ಸನ್ಮಾನದ ಮೂಲಕ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗೆ ಕೃತಜ್ಞತೆ ಸಮರ್ಪಣೆ

Minister Lakshmi Hebbalkar expressed gratitude through a felicitation ceremony

ಪ್ರಗತಿಯತ್ತ ಬೆಳಗಾವಿ ಗ್ರಾಮೀಣ ಕ್ಷೇತ್ರ: 3 ಪಂಚಾಯಿತಿಗಳು ಮೇಲ್ದರ್ಜೆಗೆ

ಬೆಳಗಾವಿ 17:  ರಾಜ್ಯದ ಕಾಂಗ್ರೆಸ್ ಸರಕಾರ 2 ವರ್ಷ ಪೂರೈಸುತ್ತಿರುವ ಹೊತ್ತಿನಲ್ಲಿ ಪ್ರಗತಿಯತ್ತ ಕರ್ನಾಟಕ ಹೆಸರಿನಲ್ಲಿ ಸಮಾವೇಶ ಆಯೋಜಿಸಲಾಗುತ್ತಿದೆ. ಇದೇ ವೇಳೆ 3 ಗ್ರಾಮ ಪಂಚಾಯಿತಿಗಳು ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೇರುವ ಮೂಲಕ ಬೆಳಗಾವಿ ಗ್ರಾಮೀಣ ಕ್ಷೇತ್ರವೂ ಪ್ರಗತಿಯತ್ತ ಮತ್ತೊಂದು ದಾಪುಗಾಲು ಇಟ್ಟಿದೆ.  

ಈ ಹಿನ್ನೆಲೆಯಲ್ಲಿ ಎಲ್ಲ ಪಂಚಾಯಿತಿ ವ್ಯಪ್ತಿಯಲ್ಲಿ ಸಂಭ್ರಮ ಮನೆಮಾಡಿದೆ. ಇದಕ್ಕೆ ಕಾರಣೀಕರ್ತರಾದ ಕ್ಷೇತ್ರದ ಶಾಸಕರೂ ಆಗಿರುವ, ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ಮೂರೂ ಪಂಚಾಯಿತಿಗಳ ಪ್ರತಿನಿಧಿಗಳು ಸನ್ಮಾನಿಸುವ ಮೂಲಕ, ಕೃತಜ್ಞತೆ ಸಲ್ಲಿಸಿದರು. ಹಿರೇಬಾಗೇವಾಡಿ, ಬೆನಕನಹಳ್ಳಿ ಹಾಗೂ ಹಿಂಡಲಗಾ ಗ್ರಾಮಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೇರಿಸಲು ಈಚೆಗೆ ನಡೆದ ಸಚಿವಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಮೂರೂ ಪಂಚಾಯಿತಿಗಳ ಬಹುದಿನಗಳ ಬೇಡಿಕೆಯ ಮೇರೇಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಈ ಕುರಿತ ಪ್ರಸ್ತಾವನೆಯನ್ನು ಸಚಿವಸಂಪುಟದ ಮುಂದಿಟ್ಟಿದ್ದರು. ಸತತ ಪ್ರಯತ್ನದ ಮೂಲಕ ಅನುಮೋದನೆ ಪಡೆಯುವಲ್ಲಿ ಸಚಿವರು ಯಶಸ್ವಿಯಾಗಿದ್ದಾರೆ. ಈ ಬೆಳವಣಿಗೆಯಿಂದಾಗಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ  ಮತ್ತು ಮೂರೂ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿಗೆ ಶರವೇಗ ಸಿಕ್ಕಿದಂತಾಗಿದೆ. ಇಲ್ಲಿನ ಭೂಮಿಯ ಬೆಲೆ ಹೆಚ್ಚಾಗಲಿದೆ, ಉತ್ತಮ ಮೂಲಭೂತ ಸೌಲಭ್ಯಗಳು ಸಿಗಲಿವೆ.   ಉದ್ಯೋಗಾವಕಾಶಗಳು ಹೆಚ್ಚಾಗಲಿವೆ, ಕೇಂದ್ರ, ರಾಜ್ಯ ಸರಕಾರಗಳ ಅನುದಾನ ಪಡೆಯಲು ಅವಕಾಶವಾಗುತ್ತದೆ, ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗಲಿವೆ.  

