ಲಖನೌ, ಫೆ 26: ಜಾತಿ ಆಧರಿತ ಜನಗಣತಿಗೆ ಒತ್ತಾಯಿಸಿ ಸಮಾಜವಾದಿ ಪಕ್ಷದ ಸದಸ್ಯರು ಬುಧವಾರ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಕಲಾಪಗಳಿಗೆ ಅಡ್ಡಿಪಡಿಸಿದರು.
ಸದನದಲ್ಲಿ ಎಸ್ಪಿ ಸದಸ್ಯರು ಬಾವಿಗಿಳಿದು ಘೋಷಣೆ ಕೂಗಿದ ನಂತರ ಪ್ರಶ್ನೋತ್ತರ ಕಲಾಪವನ್ನು 50 ನಿಮಿಷಗಳ ಕಾಲ ಅಡ್ಡಿಪಡಿಸಲಾಯಿತು.
ಸದನ ಸಮಾವೇಶಗೊಳ್ಳುತ್ತಿದ್ದಂತೆ ಪ್ರತಿಪಕ್ಷದ ನಾಯಕ ರಾಮ್ ಗೋವಿಂದ್ ಚೌಧರಿ ಜಾತಿ ಆಧರಿತ ಜನಗಣತಿಯ ಬೇಡಿಕೆಯನ್ನು ಪ್ರಸ್ತಾಪಿಸಿದರು. ಇತರ ಹಿಂದುಳಿದ ವರ್ಗಗಳ(ಒಬಿಸಿ) ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಆದ್ದರಿಂದ ಏಪ್ರಿಲ್ನಿಂದ ಆರಂಭವಾಗಲಿರುವ ಹೊಸ ಜನಗಣತಿಯಲ್ಲಿ ಜಾತಿ ಗಣತಿಯನ್ನು ಸಹ ಸೇರಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ಹಕ್ಕುಗಳನ್ನು ನಿರಾಕರಿಸುತ್ತಿದೆ. ಆದರೂ ಹಿಂದುಳಿದ ವರ್ಗಗಳ ನಾಯಕನೆಂದು ಹೇಳಿಕೊಳ್ಳುತ್ತಿದೆ ಎಂದು ಚೌಧರಿ ಹೇಳಿದರು.
ಸ್ಪೀಕರ್ ನರೈನ್ ದೀಕ್ಷಿತ್ ಅವರಿಗೆ ಮಾತನಾಡಲು ಅವಕಾಶ ನೀಡದೆ ಎಸ್ ಪಿ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಯಲ್ಲಿ ಧರಣಿ ನಡೆಸಿದರು.
ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಖನ್ನಾ ಮಾತನಾಡಿ, ಜಾತಿ ಆಧಾರಿತ ಜನಗಣತಿಗೆ ಆದೇಶ ನೀಡುವ ಅಧಿಕಾರ ರಾಜ್ಯ ಸರ್ಕಾರ ಅಥವಾ ರಾಜ್ಯ ವಿಧಾನಸಭೆಗೆ ಇಲ್ಲ. ಎಸ್ಪಿ ಸದಸ್ಯರು ಬೇರೆ ವಿಷಯವಿಲ್ಲದೆ, ಈ ವಿಷಯವನ್ನು ಪ್ರಸ್ತಾಪಿಸಲು ಪ್ರಯತ್ನಿಸುತ್ತಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಷಯವೇ ಅಲ್ಲ ಎಂದು ಹೇಳಿದರು.