ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಅಂಜುಮನ್ ಕಮಿಟಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ
ಹೊಸಪೇಟೆ 12: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೊಳಿಸಲಿರುವ ವಕ್ಫ್ ತಿದ್ದುಪಡಿ ಮಸೂದೆ 2025 ನ್ನು ವಿರೋಧಿಸಿ ಸ್ಥಳೀಯ ಅಂಜುಮನ್ ಕಮಿಟಿ ನೇತೃತ್ವದಲ್ಲಿ ಸಾವಿರಾರು ಮುಸ್ಲಿಂ ಸಮುದಾಯದವರು ನಗರದ ತಹಶೀಲ್ದಾರರ ಕಚೇರಿ ಹತ್ತಿರ ರಸ್ತೆ ತಡೆ ನಡೆಸಿ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಸ್ಥಳೀಯ ಅಂಜುಮನ್ ಕಮಿಟಿಯ ಅಧ್ಯಕ್ಷರು ಹಾಗು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎನ್. ಮೊಹಮ್ಮದ್ ಇಮಾಮ್ ನಿಯಾಜಿ ರವರು ಮಾತನಾಡಿ ಮಸ್ಲಿಂ ಕಾನೂನಿನ್ವಯ ವಕ್ಫ್ ಎಂದರೆ ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ದೇವರ ಹೆಸರಿನಲ್ಲಿ ಅರ್ಿಸಲಾದ ಆಸ್ತಿಯಾಗಿದೆ. ವಕ್ಫ್ ಆದಾಯವನ್ನು ಮಸೀದಿಗಳ ನಿರ್ವಹಣೆ, ಸಮುದಾಯದ ಬಡ ಜನರ ಅಭಿವೃದ್ಧಿಗೆ ಬಳಸಲಾಗುತ್ತದೆ, ಬಿಜೆಪಿ ಧಾರ್ಮಿಕ ಆಧಾರದ ಮೇಲೆ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ. ಆದರೆ, ಅದರ ಯೋಜನೆಗಳು ಫಲ ನೀಡುವುದಿಲ್ಲ ಎಂದು ಹೇಳಿದರು. ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರಮೋದಿ, ಅಮಿತ್ ಷಾ ವಿರುದ್ಧ ಪ್ರತಿಭಟನಕಾರರು ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿಗಳ ಮುಖಾಂತರ ಗೌರವಾನ್ವಿತ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಧೀಶರಿಗೆ ಮನವಿ ಸಲ್ಲಿಸಿದರು.
ಸಾವಿರಾರು ಮಂದಿ ಪ್ರತಿಭಟನಕಾರರು ನಗರದ ಈದ್ಗಾ ಮೈದಾನದಿಂದ ಮೆರವಣೆಗೆ ಆರಂಭಿಸಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ತಹಶಿಲ್ದಾರರ ಕಚೇರಿ ಮುಂದೆ ರಸ್ತೆ ತಡೆದು ಕೆಂದ್ರ ಸರ್ಕಾರವು ವಕ್ಫ ತಿದ್ದುಪಡಿ ಮಸೂದೆ ಹಿಂಪಡೆಯುವಂತೆ ಆಗ್ರಹಿಸಿದರು
.ಪ್ರತಿಭಟನೆಯಲ್ಲಿ ಅಂಜುಮನ್ ಕಮಿಟಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್.ಎನ್. ಮೊಹಮ್ಮದ್ ಇಮಾಮ್ ನಿಯಾಜಿ, ಅಂಜುಮನ್ ಪದಾಧಿಕಾರಿಗಳಾದ ಬಿ. ಅನ್ಸರ್ ಭಾಷಾ, ಅಬೂಬ್ ಕಾರ್, ಕೆ. ಮೋಸೀನ್, ಸದ್ಧಾಂ ಹುಸೇನ್, ಫೈರೋಜ್ ಖಾನ್, ಗುಲಾಂ ರಸೂಲ್, ಡಾ. ದರ್ವೇಶ್, ಸಮಾಜದ ಮುಖಂಡರಾದ ಬಡಾವಲಿ, ಅಬ್ದುಲ್ ಖಾದರ ರಫಾಯಿ, ಅಸ್ಲಾಂ ಮಳಿಗಿ, ಪ್ರಗತಿಪರ ಸಂಘಟನೆ ಮುಖಂಡರಾದ ಜಂಭಯ್ಯ ನಾಯಕ್, ಕರುಣಾನಿಧಿ ಸಾವಿರಾರು ಮುಸ್ಲಿಂ ಭಾಂಧವರು ಭಾಗವಹಿಸಿದ್ದರು.