ಕೊಲ್ಕತ್ತಾ, ಜನವರಿ 11 ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಕೊಲ್ಕತ್ತಾಗೆ ಎರಡು ದಿನಗಳ ಭೇಟಿ ನೀಡಲಿದ್ದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ವಾರಾಂತ್ಯದ ಉದ್ಘಾಟನಾ ಕಾರ್ಯಕ್ರಮಗಳು ಮತ್ತು ಆಚರಣೆಗಳಿಗಾಗಿ ಮೋದಿ ಕೊಲ್ಕತ್ತಾಗೆ ಆಗಮಿಸುತ್ತಿದ್ದು, ಈ ಪೈಕಿ ಎರಡು ಕಾರ್ಯಕ್ರಮಗಳಿಗೆ ಉಭಯ ಗಣ್ಯರನ್ನು ಆಹ್ವಾನಿಸಲಾಗಿದೆ.ರಾಜಭವನದಲ್ಲಿ ರಾತ್ರಿ ತಂಗಲಿರುವ ಪ್ರಧಾನಿಯನ್ನು ಮಮತಾ ಬ್ಯಾನರ್ಜಿ ಭೇಟಿ ಮಾಡುವ ನಿರೀಕ್ಷೆಯೂ ಇದೆ ಎನ್ನಲಾಗಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್ಆರ್ಸಿ ಟೀಕಾಕಾರರಲ್ಲಿ ಅಗ್ರಗಣ್ಯರಾಗಿರುವ ಮಮತಾ ಬ್ಯಾನರ್ಜಿ, ಹೊಸ ಕಾಯ್ದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಮುಂಚೂಣಿಯಲ್ಲಿದ್ದಾರೆ. ಮೋದಿ ವಿರುದ್ಧ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ವ್ಯವಸ್ಥೆಗೊಳಿಸಲಾಗಿದೆ. ನಗರದಾದ್ಯಂತ ಗೋ ಬ್ಯಾಕ್ ಮೋದಿ ಪ್ರತಿಭಟನೆ, ವಿಮಾನ ನಿಲ್ದಾಣ ಬಳಿ ರಸ್ತೆ ತಡೆ ಹಾಗೂ ರಾಜಭವನದ ಮುಂದೆಯೂ ಧರಣಿ ನಡೆಸಳು ಗೆ ಪ್ರತಿಭಟನಾಕಾರರು ನಿರ್ಧರಿಸಿದ್ದಾರೆ.ಕೊಲ್ಕತ್ತಾದಲ್ಲಿ ನವೀಕರಿಸಿರುವ ಪಾರಂಪರಿಕ ಕರೆನ್ಸಿ ಕಟ್ಟಡದ ಉದ್ಘಾಟನೆ ಸಂಜೆ ನಡೆಯಲಿದ್ದು, ಇದರಲ್ಲಿ ಉಭಯ ಗಣ್ಯರು ಮುಖಾಮುಖಿಯಾಗುವ ಸಾಧ್ಯತೆ ಇದೆ. ಸಂಜೆ ಮಿಲೇನಿಯಂ ಪಾರ್ಕ್ನಲ್ಲಿ ಮೋದಿ ಅವರು ಕೊಲ್ಕತ್ತಾ ಬಂದರಿನ 150ನೇ ವರ್ಷಾಚರಣೆಗೆ ಚಾಲನೆ ನೀಡುವರು. ಮಮತಾ ಬ್ಯಾನರ್ಜಿಯವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.