ಬೆಂಗಳೂರು 07: ಬೆಂಗಳೂರು: ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ 2025-26ನೇ ಸಾಲಿನ ಬಜೆಟ್ ಮಂಡಿಸಿದ್ದು, ಗ್ಯಾರಂಟಿ ಯೋಜನೆಗಳಿಗೆ ಬರೋಬ್ಬರಿ 51 ಸಾವಿರ ಕೋಟಿ ರೂ. ನೀಡುವುದರ ಜೊತೆಗೆ ಹತ್ತು ಹಲವು ಹೊಸ ಘೋಷಣೆಗಳನ್ನೂ ಮಾಡಿದ್ದಾರೆ.
ಇಂದು ವಿಧಾನಸಭೆಯಲ್ಲಿ 4,09,549 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಅವರು ಇದರಲ್ಲಿ 19,262 ಕೋಟಿ ರೂ. ರಾಜಸ್ವ ಕೊರತೆಯನ್ನು ಉಲ್ಲೇಖಿಸಿದ್ದಾರೆ.
ರಾಜ್ಯದ ರಸ್ತೆ ಮತ್ತು ಮೂಲಸೌಕರ್ಯದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಶುಕ್ರವಾರ ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.
ಈ ಯೋಜನೆಯ ಮೂಲಕ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ರಸ್ತೆ, ಸಣ್ಣ ನೀರಾವರಿ, ಹಾಗೂ ಮೂಲಸೌಕರ್ಯ ಒದಗಿಸಲು 8,000 ಕೋಟಿ ರೂ. ನೀಡಲಾಗುವುದು ಎಂದು ತಿಳಿಸಿದ್ದಾರೆ.
ಸರ್ಕಾರವು ತನ್ನ ಆಡಳಿತ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಹಾಗೂ ಪಾರದರ್ಶಕತೆಯನ್ನು ಹೆಚ್ಚಿಸಲು ಬದ್ಧವಾಗಿದೆ.
ಈ ನಿಟ್ಟಿನಲ್ಲಿ ವಿವಿಧ ತೆರಿಗೆ ಸಂಗ್ರಹಣಾ ಇಲಾಖೆಗಳಾದ ವಾಣಿಜ್ಯ ತೆರಿಗೆ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ, ಸಾರಿಗೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ʻಬಿʼ ಮತ್ತು ʻಸಿʼ ವೃಂದಗಳಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ಜಾರಿಗೊಳಿಸಲಾಗುವುದು. ವಿವಿಧ ನಿಯಮಗಳ ಸರಳೀಕರಣದ ಮೂಲಕ ಆಡಳಿತದಲ್ಲಿ ದಕ್ಷತೆಯನ್ನು ಹೆಚ್ಚಿಸಲಾಗುವುದು ಎಂದು ಬಜೆಟ್ ನಲ್ಲಿ ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಘೋಷಿಸಿದ ಸಿಎಂ, ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗಾಗಿ ದೇವನಹಳ್ಳಿಯವರೆಗೆ ಮೆಟ್ರೋ ರೈಲು ಯೋಜನೆಯ ವಿಸ್ತರಣೆ ಸೇರಿದಂತೆ ಬಂಪರ್ ಕೊಡುಗೆ ನೀಡಿದ್ದಾರೆ.
ಅತಿಥಿ ಶಿಕ್ಷಕರು, ಉಪನ್ಯಾಸಕರಿಗೆ ಮಾಸಿಕ ಆದಾಯ ತಲಾ ರೂ.2 ಸಾವಿರ ಹೆಚ್ಚಳ, ಶಾಲೆಗಳಲ್ಲಿ ಕೆಲಸ ಮಾಡುವ ಅಡುಗೆ ಸಿಬ್ಬಂದಿಗೆ ಮಾಸಿಕ ಗೌರವದಿಂದ ತಲಾ ರೂ.1 ಸಾವಿರ ಹೆಚ್ಚಳ.
