ಬೆಂಗಳೂರು, ಫೆ 11, ಇತ್ತೀಚೆಗೆ ನಗರದ ಮೇಖ್ರಿ ಸರ್ಕಲ್ ಬಳಿ ಬೆಂಟ್ಲಿ ಕಾರು ಅಪಘಾತ ಮಾಡಿದ್ದು ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರೀಸ್ ಅವರ ಮಹಮ್ಮದ್ ನಲಪಾಡ್ ಎಂದು ತಿಳಿದು ಬಂದಿದೆ. ಭಾನುವಾರದಂದು ಮೂರು ವಾಹನಗಳಿಗೆ ಡಿಕ್ಕಿ ಹೊಡೆದಿದ್ದ ಬೆಂಟ್ಲಿ ಕಾರನ್ನು ನಲಪಾಡ್ ಅವರೇ ಚಲಾಯಿಸುತ್ತಿದ್ದರು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಹೀಗಾಗಿ ಶಾಸಕ ಎನ್.ಎ. ಹ್ಯಾರಿಸ್ ಅವರ ಮಗ ಮೊಹಮ್ಮದ್ ನಲಪಾಡ್ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಮೇಖ್ರಿ ಸರ್ಕಲ್ನಲ್ಲಿ ಅಪಘಾತ ಮಾಡಿದ ಬೆಂಟ್ಲಿ ಕಾರನ್ನು ನಲಪಾಡ್ ಅವರೇ ಚಲಾಯಿಸುತ್ತಿದ್ದರು ಎಂಬುದು ತಾಂತ್ರಿಕ ಸಹಾಯ ಮತ್ತು ಪ್ರತ್ಯಕ್ಷದರ್ಶಿಗಳ ಮಾಹಿತಿಯಿಂದ ತಿಳಿದುಬಂದಿದೆ. ಈಗ ಪೊಲೀಸರು ನಲಪಾಡ್ ಅವರಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದಿದ್ದಾರೆ.ತನಿಖೆ ವೇಳೆ ಆತ ಅಜಾಗರೂಕ ಚಾಲನೆ ಮಾಡಿದ್ದರಿಂದ ಈ ಅಪಘಾತ ಸಂಭವಿಸಿದೆ ಅಥವಾ ಅತಿಯಾದ ವೇಗದ ಚಾಲನೆಯಿಂದಲೂ ಅವಘಡ ಸಂಭವಿಸಿರಬಹುದು ಎನ್ನಲಾಗದೆ. ವಿಚಾರಣೆಗೆ ಹಾಜರಾದ ನಂತರ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸಂಚಾರ ವಿಭಾಗ ಜಂಟಿ ಆಯುಕ್ತ ರವಿಕಾಂತೇ ಗೌಡ ಹೇಳಿಕೆ ನೀಡಿದ್ದಾರೆ.
ಭಾನುವಾರ ಮೇಖ್ರಿ ಸರ್ಕಲ್ನ ಅಂಡರ್ಪಾಸ್ನಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಐಷಾರಾಮಿ ಬೆಂಟ್ಲಿ ಕಾರು ಮೂರು ವಾಹನಗಳಿಗೆ ಗುದ್ದಿದ ಪರಿಣಾಮ ಬೈಕ್ ಸವಾರನೊಬ್ಬನಿಗೆ ಗಂಭೀರ ಗಾಯವಾಗಿತ್ತು. ಅಲ್ಲದೇ, ಆಟೋವೊಂದು ಜಖಂಗೊಂಡಿತ್ತು. ಆದರೆ, ಅಪಘಾತವಾದ ಕೂಡಲೇ ಆತ ಬೇರೊಂದು ಕಾರಿನ ಮೂಲಕ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಪ್ರಭಾವಿ ವ್ಯಕ್ತಿಯೊಬ್ಬನ ಮಗ ಕಾರಿನಲ್ಲಿದ್ದ ಎಂಬ ಮಾಹಿತಿಯನ್ನು ಮಾಧ್ಯಮಗಳು ವರದಿ ಮಾಡಿದ್ದವು.ನಿನ್ನೆ ಗನ್ ಮ್ಯಾನ್ವೊಬ್ಬರು ತಾನೇ ಆ ಕಾರು ಚಲಾಯಿಸುತ್ತಿದ್ದುದ್ದಾಗಿ ಒಪ್ಪಿಕೊಂಡು ಪೊಲೀಸ್ ರ ಬಳಿ ಶರಣಾಗಲು ಬಂದಿದ್ದರಂತೆ. ಆದರೆ, ವಿಚಾರಣೆ ನಡೆಸಿದಾಗ ಆ ವ್ಯಕ್ತಿ ಕಾರು ಚಾಲನೆ ಮಾಡಿಲ್ಲ ಎಂಬುದು ಪೊಲೀಸರಿಗೆ ತಿಳಿದು ಬಂದಿದೆ.