ವಿಜಯಪುರ 16: ಜಾತಿ ಜನಗಣತಿಯಲ್ಲಿ ವಾಲ್ಮೀಕಿ ಸಮಾಜ ಸೇರಿದಂತೆ ಪರಿಶಿಷ್ಟ ಪಂಗಡದ ಜನ ಸಂಖ್ಯೆ ನೈಜತೆಗಿಂತ ಕಡಿಮೆ ತೋರಿಸಲಾಗಿದೆ ಇದು ದೋಷಪೂರಿತವಾದ ವರದಿಯಿಂದ ಸಮಾಜದಲ್ಲಿ ತಪ್ಪು ಸಂದೇಶ ಹೊಗುತ್ತದೆ. ರಾಜ್ಯದ ಯಾವುದೇ ಮನೆಗಳಿಗೆ ತೆರಳಿ ಗಣತಿ ಮಾಡದೆ ಜಾತಿ ಗಣತಿ ಮಾಡಿದ್ದಾದರೂ ಹೇಗೆ ಎಂಬುದು ರಾಜ್ಯದ ಪ್ರತಿಯೊಬ್ಬ ಜನಸಾಮಾನ್ಯರ ಪ್ರಶ್ನೆಯಾಗಿದೆ. ಇದೊಂದು ರಾಜಕೀಯ ಪ್ರೇರಿತ ವರದಿಯಾಗಿದೆ. ಕೂಡಲೇ ಸಮಾಜದಲ್ಲಿ ತಪ್ಪು ಸಂದೇಶ ಉಂಟುಮಾಡುತ್ತಿರುವ ಹಿಂದುಳಿದ ವರ್ಗದ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್ ಅವರ ಜಾತಿ ಗಣತಿ ವರದಿಯನ್ನು ಕೈ ಬಿಡಬೇಕೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಅಖಿಲ ಭಾರತೀಯ ವಾಲ್ಮೀಕಿ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ದೇಶದ ಜನಗಣತಿ ಪ್ರಕಾರ, ರಾಜ್ಯದಲ್ಲಿ 2001 ರಲ್ಲಿ ಎಸ್‌ಟಿ ಜನಸಂಖ್ಯೆ 34,63,86 (ಶೇ. 6.6 ಇತ್ತು). 2011 ರಲ್ಲಿ 42,48,987 (ಶೇ. 6.95) ಕ್ಕೆ ಏರಿತ್ತು. ಇತ್ತೀಚಿನ ಕಾಂತರಾಜ್ ವರದಿಯು ನಮ್ಮ ಸಂಖ್ಯೆ 42,81, 289 (ಶೇ.7.16) ಎಂದು ಹೇಳುತ್ತಿದೆ. ಸಮೀಕ್ಷೆಯು ದೋಷಗಳಿಂದ ಕೂಡಿದೆ. ಪ್ರತಿ ಮನೆಯನ್ನು ತಲುಪುವಲ್ಲಿ ಸಮೀಕ್ಷೆ ವಿಫಲವಾಗಿದೆ. ನಮ್ಮ ಸಮುದಾಯವನ್ನು ಈ ವರದಿ ಪ್ರತಿನಿಧಿಸುತ್ತದೆ. ಮೊದಲೇ ತುಳಿತಕ್ಕೊಳಗಾದ ಸಮಾಜ ಇದ್ದು. ಇದು ಸಾಮಾಜಿಕ ನ್ಯಾಯವಲ್ಲ. ಕಾಂತರಾಜ್ ವರದಿಯನ್ನು ಕೂಡಲೇ ಕೈಬಿಡಬೇಕು. ನ್ಯಾಯ ಒದಗಿಸಿಕೊಡಬೇಕು. ರಾಜ್ಯಾದ್ಯಂತ ನಮ್ಮ ಸಮುದಾಯದ ಜನಸಂಖ್ಯೆ ಅಂದಾಜು 80 ಲಕ್ಷ ಇದೆ. ಮನೆ ಮನೆಗೆ ತೆರಳಿ ಸರಿಯಾಗಿ ಗಣತಿಮಾಡಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಬಟಗಿ ಆಗ್ರಹಿಸಿದ್ದಾರೆ.