೇರಿದಂತೆ ಪಕ್ಷದ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀನಿವಾಸ ರಾವ್, ರಾಜ್ಯದ ಜನರು ರಾಜಧಾನಿ ವಿಕೇಂದ್ರೀಕರಣದ ಪರವಾಗಿದ್ದಾರೆ. ಇಂದಿನ ಬೃಹತ್ ಜನಸಂದಣಿಯು ಜನರ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ರಾಜಧಾನಿಯನ್ನು ವಿಕೇಂದ್ರೀಕರಿಸುವ ಮಸೂದೆಯನ್ನು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಲಾಗುವುದು ಮತ್ತು ಅಂಗೀಕರಿಸಲಾಗುವುದು ಎಂದು ಹೇಳಿದರು.
ರಾಜಧಾನಿ ನಗರವನ್ನು ಅಮರಾವತಿಯಿಂದ ವಿಶಾಖಪಟ್ಟಣಂಗೆ ಸ್ಥಳಾಂತರಿಸುವುದನ್ನು ವಿರೋಧಿಸಿ ರಾಜಧಾನಿ ಪ್ರದೇಶದ ರೈತರು ಆಯೋಜಿಸುತ್ತಿರುವ ಆಂದೋಲನಗಳು ತಾತ್ಕಾಲಿಕವಾಗಿದ್ದು, ಇದಕ್ಕೆ ಜನರ ಬೆಂಬಲವಿಲ್ಲ. ವೈಎಸ್ಆರ್ ಪಿ ಸರ್ಕಾರ ರಾಜ್ಯದ ಎಲ್ಲಾ 13 ಜಿಲ್ಲೆಗಳ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಬ್ರಾಹ್ಮಣ ನಿಗಮದ ಅಧ್ಯಕ್ಷರೂ ಆಗಿರುವ ವಿಷ್ಣು ಪುನರುಚ್ಚರಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ವಿಶ್ವ ದರ್ಜೆಯ ರಾಜಧಾನಿ ಹೆಸರಿನಲ್ಲಿ ರೈತರಿಂದ ಭೂಮಿಯನ್ನು ಕಸಿದುಕೊಂಡಿದ್ದಾರೆ. ಆದರೆ ಕಳೆದ ಐದು ವರ್ಷಗಳಲ್ಲಿ ರಾಜಧಾನಿ ನಿರ್ಮಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ರಾಜಧಾನಿ ವಿಕೇಂದ್ರೀಕರಣದ ಬಗ್ಗೆ ಟಿಡಿಪಿ ಜನರನ್ನು ದಾರಿ ತಪ್ಪಿಸುತ್ತಿದೆ.ಆದರೆ, ವೈಎಸ್ಆರ್ಸಿಪಿ ಸರ್ಕಾರ ರಾಜಧಾನಿ ಪ್ರದೇಶದ ರೈತರಿಗೆ ನ್ಯಾಯ ಒದಗಿಸಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.