ಗದಗ 15: ಗದಗ ಹೊಸ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿದ ಗದಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಬಿ.ಬಿ. ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ ಸೇರಿದಂತೆ ಪ್ರಾಧಿಕಾರದ ಸದಸ್ಯರು ಬಸ್ ನಿಲ್ದಾಣದಲ್ಲಿ ಶುಚಿತ್ವ ಕಾಪಾಡುವುದು ಸೇರಿ ಪ್ರಯಾಣಿಕರಿಗೆ ಮೂಲಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡಿದರು. ಅಲ್ಲದೇ, ಪಂಚಗ್ಯಾರಂಟಿಗಳ ತಲುಪುತ್ತಿರುವ ಬಗ್ಗೆ ಪ್ರಯಾಣಿಕರಿಂದ ಮಾಹಿತಿ ಪಡೆದರು.
ಬಸ್ ನಿಲ್ದಾಣದ ತುಂಬೆಲ್ಲ ಜೇಡು ಕಟ್ಟಿರುವುದು, ಕಸ ಎಲ್ಲೆಂದರಲ್ಲಿ ಬಿಸಾಡಿರುವುದು, ಶುದ್ಧ ಕುಡಿಯುವ ನೀರು ವ್ಯವಸ್ಥೆ ಕಲ್ಪಿಸದಿರುವುದು, ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದಿರುವುದು ಹಾಗೂ ಶೌಚಾಲಯಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳದಿರುವ ಕುರಿತು ಪರೀಶೀಲನೆ ನಡೆಸಿ 15 ದಿನದೊಳಗಾಗಿ ಸರಿಪಡಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಗದಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ಗದಗ ಹೊಸ ಬಸ್ ನಿಲ್ದಾಣ ರಾಜ್ಯಕ್ಕೆ ಮಾದರಿಯಾಗಿದ್ದು, ಸ್ಚಚ್ಛತೆ ಮಾಯವಾಗಿದೆ. ಆದಷ್ಟು ಬೇಗ ಮಳಿಗೆಗಳ ಮೇಲೆ ತುಂಬಿರುವ ವೇಸ್ಟೇಜ್‌ಗಳನ್ನು ತೆಗೆಸಬೇಕು. ಅಂಗಡಿಕಾರರು ಕಸವನ್ನು ನಗರಸಭೆ ಕಸ ತುಂಬುವ ವಾಹನದಲ್ಲೆ ಹಾಕಲು ಕ್ರಮ ಕೈಗೊಳ್ಳಬೇಕು. ಬಸ್‌ಗಳಲ್ಲಿ ಹಾಗೂ ಬಸ್ ನಿಲ್ದಾಣದಲ್ಲಿ ಅಂಟಿಸಿರುವ ಅನಧಿಕೃತ ಪೋಸ್ಟರ್‌ಗಳನ್ನು ತೆರವುಗೊಳಿಸಬೇಕು. ಮುಂದಿನ 15 ದಿನದೊಳಗಾಗಿ ಗದಗ ಬಸ್ ನಿಲ್ದಾಣವನ್ನು ಹೊಸ ರೂಪಕ್ಕೆ ತರಬೇಕು ಎಂದು ಸೂಚಿಸಿದರು.
