ಹಾರೂಗೇರಿ 16: ಆರ್ಥಿಕವಾಗಿ ಹಿಂದುಳಿದವರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿಯೊಂದು ಸರ್ಕಾರಿ ಯೋಜನೆಗಳು ಮತ್ತು ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕೆಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.
ಪಟ್ಟಣದ ಬೀರ್ಪನ ಮಡ್ಡಿಯ ಶಾಸಕರ ಕಚೇರಿಯಲ್ಲಿ ಅಲಖನೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿಶೇಷಚೇತನರಿಗೆ ವಿಶೇಷ ಜಾಬ್ ಕಾರ್ಡ ವಿತರಿಸಿ ಅವರು ಮಾತನಾಡಿದರು.
ಫಲಾನುಭವಿಗಳು ಮಹಾತ್ಮ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಕುಡಚಿ ವಿಧಾನಸಭಾ ಮತಕ್ಷೇತ್ರದ ಪ್ರತಿಯೊಬ್ಬರಿಗೂ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ಮ ಮಾಡುವುದಾಗಿ ಶಾಸಕ ತಮ್ಮಣ್ಣವರ ಹೇಳಿದರು.
ಈ ವೇಳೆ 21ಜನ ವಿಶೇಷಚೇತನರಿಗೆ ವಿಶೇಷ ಜಾಬ್‌ಕಾರ್ಡ್‌ಗಳನ್ನು ವಿತರಿಸಲಾಯಿತು. ಕುಡಚಿ ಬ್ಲಾಕ್ ಅಧ್ಯಕ್ಷ ಪ್ರದೀಪ ಹಾಲ್ಗುಣಿ, ವರ್ಧಮಾನ ಶಿರಹಟ್ಟಿ, ಕಲ್ಮೇಶ ಕಾಂಬಳೆ, ಭೀಮು ಚೌಗಲಾ, ಸಚೀನ ಹಳಕಲ್ಲ ಹಾಗೂ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ನಿರ್ದೇಶಕರು, ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರು, ಸದಸ್ಯರು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.