ಲಖನೌ, ಮೇ 20,ಕೋವಿಡ್-19 ಮಾರಣಾಂತಿಕ ಸೋಂಕು ವಿರುದ್ಧ ಹೋರಾಟ ನಡೆಸುತ್ತಿರುವ ಕ್ಲಿಷ್ಟಕರ ಸನ್ನಿವೇಶದಲ್ಲಿ ವಲಸೆ ಕಾರ್ಮಿಕರ ಸಮಸ್ಯೆ ಪರಿಹರಿಸುವ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ "ಅಸಹ್ಯಕರವಾಗಿ" ನಡೆದುಕೊಳ್ಳುತ್ತಿವೆ ಎಂದು ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ರಾಷ್ಟ್ರೀಯ ಪಕ್ಷಗಳ ವಿರುದ್ಧ ಕಿಡಿಕಾರಿದರು.ರಾಜಕೀಯ ಪ್ರಚಾರಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ವಲಸೆ ಕಾರ್ಮಿಕರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಹರಿಹಾಯ್ದರು."ವಲಸೆ ಕಾರ್ಮಿಕರನ್ನು ತಮ್ಮ-ತಮ್ಮ ಊರುಗಳಿಗೆ ಕಳುಹಿಸುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಕೊಳಕು ರಾಜಕೀಯವನ್ನು ಮಾಡುತ್ತಿವೆ. ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮತ್ತು ಪ್ರತ್ಯಾರೋಪ ಮಾಡುತ್ತಾ ಮುಖ್ಯ ಸಮಸ್ಯೆಯ ಗಮನವನ್ನು ಬೇರೆಡೆ ಸೆಳೆಯುತ್ತಿವೆ. ಇದು ಅತ್ಯಂತ ಅನಿರೀಕ್ಷಿತ," ಎಂದು ಮಾಯಾವತಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
"ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ತಮ್ಮ ಕೈಲಾದಷ್ಟು ಸಹಾಯವನ್ನು ವಲಸೆ ಕಾರ್ಮಿಕರಿಗೆ ಮಾಡುತ್ತಿದ್ದಾರೆ. ಆದರೆ, ಅವರು ಯಾವುದೇ ರೀತಿಯ ಪ್ರಚಾರವನ್ನು ಪಡೆಯುತ್ತಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ಹಾದಿಯಲ್ಲಿನ ಕೊಳಕು ರಾಜಕೀಯದ ರೀತಿ ನಮ್ಮ ಪಕ್ಷ ಮಾಡುತ್ತಿಲ್ಲ," ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ."ಕಾಂಗ್ರೆಸ್ ಪಕ್ಷಕ್ಕೆ ನಿಜವಾಗಿಯೂ ಸಹಾಯ ಮಾಡುವ ಮನಸಿದ್ದರೆ ಶ್ರಮಿಕ್ ರೈಲುಗಳಿಗೆ ವಲಸೆ ಕಾರ್ಮಿಕರಿಗಾಗಿ ಟಿಕೆಟ್ ಬುಕ್ ಮಾಡಿ ಅಥವಾ ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿ ವಲಸೆ ಕಾರ್ಮಿಕರಿಗೆ ಬಸ್‌ಗಳ ವ್ಯವಸ್ಥೆ ಕಲ್ಪಿಸಿ," ಎಂದು ಮಾಯವತಿ ಕಾಂಗ್ರೆಸ್ ಪಕ್ಷವನ್ನು ಬಲವಾಗಿ ಟೀಕಿಸಿದರು.