ಜ್ಞಾನೋತ್ಸವದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ವಿಜಯಪುರ 28: ಶೈಕ್ಷಣಿಕ ಹಂತದಲ್ಲಿ ವಿದ್ಯಾರ್ಥಿಗಳು ಬದ್ಧತೆ, ಶ್ರದ್ಧೆಯಿಂದ ಅಧ್ಯಯನ ಮಾಡಿದಲ್ಲಿ ಭವಿಷ್ಯದಲ್ಲಿ ನಿಶ್ಚಿತ ಗುರಿ ಈಡೇರಿಸಿಕೊಳ್ಳಲು, ನೀರೀಕ್ಷಿತ ಸಾಧನೆ ಮಾಡಲು ಸಾಧ್ಯ ಎಂದು ನಗರದ ಎಸ್.ಎಸ್.ಬಿ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ಮಹೇಂದ್ರ ಕಾಪಸೆ ಅಭಿಪ್ರಾಯಪಟ್ಟರು.
ನಗರದ ಪ್ರತಿಷ್ಟಿತ ಶೈಕ್ಷಣಿಕ ಸಂಸ್ಥೆಯಾದ ಶ್ರೀಶರಣಬಸವೇಶ್ವರ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜ್ಞಾನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 2024-25ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ 24 ವಿದ್ಯಾರ್ಥಿಗಳು ಮತ್ತು ಎಇಇ ಪರೀಕ್ಷೆಯಲ್ಲಿ ನಾಲ್ವರು ಸಾಧಕ ವಿದ್ಯಾರ್ಥಿಗಳು, ಸಾಧಕ ಮಕ್ಕಳ ಪೋಷಕರು, ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಗುರಿ ಸಾಧಿಸುವ ಛಲ ಇದ್ದವರಿಗೆ ಅಂದುಕೊಂಡುದನ್ನು ಪಡೆಯುವುದು ಅಸಾಧ್ಯವೇನಲ್ಲ. ಆದರೆ ಇದಕ್ಕಾಗಿ ಸತತ ಪರಿಶ್ರಮ, ಬದ್ಧತೆ, ಶ್ರದ್ಧೆ ಬೇಕು ಎಂದು ಕಿವಿಮಾತು ಹೇಳಿದರು.
ಸಂಸ್ಥೆಯ ಕಾರ್ಯಕಾರಿ ನಿರ್ದೇಶಕಿ ಸಂಪ್ರದಾ ಪಾಟೀಲ ಮಾತನಾಡಿ, ಬಲಿಷ್ಠ ಭಾರತ ನಿರ್ಮಾಣ ಮಾಡುವುದು ಪ್ರಸಕ್ತ ಸಂದರ್ಭದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿ ಇಬ್ಬರಿಂಧ ಮಾತ್ರ ಸಾಧ್ಯವಿದೆ. ಶ್ರದ್ಧೆಯ ಶಿಷ್ಯ, ಮಾದರಿ ಗುರು ಇದ್ದಲ್ಲಿ ನೈತಿಕ ಮೌಲ್ಯಗಳ, ಸುಶೀಕ್ಷಕ್ಷಿತ ಮಾನವೀಯ ಸಮಾಜ ನಿರ್ಮಾಣ ಸಾಧ್ಯ ಎಂದರು.
ಸಂಸ್ಥೆಯ ಸಲಹಾ ಸಮಿತಿಯ ಅಧ್ಯಕ್ಷರಾದ ಎಸ್.ಕೆ.ಪಾಟೀಲ, ಫಾರ್ಮಸಿ ಕಾಲೇಜಿನ ಪ್ರಾಚಾರ್ಯರಾದ ಶಿವಕುಮಾರ ಹೂಗಾರ, ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರಾದ ಈರಣ್ಣ ಶಿರಾಳಶೆಟ್ಟಿ ಮತ್ತು ಪಿ.ಯು.ಸಿ ಕಾಲೇಜಿನ ಪ್ರಾಚಾರ್ಯರಾದ ಎಸ್.ಪ್ರಜ್ವಲ್ ವೇದಿಕೆ ಮೇಲೆ ಉಪಸ್ಥಿತರಿದ್ದರು.