ಜಿಲ್ಲಾಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರಗಳ ಸೇವೆ ಸ್ಥಗಿತ: ಸಂಸದ ಜಿಗಜಿಣಗಿ ಅಸಮಾಧಾನ

Janaushadhi Kendra services in district hospitals suspended: MP Jigajinagi unhappy

ವಿಜಯಪುರ: ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳ ಆವರಣದಲ್ಲಿ ಜನೌಷಧಿ ಕೇಂದ್ರಗಳ ಸೇವೆಯನ್ನು ಸ್ಥಗಿತಗೊಳಿಸುವ ನಿರ್ಣಯ ಕೈಗೊಂಡ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರದ ವಿರುದ್ಧ ಸಂಸದ ರಮೇಶ ಜಿಗಜಿಣಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.  

ಈ ಕುರಿತು ಪ್ರಕಟಣೆ ನೀಡಿದ ಅವರು, ಬಡ ರೋಗಿಗಳಿಗೆ ವರದಾನವಾಗಿರುವ ಈ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವ ನಿರ್ಧಾರ ಬಡವರ ವಿರೋಧಿಯಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಬರುವವರು ಬಡವರು ಮಾತ್ರ. ಬಡವರಿಗೆ ಅನುಕೂಲಕರವಾದ ಈ ಕೇಂದ್ರಗಳನ್ನು ವಿನಾಕಾರಣ ಸ್ಥಗಿತಗೊಳಿಸುವ ಅರ್ಥವೇನು ಸಚಿವ ದಿನೇಶ ಗುಂಡೂರಾವ್ ಶ್ರೀಮಂತರಿರಬಹುದು, ಅವರು ಜಿಲ್ಲಾ ಆಸ್ಪತ್ರೆಗೆ ಹೋಗುವುದಿಲ್ಲ. ಬಡವರ ವಿರೋಧಿ ನಿರ್ಧಾರ ಕೈಗೊಂಡಿರುವ ಸರ್ಕಾದ ಕ್ರಮ ಖಂಡನೀಯ. ಕೂಡಲೇ ಸರ್ಕಾರ ಈ ನಿರ್ಧಾರವನ್ನು ಹಿಂದಕ್ಕೆ ಪಡೆಯಬೇಕು ಎಂದು ಅವರು ಒತ್ತಾಯಿಸಿದರು.  

ಬೇರೆ ಮೆಡಿಕಲ್‌ಗಳಲ್ಲಿ 100ರೂ ಗೆ ಸಿಗುವಂತಹ ಓಷಧಿ ಜನೌಷಧಿ ಮಳಿಗೆಗಳಲ್ಲಿ 10ರೂಪಾಯಿಗೆ ಉತ್ತಮ ಗುಣಮಟ್ಟದಲ್ಲಿ ಸಿಗುತ್ತದೆ. ಆದರೆ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಸಚಿವರು ಮೆಡಿಕಲ್ ಮಾಫಿಯಾದವರ ಒತ್ತಡಕ್ಕೆ ಮಣಿದು ಹೀಗೆಲ್ಲ ಮಾಡುತ್ತಿದ್ದಾರೆಯೇ ಎಂದು ಜನಸಾಮಾನ್ಯರು ಮಾತನಾಡುತ್ತಿದ್ದಾರೆ. ಮಾತೆತ್ತಿದರೆ ಅಹಿಂದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರೇ ನೀವೆ ಕುಳಿತುಕೊಂಡು ಜನೌಷಧಿ ತೆಗೆಸುವ ಮೂಲಕ ಬಡವರಿಗೆ ಅನ್ಯಾಯ ಮಾಡುತ್ತಿದ್ದೀರಿ. ಇದು ಸರಿಯಾದ ಕ್ರಮವಲ್ಲ, ತಕ್ಷಣ ಈ ಆದೇಶವನ್ನು ಹಿಂಪಡೆಯ ಬೇಕು ಎಂದು ಜಿಗಜಿಣಗಿ ಅವರು ಆಗ್ರಹಿಸಿದರು.