ವಿಜಯಪುರ 02: ಹಾಲುಮತ ಸಮುದಾಯದವರು ತಮ್ಮ ಶ್ರದ್ಧೆ, ಭಕ್ತಿ, ನಂಬಿಕೆ ಮತ್ತು ಸಂಸ್ಕೃತಿಯನ್ನು ನಿಸ್ವಾರ್ಥವಾಗಿ ಮುಂದುವರೆಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಗುರುವಾರ ಮುಸ್ಸಂಜೆ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ಶ್ರೀ ನಗರ ಸಿದ್ಧೇಶ್ವರ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ, ಕಳಸಾರೋಹಣ ಹಾಗೂ ಪ್ರಾಣ ಪ್ರತಿಷ್ಠಾಪನೆ, ಕುಂಭ ಮೇಳ, ಜಾತ್ರಾ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ಬರಬೇಕು ಎಂಬುದು ಬಾಬಾನಗರದ ಜನತೆಯೆ ಒತ್ತಾಸೆಯಾಗಿತ್ತು. ಆದರೆ, ಪೂರ್ವನಿಗದಿತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಿಎಂ ಬರಲು ಆಗಿಲ್ಲ. ಆದರೆ, ಮುಂಬರುವ ದಿನಗಳಲ್ಲಿ ಸಿಎಂ ಅವರನ್ನು ಆಹ್ವಾನಿಸಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.
ಶ್ರೀ ನಗರ ಸಿದ್ಧೇಶ್ವರ ಪುರಾತನ ದೇವಸ್ಥಾನವನ್ನು ರೈತರು ದುಡಿದ ಹಣ ಕೂಡಿಸಿ ಅಭಿವೃದ್ಧಿ ಮಾಡಿದ್ದಾರೆ. ಮಖಣಾಪುರ, ಅಮೋಘಸಿದ್ಧ, ಬಾಬಾನಗರ ಸೇರಿದಂತೆ ಇನ್ನುಳಿದ ಪುಣ್ಯಕ್ಷೇತ್ರಗಳನ್ನು ಧಾರ್ಮಿಕ ಪ್ರವಾಸೋದ್ಯಮ ತಾಣಗಳಾಗಿ ಅಭಿವೃದ್ಧಿ ಪಡಿಸಲಾಗುವುದು. ನಾವು ಭಂಡಾರದಲ್ಲಿ ಭಕ್ತಿಯನ್ನು ಕಾಣುತ್ತೇವೆ. ಭಗೀರಥನ ಆಶೀರ್ವಾದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಪ್ರೇರಣೆ ಹಾಗೂ ಸಿಎಂ ಎಸ್. ಸಿದ್ಧರಾಮಯ್ಯ ಸಹಕಾರದಿಂದ ಈ ಭಾಗದಲ್ಲಿ ನೀರಾವರಿ ಮಾಡಿದ್ದರಿಂದ ದ್ರಾಕ್ಷಿ ನಾಡು ಬಾಬಾನಗರದ ರೈತರು ಈಗ ಕಬ್ಬನ್ನೂ ಬೆಳೆಯುತ್ತಿದ್ದಾರೆ. ಕೆರೆ, ಹಳ್ಳಗಳಿಗೆ ನೀರು ಹರಿಸಿದ ಪರಿಣಾಮ ಅಂತರ್ಜಲ ಹೆಚ್ಚಾಗಿದೆ. ಭೂಮಿಗೆ ಬಂಗಾರದ ಬೆಲೆ ಬಂದಿದ್ದು ಯಾರೂ ಮಾರಾಟ ಮಾಡಬೇಡಿ. ಹೆಣ್ಣು ಮಕ್ಕಳಿಗೂ ಸಮಾನ ಶಿಕ್ಷಣ ನೀಡಿ, ಅವರೂ ಸಮಾಜದಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಲು ಸ್ಪೂರ್ತಿ ನೀಡಬೇಕು. ಬಸವಣ್ಣನವರು ಮತ್ತು ಸಿದ್ಧೇಶ್ವರ ಸ್ವಾಮೀಜಿಗಳ ಕನಸು ನನಸಾಗಲು ಎಲ್ಲರೂ ಆದರ್ಶವಾಗಿ ಬದುಕಬೇಕು. ಈ ಬಾರಿ ದೇವರ ಕೃಪೆಯಿಂದ ನಾಡಿನಾದ್ಯಂತ ಒಳ್ಳೆಯ ಮಳೆಯಾಗಿ ರೈತರು ಸಮೃದ್ಧ ಬೆಳೆ ಬೆಳೆದು ಆ ಬೆಳೆಗಳಿಗೆ ಬೆಲೆ ಸಿಗಲಿ ಎಂದು ಸಚಿವರು ಹೇಳಿದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಮಾತನಾಡಿ, ಎಂ. ಬಿ. ಪಾಟೀಲರ ಜೊತೆ ಸಿಎಂ ಎಸ್. ಸಿದ್ಧರಾಮಯ್ಯ ಇದ್ದಾರೆ. ಸಚಿವ ಎಂ. ಬಿ. ಪಾಟೀಲರು ಜಿಲ್ಲೆಯ ಜನರ ಜೀವನ ಬದಲಿಸಿದ್ದಾರೆ. ಅವರ ನೀರಾವರಿ ಕೆಲಸಗಳಿಂದ ಜನರಷ್ಟೇ ಅಲ್ಲ, ಪ್ರಾಣಿ, ಪಕ್ಷಿಗಳಿಗೂ ಉಪಯೋಗವಾಗಿದ್ದು, ಮೂಕಜೀವಿಗಳ ಆಶೀರ್ವಾದ ಸಚಿವರ ಮೇಲಿದೆ. ಮಹಿಳೆಯರು ಸಾಮಾಜಿಕ ಜಾಲತಾಣಗಳ ಬಗ್ಗೆ ಎಚ್ಚರದಿಂದಿರಬೇಕು. ಗೊತ್ತಿಲ್ಲದವರ ಸಂಗ ಮಾಡಬಾರದು. ರೀಲ್ಸ್ ಬದಲು ಓದಿನ ಕಡೆ ಗಮನ ಹರಿಸಿ. ಸಮುದಾಯದ ಎಲ್ಲರೂ ಓದಿ ಉನ್ನತ ಸ್ಥಾನ ಗಳಿಸಬೇಕು. ಅನ್ಯಾಯವಾದಾಗ ದನಿ ಎತ್ತಬೇಕು. ಹೆಣ್ಣು ಮಕ್ಕಳಿಗೆ ಆಸ್ತಿ, ಬಂಗಾರದ ಬದಲು ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.
ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಸಚಿವ ಎಂ. ಬಿ. ಪಾಟೀಲರು ಕೇವಲ ನೀರಾವರಿ ಮಾತ್ರವಲ್ಲ, ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಸಿ.ಎಸ್.ಆರ್ ಅನುದಾನ ನೀಡಿ ಈ ಭಾಗದಲ್ಲಿ ನೀರು, ಶಿಕ್ಷಣ, ಉದ್ಯೋಗಕ್ಕಾಗಿ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.
ಮಖಣಾಪುರ ಸೋಮಲಿಂಗೇಶ್ವರ ಗುರುಪೀಠದ ಶ್ರೀ ಸೋಮೇಶ್ವರ ಮಹಾಸ್ವಾಮೀಗಳು ಮಾತನಾಡಿ, ಸಚಿವ ಎಂ. ಬಿ. ಪಾಟೀಲ ನಾಡಿನ ಹೆಮ್ಮೆಯ ಪುತ್ರರಾಗಿದ್ದು, ಎಲ್ಲ ಸಮುದಾಯದ ಹಿತ ಕಾಪಾಡುತ್ತಿದ್ದಾರೆ. ಪೂಜೆಗೆ ಕಬ್ಬು ಸಿಗದ ಮಖಣಾಪುರದಲ್ಲಿ ಇವರು ಕೈಗೊಂಡ ನೀರಾವರಿ ಯೋಜನೆಗಳಿಂದಾಗಿ ಕೆರೆಗೆ ನೀರು ಬಂದು ಅಂತರ್ಜಲ ಹೆಚ್ಚಿದೆ. ವರ್ಷದಲ್ಲಿ ಆರು ತಿಂಗಳು ಕಾಲ ಕಬ್ಬು ಕಟಾವು ನಡೆಯುತ್ತಿದೆ. ಜನರ ಮೇಲೆ ಅವರ ಋಣವಿದೆ. ಅವರ ಉಪಕಾರ ಸ್ಮರಿಸಿ ಮಕ್ಕಳಿಗೆ ಶಿಕ್ಷಣದ ಜೊತೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸರೂರಿನ ರೇವಣಸಿದ್ಧೇಶ್ವರ ಹಾಲುಮತ ಗುರುಪೀಠದ ಜಗದ್ಗುರು ಶ್ರೀ ಸಿದ್ದಯ್ಯ ಮಹಾಸ್ವಾಮಿಗಳು, ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳು, ಕವಲಗುಡ್ಡದ ಸಿದ್ಧಯೋಗಿ ಅಮರೇಶ್ವರ ಮಹಾಸ್ವಾಮಿಗಳು, ಶ್ರೀ ನಗರಸಿದ್ದೇಶ್ವರ ಗದ್ದುಗೆ ಪೂಜಾರಿ ಶ್ರೀ ಹೊನ್ನಪ್ಪ ಶಿವರಾಯ ಪೂಜಾರಿ, ಚಿಕ್ಕಲಕಿಯ ಶ್ರೀ ಗುರುಮತ್ಯಾ, ಗದುಗಿನ ಚಿಕ್ಕನಂದಿಗೋಳ ಸಿದ್ದಾಶ್ರಮದ ಶ್ರೀ ಅಭಿನವ ವೀರೇಶ್ವರ ಗುರೂಜಿ, ಬಾಬಾನಗರ ಹಿರೇಮಠದ ಶ್ರೀ ರಾಚಯ್ಯ ಮಹಾಸ್ವಾಮಿಗಳು, ಬಳಬಟ್ಟಿ ಅಮಸಿದ್ಧ ಮಹಾರಾಜರು, ಮುಖಂಡರಾದ ಸಿದ್ದು ಗೌಡನವರ, ಈರನಗೌಡ ರುದ್ರಗೌಡರ, ಸೋಮನಾಥ ಬಾಗಲಕೋಟ, ಸೋಮನಾಥ ಕಳ್ಳಿಮನಿ, ಶಿಲ್ಪಾ ಕುದರಗೊಂಡ, ಬೀರಮಪ್ಪ ಜುಮನಾಳ, ತಾಸಗಾಂವ ಝಾನ್ಸಿ ಕೋಲ್ಡ್ ಸ್ಟೋರೇಜ್ ನ ಪಂಜಾಬರಾವ ಬಾಬುರಾವ ಮಾನೆ ಪಾಟೀಲ ಮತ್ತು ಬಾಬಾನಗರ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.