ದೇವರಹಿಪ್ಪರಗಿ 17: ಸಮುದಾಯ ಭವನಗಳಲ್ಲಿ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು, ಅದರ ಸದ್ಬಳಕೆಗೆ ಮುಂದಾಗಬೇಕು ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು.
ತಾಲೂಕಿನ ಜಾಲವಾದ ಗ್ರಾಮದಲ್ಲಿ ಗುರುವಾರದಂದು ಪ್ರಗತಿ ಕಾಲೋನಿ ಯೋಜನೆ ಅಡಿಯಲ್ಲಿ ಸುಮಾರು 50 ಲಕ್ಷ ರೂ ವೆಚ್ಚದ ಡಾ.ಬಿ.ಆರ್.ಅಂಬೇಡ್ಕರ ಭವನ ಹಾಗೂ 18ಲಕ್ಷ ರೂ ವೆಚ್ಚದ ಅಂಗನವಾಡಿ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು. ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಸಂವಿಧಾನವನ್ನು ರಚಿಸಿ ಎಲ್ಲ ಜಾತಿ, ಧರ್ಮ, ಭಾಷೆಯ ಜನರು ಸಮಾನತೆಯಿಂದ ಬಾಳುವ ಅವಕಾಶ ಮಾಡಿಕೊಟ್ಟಿದ್ದಾರೆ. ಗ್ರಾಮದಲ್ಲಿ ನಿರ್ಮಾಣಗೊಳ್ಳಲಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ಗ್ರಂಥಾಲಯ, ಜಾಗೃತಿ ಕಾರ್ಯಕ್ರಮಗಳು ಮುಂತಾದ ಕಾರ್ಯಗಳನ್ನು ನಡೆಸಲು ತಾವೆಲ್ಲರೂ ಸಹಕರಿಸಬೇಕು. ಇದು ಜ್ಞಾನದ ಕೇಂದ್ರವಾಗಬೇಕು ಎಂದು ಸಲಹೆ ನೀಡಿದರು. ಅದೇ ರೀತಿ ಅಂಗನವಾಡಿ ಕಟ್ಟಡದ ಸದ್ಬಳಕೆ ಹಾಗೂ ಮಕ್ಕಳ ಕಲಿಕೆಗೆ ಪೂರಕ ಶಿಕ್ಷಣ ನೀಡುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹೆಚ್ಚು ಶ್ರಮವಹಿಸಬೇಕು ಎಂದು ಸಲಹೆ ನೀಡಿದರು.
ಭೂಮಿ ಪೂಜೆ ನೆರವೇರಿಸಿದ ಶಾಸಕರನ್ನು ಗ್ರಾಮದ ಪ್ರಮುಖರು, ಗಣ್ಯರು ಹಾಗೂ ಅಧಿಕಾರಿಗಳಿಂದ ಸನ್ಮಾನಿಸಿ, ಗೌರವಿಸಲಾಯಿತು.
ಸಿಂದಗಿ ಸಿಡಿಪಿಒ ಶಂಭುಲಿಂಗಯ್ಯ ಹಿರೇಮಠ, ಲ್ಯಾಂಡ್ ಆರ್ಮಿ ಇಲಾಖೆ ಎಇಇ ರಾಜಶೇಖರ, ಗ್ರಾ.ಪಂ ಅಧ್ಯಕ್ಷರ ಪ್ರತಿನಿಧಿ ಆದ ಲಕ್ಷ್ಮಣ ಕೆಂಗುಟಗಿ,ಪಿಡಿಒ ಬಲವಂತ ಗಾವಡೆ, ಎಸ್ ಡಿಎ ಜಿ.ಎಂ.ಮ್ಯಾಗೆರಿ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು, ಗ್ರಾ.ಪಂ ಸರ್ವ ಸದಸ್ಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.