ನೂತನ ವಕ್ಪ ಕಾಯ್ದೆ ಖಂಡಿಸಿ ಬೃಹತ್ ಪ್ರತಿಭಟನಾ ರಾ್ಯಲಿ
ಜಮಖಂಡಿ 04: ಕೇಂದ್ರ ಸರ್ಕಾರದ ವಕ್ಪ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಾಲೂಕು ಸಮಿತಿ ನೇತೃತ್ವದಲ್ಲಿ ಮುಸ್ಲಿಂ ಸಮಾಜದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಗರದ ಶಾ ಆಲಂ ಗೇಟ್‌ನಿಂದ ಪ್ರಮುಖ ಬೀದಿಗಳಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ವಕ್ಪ್ ನೂತನ ತಿದ್ದುಪಡಿ ಕಾಯ್ದೆಯನ್ನು ವಾಪಸ್ಸು ಪಡೆಯಬೇಕು ಎಂದು ಘೊಷಣೆ ಕೂಗುತ್ತಾ ದೇಸಾಯಿ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ವಾಹನ ಸಂಚಾರ ತಡೆದು ತಹಸೀಲ್ದಾರ ಸದಾಶಿವ ಮಕ್ಕೋಜಿ ಅವರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು. ಮೌಲಾನಾ ಅಲ್ತಾಫಖಾನ ಮದನಿ ಮಾತನಾಡಿ, ನಮ್ಮ ದೇಶದ ವಕ್ಫ್ ಕಾಯಿದೆಗೆ ಶತಮಾನದ ಇತಿಹಾಸವಿದೆ, ಮುಸ್ಲಿಂ ಸಮುದಾಯದ ಬಡವರ ಮತ್ತು ದುರ್ಬಲ ವರ್ಗದವರ ಪ್ರಯೋಜನಕ್ಕಾಗಿ ಅಲ್ಹಾಹನ ಹೆಸರಿನಲ್ಲಿ ದಾನ ಮಾಡುವ ಆಸ್ತಿಗಳೆ ವಕ್ಫ್ ಆಸ್ತಿಗಳಾಗಿವೆ. ಮುಸ್ಲಿಂರನ್ನು ಗುರಿಯಾಗಿಸಿಕೊಂಡು ವಕ್ಫ್ ಕಾಯಿದೆಯ ತಿದ್ದುಪಡಿಯ ಹೆಸರಿನಲ್ಲಿ ಕೇಂದ್ರ ಸರ್ಕಾರ ಇಡೀ ವಕ್ಪ್ ಆಸ್ತಿಯನ್ನು ಸರ್ಕಾರದ ಹಿಡಿತಕ್ಕೆ ತೆಗೆದುಕೊಳ್ಳುವ ವ್ಯವಸ್ಥಿತವಾದ ಪಿತೂರಿ ನಡೆಸಿದೆ ಎಂದರು. ಕಳೆದ ಹತ್ತು ವರ್ಷಗಳಲ್ಲಿ ದೇಶದ ಮುಸ್ಲೀಂರ ಸಾಮಾಜಿಕ ಅಭಿವೃದ್ಧಿಗೆ ಚಿಂತಿಸದ ಕೇಂದ್ರ ಬಿಜೆಪಿ ಸರ್ಕಾರ ಪೌರತ್ವ ಕಾಯಿದೆ, ಹಿಜಾಬ, ಹಲಾಲ ಹೆಸರಿನಲ್ಲಿ ಮುಸ್ಲೀಮರನ್ನು ಸಮಾಜದಿಂದ ದೂರ ತಳ್ಳುವ ಪ್ರಯತ್ನ ಮಾಡುತ್ತಿದೆ. ವಕ್ಫ ತಿದ್ದುಪಡಿಕಾಯಿದೆ ಅವೈಜ್ಞಾನಿಕವಾಗಿದ್ದು, ವಕ್ಪ್‌ಗೆ ಆಸ್ತಿಯನ್ನು ದಾನ ಮಾಡಲು ಕನಿಷ್ಠ ಐದು ವರ್ಷ ಇಸ್ಲಾಂ ಧರ್ಮ ಆಚರಣೆ ಮಾಡಿರಬೇಕೆಂಬ ನಿಯಮ ಸರಿಯಲ್ಲ, ಕಾಯಿದೆಯು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ. ಪ್ರಜಾ ಪ್ರಭುತ್ವದಲ್ಲಿ ಸಂವಿಧಾನಿತ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದರು. ಮುಸಲ್ಮಾನರ ಮೂಲಭೂತ ಹಕ್ಕುಗಳನ್ನು ಮೊಟುಕುಗೊಳಿಸುವ ಮತ್ತು ಧಾರ್ಮಿಕ ಆಚರಣೆಗಳಿಗೆ ಧಕ್ಕೆತರುವ ಅಂಶಗಳನ್ನು ಕಾಯಿದೆಯಲ್ಲಿ ಸೇರಿಸಿದ್ದಾರೆ, ಮುಸ್ಲಿಂ ಸಮುದಾಯದ ಸಂಸದರನ್ನೇ ಹೊಂದಿರದ ಆಡಳಿತ ಪಕ್ಷವು ನಮ್ಮ ಸಮುದಾಯದ ಹಿತವನ್ನು ಹೇಗೆ ಕಾಯುತ್ತೇವೆ ಎಂದು ಪ್ರಶ್ನಿಸಿದರು. ಹಾಪೀಜ್ ಅಬ್ದುಲ್ ಹಮೀದ್, ಮೌಲಾನಾ ಇಸಾ, ಮೌಲಾನಾ ಅನೀಸ್, ಮೌಲಾನಾ ಮುಫ್ತಿ ಹಾರೂನ, ಮೌಲಾನಾ ಫಾರೂಕ್, ಮೌಲಾನಾ ಮುಜಮ್ಮೀಲ, ಮೌಲಾನಾ ಸರ್ಫರಾಜ, ಇಲಾಹಿ ಝೆಂಡೆ, ತೌಫೀಕ ಪಾರ್ಥನಳ್ಳಿ, ಝಾಕೀರಹುಸೇನ್ ನಧಾಪ, ನಜೀರ ಕಂಗನೋಳ್ಳಿ, ದಿಲಾವರ ಶಿರೋಳ, ಬದ್ರೋದ್ದಿನ ಪೆಂಡಾರಿ, ಅನ್ವರ ಮೋಮಿನ, ಮುಬಾರಕ ಅಪರಾದ, ನಸರೋದ್ದಿನ ಜಮಾದಾರ, ಮೌಲಾಸಾಬ ನದಾಫ, ಖೀಜರ ಪೆಂಡಾರಿ, ಅಬ್ದುಲ ಜಮಾದಾರ, ರಾಜು ಮಸಳಿ, ಅಬೂಬಕರ ಕುಡಚಿ, ಸಲೀಂ ಅವಟಿ, ನಬಿಸಾಬ ಪೆಂಡಾರಿ, ಬಿಲಾಲ ಖಾಟಿಕ, ಸಾಧೀಕ ಬಂಟನೂರ, ಅಯ್ಯುಬ ಗದಗ ಇತರರು ಇದ್ದರು.