ಮಹಾಲಿಂಗಪುರ ತಾಲೂಕು ಘೋಷಣೆಗೆ ಮಾನವ ಸರಪಳಿ: ಹೋರಾಟಕ್ಕೆ ಮೂರು ವರ್ಷ
ಮಹಾಲಿಂಗಪುರ 14: ತಾಲೂಕು ಕೇಂದ್ರ ಘೋಷಣೆಗಾಗಿ ಹೋರಾಟ ನಡೆದು ಮೂರು ವರ್ಷಗಳು ಸಂದಿವೆ. ಇದರ ಪ್ರಯುಕ್ತವಾಗಿ ಸೋಮವಾರ ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರು ಹೋರಾಟದ ಜೀವಂತಿಕೆಯನ್ನು ಪ್ರದರ್ಶನ ಮಾಡಿದರು.
ತಾಲೂಕು ಹೋರಾಟದಲ್ಲಿ ಮುಂಚೂಣಿಯಲ್ಲಿರುವ ರೈತ ಸಂಘ ಹಸಿರು ಸೇನೆಯ ಸಂಚಾಲಕ ಮತ್ತು ತಾಲೂಕು ಹೋರಾಟದ ಸದಸ್ಯ ಗಂಗಾಧರ ಮೇಟಿ ಮತ್ತು ಆಮ್ ಆದ್ಮಿ ಪಕ್ಷದ ಮುಖಂಡ ಅರ್ಜುನ್ ಹಲಗಿಗೌಡರ ಮಾತನಾಡಿ, ಮಹಾಲಿಂಗಪುರ ಎಲ್ಲ ಆಯಾಮಗಳಲ್ಲಿ ಭೌಗೋಳಿಕ ಹಿನ್ನೆಲೆಯನ್ನು ಹೊಂದಿರುವ ದೊಡ್ಡ ಪಟ್ಟಣವೆಂದು ಹೇಳಿದರು.
ಸುತ್ತಮುತ್ತಲಿನಲ್ಲಿರುವ ಗ್ರಾಮಗಳ ಜನ ಮಹಾಲಿಂಗಪುರ ತಾಲೂಕು ಕೇಂದ್ರವಾದಲ್ಲಿ ಆಡಳಿತಾತ್ಮಕವಾಗಿ ಜನತೆಗೆ ಅನುಕೂಲವಾಗುತ್ತದೆ. ಇದು ಇವತ್ತಿನದಲ್ಲ 50 ವರ್ಷಗಳ ಕೂಗು. ಇದಕ್ಕೆ ಹೆಚ್ಚಿನ ತಿವೃತೆ ದೊರಕಿರುವುದು ಎರಡು ದಶಕಗಳ ಈಚೆಯ ಕಾಲಮಾನವೆಂದರು.
ಏನೆಯಾಗಲಿ ಆರ್ಥಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕವಾಗಿ ಪ್ರಗತಿ ಹೊಂದಿರುವ, ಇನ್ನೂ ಹೆಚ್ಚಿನ ಪ್ರಗತಿಯತ್ತ ದಾಪುಗಾಲು ಹಾಕುತ್ತಿರುವ ಪಟ್ಟಣ.ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ತಾಲೂಕಿಗಾಗಿ ಹೋರಾಟ ಮುಂದುವರೆದಿದೆ ಎಂದು ಸುಧೀರ್ಘ ಹೋರಾಟದ ಮಾಹಿತಿ ನೀಡಿದರು.
ಬಾಗಲಕೋಟ ಜಿಲ್ಲೆಯಲ್ಲಿ ಮುಧೋಳ ದೊಡ್ಡ ತಾಲೂಕು. ಜಮಖಂಡಿ ತಾಲೂಕಿನಲ್ಲಿ ಅಧಿಕಾರ ವಿಕೇಂದ್ರೀಕರಣಗೊಂಡು ಮೂರು ನೂತನ ತಾಲೂಕುಗಳಾದಂತೆ ಇಲ್ಲಿಯೂ ಮಹಾಲಿಂಗಪುರ ತಾಲೂಕು ಕೇಂದ್ರ ಮಾಡುವ ಮೂಲಕ ಅಧಿಕಾರ ವಿಕೇಂದ್ರೀಕರಣ ಗೊಳಿಸಬೇಕೆಂದು ಜನರ ಅಭಿಪ್ರಾಯವನ್ನು ಮಂಡಿಸಿದರು.
