ಏ.15ರಂದು ಕನ್ನಡ ಭಾಷಾ ಪರೀಕ್ಷೆ- ಏ.16 ಹಾಗೂ 17ರಂದು ಸಾಮಾನ್ಯ ಪ್ರವೇಶ ಪರೀಕ್ಷೆ :
ವಿಜಯಪುರ ಏ. 11: ಹೊರನಾಡು ಮತ್ತು ಗಡಿನಾಡು ವಿದ್ಯಾರ್ಥಿಗಳಿಗೆ ಏ.15 ರಂದು ಕನ್ನಡ ಭಾಷಾ ಪರೀಕ್ಷೆ ಹಾಗೂ ವಿವಿಧ ವೃತ್ತಿಪರ ಕೋರ್ಸಗಳ ಪ್ರವೇಶಾತಿಗೆ ಇದೇ ಏಪ್ರಿಲ್ 16 ರಿಂದ 17 ರಂದು ಸಾಮಾನ್ಯ ಪ್ರವೇಶ ಪರೀಕ್ಷೆಗಳು (ಸಿಇಟಿ) ಜಿಲ್ಲೆಯ 33 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಯನ್ನು ಅತ್ಯಂತ ಅಚ್ಚುಕಟ್ಟು ಹಾಗೂ ವ್ಯವಸ್ಥಿತವಾಗಿ ನಡೆಸುವಂತೆ ಪರೀಕ್ಷೆಗೆ ನಿಯೋಜಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚಿಸಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಿ ಇ ಟಿ ಪರೀಕ್ಷಾ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯ ಒಟ್ಟು 33 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಲಿದ್ದು, ಸಾಮಾನ್ಯ ಪ್ರವೇಶ ಪರೀಕ್ಷೆಗೆ ಒಟ್ಟು 13,629 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
ಏ.15ರ ಮಂಗಳವಾರ ಬೆಳಿಗ್ಗೆ 10:30 ರಿಂದ 11:30ರವರೆಗೆ ಹೊರನಾಡ ಮತ್ತು ಗಡಿನಾಡ ಕನ್ನಡಿಗ ವಿದ್ಯಾರ್ಥಿಗಳಿಗಾಗಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಏ.16 ರಂದು ಬೆಳಿಗ್ಗೆ 10-30 ರಿಂದ 11-50ರವರೆಗೆ ಭೌತಶಾಸ್ತ್ರ ಹಾಗೂ ಮಧ್ಯಾಹ್ನ 2-30 ರಿಂದ 3-50ರವರೆಗೆ ರಸಾಯನಶಾಸ್ತ್ರ ಪರೀಕ್ಷೆ ಜರುಗಲಿವೆ. ಅದರಂತೆ ಏ.17ರಂದು ಬೆಳಿಗ್ಗೆ 10-30 ರಿಂದ 11-50ರವರೆಗೆ ಗಣಿತಶಾಸ್ತ್ರ ಹಾಗೂ ಮಧ್ಯಾಹ್ನ 2-30 ರಿಂದ 3-50ರವರೆಗೆ ಜೀವಶಾಸ್ತ್ರ ಪರೀಕ್ಷೆಗಳು ಜರುಗಲಿದ್ದು, ಪ್ರತಿ 24 ವಿದ್ಯಾರ್ಥಿಗಳಿಗೆ ಓರ್ವ ಕೊಠಡಿ ಮೇಲ್ವಿಚಾರಕರನ್ನು ನೇಮಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರೀಕ್ಷೆಗೆ ನಿಯೋಜಿತ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳಲ್ಲಿ ನಿಗದಿತ ವಿದ್ಯಾರ್ಥಿಗಳಿಗನುಗುಣವಾಗಿ ಸೂಕ್ತ ಆಸನ ವ್ಯವಸ್ಥೆ, ಪರೀಕ್ಷಾ ಕೊಠಡಿಯಲ್ಲಿ ಸರಿಯಾದ ಗಾಳಿ-ಬೆಳಕಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳು ಇರುವಂತೆ ನೋಡಿಕೊಳ್ಳಬೇಕು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ತಮಗೆ ನಿಗದಿಪಡಿಸಿದ ಆಸನಗಳಲ್ಲಿ ಕುಳಿತುಕೊಳ್ಳುವಂತೆ ನೋಡಿಕೊಳ್ಳಬೇಕು. ಕಡ್ಡಾಯವಾಗಿ ಪ್ರವೇಶ ಪತ್ರವನ್ನು ಪರೀಶೀಲನೆ ನಡೆಸಿ ಪ್ರವೇಶಾವಕಾಶ ಒದಗಿಸಬೇಕು. ಪರೀಕ್ಷೆ ಅವಧಿಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪರೀಕ್ಷಾ ಕೇಂದ್ರಗಳ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.