ಗದಗ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಸದಸ್ಯ ಅಶೋಕ ಮಂದಾಲಿ ಮಾತನಾಡಿ, ಗದಗ ಹೊಸ ಬಸ್ ನಿಲ್ದಾಣದ ತುಂಬೆಲ್ಲ ಜೇಡು ಕಟ್ಟಿಕೊಂಡಿದೆ. ಬಸ್ ಚಾಲಕರ, ನಿರ್ವಾಹಕರ ವಿಶ್ರಾಂತಿ ಗ್ರಹಗಳು ಕಸದಿಂದ ತುಂಬಿಕೊಂಡಿವೆ. ಶೌಚಾಲಯಗಳು ಸ್ವಚ್ಛತೆ ಇಲ್ಲದ ಕಾರಣ ಪ್ರಯಾಣಿಕರು ಬಳಸದಂತಾಗಿದೆ. ಪ್ರಯಾಣಿಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಲ್ಲದ ಕಾರಣ ನಿಂತುಕೊಳ್ಳಬೇಕಾದ ಪರಿಸ್ಥಿತಿಯಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಗದಗ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ಬಸ್ ನಿಲ್ದಾಣದ ಉಸ್ತುವಾರಿ ಅಧಿಕಾರಿಗಳು ಕೂಡಲೇ ಬಸ್ ನಿಲ್ದಾಣಕ್ಕೆ ಅಗತ್ಯವಾಗಿ ಬೇಕಾದ ಪರಿಕರಗಳನ್ನು ಪಟ್ಟಿ ಮಾಡಿ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಿಗೆ ಬೇಡಿಕೆ ಸಲ್ಲಿಸಿ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರೊಂದಿಗೆ ಮಾತನಾಡಿ ಗದಗ ಹೊಸ ಬಸ್ ನಿಲ್ದಾಣಕ್ಕೆ ವಿಶೇಷ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ಅಲ್ಲದೇ, ಗದಗ ಹೊಸ ಬಸ್ ನಿಲ್ದಾಣದ ಆವರಣದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಇಟ್ಟಿರುವುದನ್ನು ಗಮನಿಸಿ, ಬೇಸಿಗೆ ಕಾಲ ಆರಂಭವಾಗುತ್ತಿರುವುದರಿಂದ ನಿತ್ಯ 24 ಗಂಟೆಗಳ ಕಾಲ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗುವಂತೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಡಿ. ದೇವರಾಜ್ ಸೇರಿ ಗದಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ನೀಲಮ್ಮ ಬೋಳನವರ, ಈಶ್ವರ ಹುಣಶೀಕಟ್ಟಿ, ಸದಸ್ಯರಾದ ಶರೀಫ್ ಬಿಳೆಯಲಿ, ಮುಖಂಡರಾದ ಶಾಂತಣ್ಣ ಮುಳವಾಡ, ಚಾಂದಸಾಬ್ ಕೊಟ್ಟೂರ, ಅನಿಲ ಗರಗ, ಮೋಹನ ದೊಡ್ಡಕುಂಡಿ ಸೇರಿ ಅನೇಕರು ಇದ್ದರು.
ಪ್ರಯಾಣಿಕರ ಕುಂದುಕೊರತೆ ಆಲಿಕೆ
ಗದಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ ಸೇರಿದಂತೆ ಪ್ರಾಧಿಕಾರದ ಸದಸ್ಯರು ಗದಗ ಹೊಸ ಬಸ್ ನಿಲ್ದಾಣದಲ್ಲಿ ಸಂಚರಿಸಿ ಪ್ರಯಾಣಿಕರ ಕುಂದುಕೊರತೆಗಳನ್ನು ಆಲಿಸಿದರು. ಜೊತೆಗೆ ಪಂಚಗ್ಯಾರಂಟಿಗಳು ಪ್ರತಿಯೊಬ್ಬರಿಗೂ ತುಲುಪುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ವೇಳೆ ಮಹಿಳೆಯರು ಕಳೆದ ಎರಡು ತಿಂಗಳಿನಿಂದ ಗೃಹಲಕ್ಷ್ಮೀ ಯೋಜನೆ ಹಣ ಬಂದಿಲ್ಲ ಎಂದಾಗ ಮುಂದಿನ ತಿಂಗಳೊಳಗಾಗಿ ಬಾಕಿ ಕಂತಿನ ಹಣವನ್ನು ಪಾವತಿಸಲು ಸರಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು. ಇದೇ ವೇಳೆ ನರಗುಂದ ಭಾಗದ ಮಹಿಳೆಯೊಬ್ಬರು ಗೃಹಜ್ಯೋತಿ ಯೋಜನೆಯಡಿ ವಿದ್ಯುತ್ ಉಚಿತವಾಗಿಲ್ಲ ಎಂದು ಅಲವತ್ತುಕೊಂಡರು. ಆಗ ಗದಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಅವರು ತಕ್ಷಣ ಅವರ ಮಾಹಿತಿ ಪಡೆದುಕೊಂಡು ಅರ್ಜಿ ಹಾಕಿ ಉಚಿತ ಪಡೆಯಲು ಸಂಬಂಧಪಟ್ಟ ಸಿಬ್ಬಂದಿಗೆ ಸೂಚನೆ ನೀಡಿದರು.