ಹಾರೂಗೇರಿ 15: ಭೂತಾಯಿಯ ಒಡಲಲ್ಲಿರುವ ಪ್ರೀತಿ, ವಾತ್ಸಲ್ಯ, ಮಮತೆ, ಕರುಣೆ ಎಲ್ಲವೂ ತಾಯಿಯ ಮಡಿಲಲ್ಲಿದೆ. ಗುಡಿ-ಗುಂಡಾರಗಳಲ್ಲಿನ ಮೂರ್ತಿಗಳನ್ನು ಪೂಜೆ ಮಾಡುವುದಕ್ಕಿಂತಲೂ ತಾಯಿ ಸೇವೆ ಶ್ರೇಷ್ಠವಾದುದು ಎಂದು ಚಿಮ್ಮಡ ಗ್ರಾಮದ ವಿರಕ್ತಮಠದ ಪೂಜ್ಯಶ್ರೀ ಪ್ರಭು ಮಹಾಸ್ವಾಮಿಗಳು ಹೇಳಿದರು.
ಸಮೀಪದ ಚಿಮ್ಮಡ ಗ್ರಾಮದ ಬಸವನಿಲಯ ಫಾರ್ಮಹೌಸ್‌ನಲ್ಲಿ ಮಂಗಳವಾರ ನಡೆದ ಲಿಂ.ಕಮಲಮ್ಮ ನಿಂಗಪ್ಪ ಹೆಗ್ಗಳಗಿ ಅವರ ನಾಲ್ಕನೆಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಕಮಲಮ್ಮನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದ ಅವರು ಸಮಾಜದ ಒಳಿತಿಗಾಗಿ ಮಾಡಿದ ಕಾರ್ಯಗಳೆಲ್ಲವೂ ಭಗವಂತನಿಗೆ ಸಲ್ಲುತ್ತವೆ. ಮಾತೋಶ್ರೀ ಲಿಂ.ಕಮಲಮ್ಮನವರು ತಮ್ಮ ಜೀವನವನ್ನು ಉತ್ತಮ ಕಾರ್ಯಗಳು ಮತ್ತು ಪರೋಪಕಾರಕ್ಕಾಗಿ ಮೀಸಲಿಟ್ಟ ಬಂಗಾರದಂತ ಮನಸ್ಸುಳ್ಳವರಾಗಿದ್ದರು ಎಂದು ಚಿಮ್ಮಡ ಶ್ರೀಗಳು ಹೇಳಿದರು.
ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಟಿ.ಪಿ.ಮುನ್ನೋಳ್ಳಿ ಮಾತನಾಡುತ್ತ ಸ್ವಾರ್ಥಿಗಳೇ ತುಂಬಿರುವ ಈ ಜಗದಲ್ಲಿ ಕಮಲಮ್ಮನವರ ಪರೋಪಕಾರ, ನಿಸ್ವಾರ್ಥ ಸೇವಾಮನೋಭಾವ, ಸರಳತೆ ಇತರರಿಗೆ ಮಾದರಿಯಾಗಿದೆ. ಜಗತ್ತಿನಲ್ಲಿ ಸರ್ವಶ್ರೇಷ್ಠವಾದ ಗುರು, ಮಾರ್ಗದರ್ಶಕ, ಹಿತೈಸಿಯೆಂದರೆ ತಾಯಿ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಸಮಾಜಕ್ಕೆ ಕೊಡುಗೆಯನ್ನಾಗಿ ಮಾಡಿದ್ದಾರೆ ಎಂದರು.
ವಿಶ್ರಾಂತ ಪ್ರಾಚಾರ್ಯ ಪ್ರೊ.ಈರಣ್ಣ ಕೊಕಟನೂರ ಮಾತನಾಡಿ ತಂದೆ-ತಾಯಿಗಳ ನಿಸ್ವಾರ್ಥ ಸೇವೆಗೆ ಜಗತ್ತಿನಲ್ಲಿ ಯಾವುದೂ ಸರಿಸಾಟಿಯಿಲ್ಲ. ಮಕ್ಕಳಿಗೆ ಉನ್ನತ ಶಿಕ್ಷಣ, ಸಂಸ್ಕಾರ ನೀಡಿ, ಸಮಾಜ ಸೇವೆಗಾಗಿ ಅವರನ್ನು ತೊಡಗಿಸಿದ ಮಹಾತಾಯಿ ಕಮಲಮ್ಮ ಅವರು ನಿಸ್ವಾರ್ಥ ಪ್ರೇಮ ಪವಿತ್ರವಾದುದು ಎಂದು ಹೇಳಿದರು.
ವಿಶ್ರಾಂತ ಇಂಜೀನಿಯರ ನಿಂಗಪ್ಪ ಮಲ್ಲಪ್ಪ ಹೆಗ್ಗಳಗಿ, ಟಿ.ಪಿ.ಮುನ್ನೋಳಿ, ವಿಜಯಕುಮಾರ ಹೆಗ್ಗಳಗಿ, ವಿನೋದಕುಮಾರ ಹೆಗ್ಗಳಗಿ, ಚನ್ನಪ್ಪ ಸಲಬಣ್ಣವರ, ಬಸವರಾಜ ಪಲ್ಲೇದ, ಹನುಮಂತಪ್ಪ ಹೆಗ್ಗಳಗಿ, ರಾವಸಾಬ ಹೆಗ್ಗಳಗಿ, ಶಂಕರ ಹೆಗ್ಗಳಗಿ, ಕಲ್ಲಪ್ಪ ಕೊಕಟನೂರ, ರಮೇಶ ಕೊಕಟನೂರ, ಕಿರಣ ಝುಲಪಿ, ಶಿವಲೀಲಾ ಕೊಕಟನೂರ, ರಾಘು ಕೊಕಟನೂರ, ಮಹಾಂತೇಶ ದರೂರ, ಭೀಮು ಕೊಕಟನೂರ, ಅರುಣ ಝುಲಪಿ ಹಾಗೂ ಮೊದಲಾದ ಗಣ್ಯರು ಉಪಸ್ಥಿತರಿದ್ದರು.