ಗದಗ 12: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿರುವ ನಮಗೆ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದ ಜ್ಞಾನ ಅತ್ಯಂತ ಅವಶ್ಯವಾಗಿದೆ. ನಮ್ಮಿಂದ ಚುನಾಯಿತರಾದ ಪ್ರತಿನಿಧಿಗಳ ಸಭೆಯಾಗಿರುವ ಶಾಸಕಾಂಗವು ಕಾನೂನುಗಳನ್ನು ರಚಿಸುವ ಸರ್ಕಾರದ ಶಾಖೆಯಾಗಿದೆ. ಈ ಕಾನೂನುಗಳ ಮೂಲಕ ನ್ಯಾಯಾಂಗವು ವಿವಾದಗಳು, ಭಿನ್ನಾಭಿಪ್ರಾಯಗಳನ್ನು ನಿರ್ಣಯಿಸುವ ಮತ್ತು ಕಾನೂನು ಪ್ರಕರಣಗಳಲ್ಲಿ ಕಾನೂನನ್ನು ವ್ಯಾಖ್ಯಾನಿಸುವ, ಸಮರ್ಥಿಸುವ ಮತ್ತು ಅನ್ವಯಿಸುವ ಕಾರ್ಯ ಮಾಡುತ್ತದೆ. ಕಾರ್ಯಾಂಗವು ಶಾಸಕಾಂಗ ಜಾರಿಗೊಳಿಸಿದ ಕಾನೂನುಗಳನ್ನು ಕಾರ್ಯಗತಗೊಳಿಸುವ ಮತ್ತು ರಾಜ್ಯದ ಇಚ್ಛೆಯನ್ನು ಪೂರೈಸುತ್ತದೆ ಎಂದು ರಾಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ಹುಸೇನಭಾಷಾ ಹೇಳಿದರು. ಅವರು ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕವು ಹಮ್ಮಿಕೊಂಡಿರುವ ವಾರ್ಷಿಕ ವಿಶೇಷ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ದೈನಂದಿನ ಬದುಕಿನಲ್ಲಿ ಕಾನೂನು’ ಕುರಿತು ಮಾತನಾಡುತ್ತ, ಬದುಕನ್ನು ಯಶಸ್ವಿಗೊಳಿಸಲು ಮತ್ತು ಇಂದಿನ ಆಧುನಿಕ ಜಗತ್ತಿನ ಪೈಪೋಟಿ ಜೀವನ ಎದುರಿಸಲು ಕಾನೂನು ಅಸ್ತ್ರವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿ ಗಣಿತಶಾಸ್ತ್ರ ಪ್ರಾಧ್ಯಾಪಕ ಪ್ರೊ. ಬಸವರಾಜ ಬಳಗಾನೂರಮಠ ಅವರು ನಮ್ಮ ದೈನಂದಿನ ಬದುಕಿಗೆ ಅವಶ್ಯವಿರುವ ಕಾನೂನುಗಳ ಸಾಮಾನ್ಯ ಪರಿಚಯ ನಮಗಿದ್ದಾಗ ಸಹಜವಾಗಿ ತಪ್ಪುಗಳು ಕಡಿಮೆಯಾಗುತ್ತವೆಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಬಸವರಾಜ ಅಂಬಿಗೇರ ಅವರು ಇತ್ತೀಚೆಗೆ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ತಂತ್ರಜ್ಞಾನಗಳ ಬಳಕೆ ಸಂದರ್ಭದಲ್ಲಿ ತುಂಬಾ ಜಾಗರೂಕರಾಗಿರಬೇಕೆಂದು ಹೇಳಿದರು. ಎನ್.ಎಸ್.ಎಸ್. ಸಂಯೋಜಕ ಡಾ. ಅಪ್ಪಣ್ಣ ಹಂಜೆ ಅವರು ವಿದ್ಯಾರ್ಥಿಗಳು ನಮ್ಮ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಕುರಿತು ಓದಿಕೊಳ್ಳಬೇಕೆಂದು ಹೇಳಿದರು. ಸಹ ಸಂಯೋಜಕ ಪ್ರೊ. ವಿಜಯಕುಮಾರ ಎಸ್. ಅವರು ಅತಿಥಿ ಮಹನೀಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಯಂ ಸೇವಕರು ಕಾರ್ಯಕ್ರಮ ನಡೆಸಿಕೊಟ್ಟರು.