ಸರ್ಕಾರ ತೆಗೆದುಕೊಳ್ಳುವ ಈ ಕ್ರಮದಿಂದ ಆಡಳಿತಾತ್ಮಕವಾಗಿ ಜನರಿಗೆ ಬಹಳ ಅನುಕೂಲವಾಗುತ್ತದೆ. ಎರಡು ದಶಕಗಳ ಹಿಂದೆ ಆಗಬೇಕಾಗಿರುವ ಕೆಲಸ ವಿಳಂಬವಾಗಿದೆ. ದಯವಿಟ್ಟು ಈ ಎಲ್ಲ ಆಯಾಮಗಳನ್ನು ಮುಂದಿಟ್ಟು ಸರ್ಕಾರ ಮಹಾಲಿಂಗಪುರ ನೂತನ ತಾಲೂಕು ಘೋಷಣೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳಿಂದ ನೂತನ ತಾಲೂಕು ರಚನಾ ವರದಿ ಕಂದಾಯ ಇಲಾಖೆಗೆ ತಲುಪಿದ್ದು, ಅಲ್ಲಿಂದ ಹಣಕಾಸು ಇಲಾಖೆಗೆ ರವಾನೆ ಯಾಗಬೇಕು.ಆದ್ದರಿಂದ ಕಂದಾಯ ಇಲಾಖೆ ಸೂಚಿಸುವ ಅಗತ್ಯ ದಾಖಲೆಗಳನ್ನು ಒದಗಿಸಲು ಉಪವಿಭಾಗಾಧಿಕಾರಿಗಳಿಗೆ ಹೋರಾಟಗಾರರು ಮನವಿ ಮಾಡಿದರು. ನೂತನ ತಾಲೂಕು ಮನವಿ ಸ್ವೀಕರಿಸಲು ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಸ್ಥಳಕ್ಕಾಗಮಿಸಿದರು.
ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ, ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಮಹಾಂತೇಶ ಹಿಟ್ಟಿನಮಠ,ಪುರಸಭೆ ಸದಸ್ಯರಾದ ಶೇಖರ ಅಂಗಡಿ, ಮುಷ್ತಾಕ ಚಿಕ್ಕೋಡಿ, ಅರ್ಜುನ ಹಲಗಿಗೌಡರ, ಮಾರುತಿ ಕರೋಶಿ, ಮನೋಹರ ಶಿರೋಳ, ಗಂಗಾಧರ ಮೇಟಿ, ಸಿದ್ದಪ್ಪ ಶಿರೋಳ, ವೀರೇಶ ಆಸಂಗಿ,ಹನಮಂತ ಜಮಾದಾರ, ಪರ್ಪ ಬ್ಯಾಕೋಡ, ಎಸ್ ಎಂ ಪಾಟೀಲ, ವಿಠ್ಠಲ ಢವಳೇಶ್ವರ, ಬಸಪ್ಪ ಚನ್ನಾಳ, ದುಂಡಪ್ಪ ಜಾಧವ, ಎಂ ಎಸ್ ಮಣ್ಣಯ್ಯನ್ನವರಮಠ,ಎಂ ಕೆ ಸಂಗಣ್ಣವರ,ಏ ಓಸ್ವಾಲ, ರಫೀಕ್ ಮಲದಾರ, ರಾಜೇಸಾಬ ಐನಾಪೂರ, ಆನಂದ ಬಂಡಿ, ವಿಜಯ ಸಬಕಾಳೆ,ರಾಜು ತೇರದಾಳ, ಸಿ ಆರ್ ಚನ್ನಾಳ, ಪ್ರಕಾಶ ಚನ್ನಾಳ ಇನ್ನೂ ಅನೇಕರಿದ್ದರು.