ಲಾಕ್‌ಡೌನ್: ವೈನ್, ಜಾಮ್, ಟೊಮೆಟೊ ಸಾಸ್‍ ತಯಾರಿಸಲು ರೈತರಿಗೆ ಐಸಿಎಆರ್ ಸಲಹೆ

ನವದೆಹಲಿ, ಏಪ್ರಿಲ್ 8,ಲಾಕ್‌ಡೌನ್ ಅವಧಿಯಲ್ಲಿ ಮೌಲ್ಯವರ್ಧಿತ ಉತ್ಪನ್ನಗಳಾದ ವೈನ್, ಜಾಮ್, ಜೆಲ್ಲಿ, ಸ್ಕ್ವ್ಯಾಷ್, ಟೊಮೆಟೊ ಸಾಸ್‌ ಮತ್ತಿತರ ಪದಾರ್ಥಗಳನ್ನು ತಯಾರಿಸುವಂತೆ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ರೈತರಿಗೆ ಸಲಹೆ ಮಾಡಿದೆ ಐಸಿಎಆರ್ ರೈತರಿಗೆ ಮತ್ತು ಕೃಷಿ ಕ್ಷೇತ್ರಕ್ಕೆ ರಾಜ್ಯವಾರು ಮಾರ್ಗಸೂಚಿಗಳು ಮತ್ತು ಸಲಹೆಗಳನ್ನು ನೀಡಿದೆ.ಕೃಷಿ ಉತ್ಪನ್ನಗಳಾದ ಸ್ಟ್ರಾಬೆರಿ ಮಾರಾಟದಲ್ಲಿ ತೊಂದರೆ ಎದುರಿಸುತ್ತಿರುವ ರೈತರಿಗೆ ವೈನ್, ಜಾಮ್, ಜೆಲ್ಲಿಗಳು, ಸ್ಕ್ವ್ಯಾಷ್‌ನಂತಹ ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ಪಾದಿಸಲು ಮೇಘಾಲಯ ರಾಜ್ಯಕ್ಕೆ ಸಲಹೆ ನೀಡಲಾಗಿದೆ. ಶುಂಠಿ, ಅರಿಶಿನ, ಮೆಕ್ಕೆಜೋಳ, ಸೌತೆಕಾಯಿ ಕೊಯ್ಲಿನ ವೇಳೆ ಕೂಲಿಕಾರ್ಮಿಕರು ಸಾಮಾಜಿಕ ಅಂತರ ಅನುಸರಿಸುವಂತೆ ನೋಡಿಕೊಳ್ಳಬೇಕು ಎಂದೂ ಸೂಚಿಸಲಾಗಿದೆ.
ಮಾರಾಟದಲ್ಲಿ ತೊಂದರೆ ಅನುಭವಿಸುತ್ತಿರುವ ಟೊಮೆಟೊ ಬೆಳೆಗಾರರು ಉತ್ಪನ್ನವನ್ನು ಶೈತ್ಯಾಗಾರಗಳಲ್ಲಿ ಸಂಗ್ರಹಿಸಬೇಕು ಇಲ್ಲವೇ ಅದರಿಂದ ಸಾಸ್‍ ಉತ್ಪಾದಿಸಬೇಕು ಎಂದು ಐಸಿಎಆರ್ ಸೂಚಿಸಿದೆ. ಕೊಯ್ಲು ಮಾಡಲು ಸಿದ್ಧವಾಗಿರುವ ಅಣಬೆಯು ಹಳ್ಳಿಯಲ್ಲಿ ಮಾರಾಟವಾಗದಿದ್ದರೆ ತೇವಾಂಶ ಶೇ 5 ರಿಂದ 8ರಷ್ಟು  ಕಡಿಮೆಯಾಗುವವರೆಗೆ ಸೂಕ್ತವಾದ ಒಣಗಿಸುವ ಬುಟ್ಟಿಯಲ್ಲಿ ಇಡಬಹುದಾಗಿದೆ ಎಂದು ನಾಗಾಲ್ಯಾಂಡ್‌ನ ರೈತರಿಗೆ ಸಲಹೆ ನೀಡಲಾಗಿದೆ. ಕೊಯ್ಲು ಮಾಡಿದ ಮರದ ಹುರಳಿಕಾಯಿಯನ್ನು ಉಪ್ಪಿನಕಾಯಿ ತಯಾರಿಕೆಗೆ ಇಲ್ಲವೇ ಅದರ ಬೀಜಗಳನ್ನು ಹೊದಿಕೆಯೊಂದಿಗೆ ಒಣಗಿಸುವ ಮೂಲಕ ಸಂರಕ್ಷಿಸಬಹುದಾಗಿದೆ ಎಂದು ಸಲಹೆ ಮಾಡಲಾಗಿದೆ.