ಪ್ರತಿ ಪರೀಕ್ಷಾ ಕೇಂದ್ರಕ್ಕೆ ಓರ್ವ ವೀಕ್ಷಕರಂತೆ ಒಟ್ಟು 33 ವೀಕ್ಷಕರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಓರ್ವ ಉಪ ಮುಖ್ಯ ಅಧೀಕ್ಷಕರು, ಓರ್ವ ಪ್ರಶ್ನೆ ಪತ್ರಿಕೆ ಪಾಲಕರು ಮತ್ತು ಓರ್ವ ವಿಶೇಷ ಸ್ಥಾನಿಕ ಜಾಗೃತ ದಳ ಸದಸ್ಯರನ್ನು ನೇಮಕ ಮಾಡಲಾಗಿದೆ. ವೀಕ್ಷಕರು ತಮಗೆ ನಿಯೋಜಿಸಿದ ಪರೀಕ್ಷಾ ಕೇಂದ್ರಗಳಿಗೆ ಒಂದು ಗಂಟೆ ಮುಂಚಿತವಾಗಿ ಹಾಜರಾಗಿ, ಕೊಠಡಿ ಮೇಲ್ವಿಚಾರಕರನ್ನು ನಿಯೋಜಿಸಬೇಕು. ಪರೀಕ್ಷೆಗೆ ನಿಯೋಜಿತ ಎಲ್ಲ ವೀಕ್ಷಕರು, ಮೇಲ್ವಿಚಾರಕರು, ಉಪ ಮುಖ್ಯ ಅಧೀಕ್ಷಕರುಗಳು ವೀಕ್ಷಣಾಧಿಕಾರಿಗಳು, ಜಾಗೃತದಳದ ಅಧಿಕಾರಿಗಳು, ಪ್ರಶ್ನೆ ಪತ್ರಿಕೆ ಮಾರ್ಗಾಧಿಕಾರಿಗಳು, ಸಹ ಮುಖ್ಯ ಅಧಿಕ್ಷಕರು ಸೇರಿದಂತೆ ಪರೀಕ್ಷೆಗೆ ನಿಯೋಜಿತ ಎಲ್ಲ ಅಧಿಕಾರಿಗಳು ಯಾವುದೇ ಲೋಪಗಳಿಗೆ ಅವಕಾಶ ನೀಡದೇ ನಿಯಮಾನುಸಾರ ಜವಾಬ್ದಾರಿಯಿಂದ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವಂತೆ ಅವರು ಸೂಚನೆ ನೀಡಿದರು.
ಜಿಲ್ಲೆಯ ಎಲ್ಲ 33 ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಯಾವುದೇ ಲೋಪಗಳಿಗೆ ಅವಕಾಶ ನೀಡದೇ ಯಶಸ್ವಿಯಾಗಿ ಪರೀಕ್ಷೆ ನಡೆಸುವಂತೆ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ,ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ ಹೊಸಮನಿ, ಖಜಾನೆ ಇಲಾಖೆ ಉಪನಿರ್ದೇಶಕರಾದ ಹಣಮಂತ ಕಾಲತಿಪ್ಪಿ ಸೇರಿದಂತೆ ಪರೀಕ್ಷೆಗೆ ನಿಯೋಜಿತ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.