ಈ ಹಿನ್ನೆಲೆಯಲ್ಲಿ ಜನರು ಸಂಭ್ರಮಿಸುತ್ತಿದ್ದಾರೆ.ಶನಿವಾರ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಗೃಹ ಕಚೇರಿಗೆ ಆಗಮಿಸಿದ ಹಿರೇಬಾಗೇವಾಡಿ, ಹಿಂಡಲಗಾ ಮತ್ತು ಬೆನಕನಹಳ್ಳಿ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಗ್ರಾಮಗಳ ಪ್ರಮುಖರು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ಸನ್ಮಾನಿಸುವ ಮೂಲಕ ಕೃತಜ್ಞತೆ ಸಲ್ಲಿಸಿದರು. ಅಭಿವೃದ್ಧಿ ಎಂದರೆ ಏನೆಂದೇ ಅರಿಯದ ನಮಗೆ ಕಳೆದ 7 ವರ್ಷಗಳಿಂದ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತಿದೆ. ಲಕ್ಷ್ಮೀ ಹೆಬ್ಬಾಳಕರ್ ಅವರು ಶಾಸಕರಾದ ನಂತರ ಸರಕಾರವೇ ನಮ್ಮ ಮನೆಬಾಗಿಲಿಗೆ ಬಂದ ರೀತಿ ಅನಿಸುತ್ತಿದೆ. ನೀವು ಇದೇ ರೀತಿ ಮುಂದುವರಿಯಿರಿ, ಸದಾ ನಿಮ್ಮ ಜೊತೆಗೆ ನಾವಿರುತ್ತೇವೆ ಎಂದು, ಈ ವೇಳೆ ಮಾತನಾಡಿದ ಪ್ರಮುಖರು ಭರವಸೆ ನೀಡಿದರು. 

ಇಡೀ ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಾನು ಹೆಜ್ಜೆ ಇಟ್ಟಿದ್ದೇನೆ. ಒಂದೊಂದಾಗಿ ಎಲ್ಲವೂ ಈಡೇರಲಿವೆ. ಇದಕ್ಕೆ ಜನರ ಸಹಕಾರ ಮುಖ್ಯ. ಮುಂದಿನ ದಿನಗಳಲ್ಲಿ ಹಲವಾರು ಪ್ರಮುಖ ಯೋಜನೆಗಳು ಕಾರ್ಯಗತವಾಗಲಿವೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಈ ಸಂದರ್ಭದಲ್ಲಿ ತಿಳಿಸಿದರು. ನಾನು ಶಾಸಕಿಯಾಗುವ ಮುನ್ನ, 7 ವರ್ಷದ ಹಿಂದೆ ಈ ಕ್ಷೇತ್ರ ಹೇಗಿತ್ತು, ಈಗ ಹೇಗಾಗಿದೆ ಎನ್ನುವುದನ್ನು ನೀವೆಲ್ಲ ನೋಡುತ್ತಿದ್ದೀರಿ. ಪ್ರತಿ ಊರಲ್ಲಿ ಶಾಲೆಗಳ ಅಭಿವೃದ್ಧಿ, ದೇವಸ್ಥಾನಗಳ ನಿರ್ಮಾಣ, ಸಮುದಾಯ ಭವನಗಳ ನಿರ್ಮಾಣ, ಉತ್ತಮ ರಸ್ತೆಗಳ ನಿರ್ಮಾಣ, ಸರ್ವರೀತಿಯ ಮೂಲಭೂತ ಸೌಲಭ್ಯಗಳಅಭಿವೃದ್ಧಿ ಮಾಡಲಾಗಿದೆ. ಜಾತಿ, ಧರ್ಮ, ಪಕ್ಷ ಯಾವುದೇ ಭೇದವಿಲ್ಲದೆ ಕ್ಷೇತ್ರ ಅಭಿವೃದ್ಧಿಯತ್ತ ಸಾಗುತ್ತಿದೆ. ಪಕ್ಷಾತೀತವಾಗಿ ಜನರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ಹೇಳಿದರು.