ಮಧ್ಯಾಹ್ನ ಉಪಹಾರ ಯೋಜನೆಯಡಿ ರಾಜ್ಯದ 16,347 ಶಾಲೆಗಳ ಅಡುಗೆಮನೆ ಆಧುನೀಕರಣ ಕಾರ್ಯ ಮತ್ತು ಹೊಸ ಪಾತ್ರೆ ಪರಿಕರಗಳನ್ನು ಒದಗಿಸಲು ರೂ.46 ಕೋಟಿ . ವೆಚ್ಚ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಕ್ಷರ ಆವಿಷ್ಕಾರ ಯೋಜನೆ ಅಡಿ ರೂ.200 ಕೋಟಿ ವೆಚ್ಚದಲ್ಲಿ ಆಯ್ದ 50 ಶಾಲೆಗಳನ್ನು ಸುಸಜ್ಜಿತ ಕೆ.ಪಿ.ಎಸ್. ಶಾಲೆಗಳನ್ನಾಗಿ ಉನ್ನತೀಕರಣ.
ರಾಜ್ಯದಲ್ಲಿ ರೂ.2500 ಕೋಟಿ ವೆಚ್ಚದಲ್ಲಿ 500 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣ. ಶಾಲಾ ಮಕ್ಕಳಿಗೆ ವಾರದಲ್ಲಿ 6 ದಿನ ಮೊಟ್ಟೆ, ಬಾಳೆಹಣ್ಣು ನೀಡಲು ರೂ.1,500 ಕೋಟಿ ಮೀಸಲು.
ಹೀಗೆ ಎಲ್ಲ ಇಲಾಖೆಗಳಿಗೂ ಅನುಕೂಲಕ್ಕೆ ಅನುಗುಣವಾಗಿ ಬಜೆಟ್ ಹಂಚಿಕೆ ಮಾಡಲಾಗಿದೆ. ಹೊಸ ಯೋಜನೆ, ನೂತನ ಘೋಷಣೆಗಳೊಂದಿಗೆ ಸರ್ಕಾರ ಸಮಗ್ರ ರಾಜ್ಯದ ಅಭಿವೃದ್ಧಿಯ ಗುರಿ ಹೊಂದಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಹೆಚ್ಚಿದ ಸಾಲದ ಹೊರೆ
2025-26ನೇ ಸಾಲಿನಲ್ಲಿ ಅಂದಾಜು 1,16,000 ಕೋಟಿ ರೂ. ಸಾಲದ ಮೊರೆ ಹೋಗಲು ಸಿಎಂ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. 2024-25 ಸಾಲಿನಲ್ಲಿ 1,05,246 ಕೋಟಿ ರೂ. ಸಾಲದ ಮೊರೆ ಹೋಗಲಾಗಿತ್ತು. ಆ ಮೂಲಕ ಈ ಬಾರಿ 10,754 ಕೋಟಿ ರೂ. ಹೆಚ್ಚುವರಿ ಸಾಲದ ಮೊರೆ ಹೋಗಲಾಗಿದೆ.
ಈ 1,16,000 ಕೋಟಿ ರೂ. ಸಾಲದ ಪೈಕಿ ಕೇಂದ್ರ ಸರ್ಕಾರದಿಂದ 7,000 ಕೋಟಿ ರೂ., ಬಹಿರಂಗ ಮಾರುಕಟ್ಟೆಯಿಂದ 1,05,000 ಕೋಟಿ ಹಾಗೂ ಎಲ್ಐಸಿ, ಎನ್ಎಸ್ಎಸ್ಎಫ್, ಎನದ ಸಿಡಿಸಿ ಮತ್ತು ಆರ್ ಐಡಿಎಫ್ ಗಳಿಂದ 4,000 ಕೋಟಿ ರೂ.ಸಾಲ ಪಡೆಯಲು ಅಂದಾಜಿಸಲಾಗಿದೆ. ಆ ಮೂಲಕ 2025-26ರ ಅಂತ್ಯಕ್ಕೆ ರಾಜ್ಯದ ಒಟ್ಟು ಹೊಣೆಗಾರಿಕೆಗಳು 7,64,655 ಕೋಟಿ ರೂ.ಗಳು ಎಂದು ಅಂದಾಜಿಸಲಾಗಿದ್ದು, ಜಿ.ಎಸ್.ಡಿ.ಪಿ ಯ ಶೇ. 24.91ರಷ್ಟಿದೆ.