ಬೆಳಗಾವಿ ವಿಭಾಗದ ಏತ ನೀರಾವರಿ, ಬ್ಯಾರೇಜ್ ಹಾಗೂ ಚೆಕ್‌ಡ್ಯಾಂಗಳ ಪ್ರಗತಿ ಪರೀಶೀಲನೆ

Monitoring the progress of irrigation, barrage and check dams in Belgaum division

 

 ಬೆಳಗಾವಿ ವಿಭಾಗದ ಏತ ನೀರಾವರಿ, ಬ್ಯಾರೇಜ್ ಹಾಗೂ ಚೆಕ್‌ಡ್ಯಾಂಗಳ ಪ್ರಗತಿ ಪರೀಶೀಲನೆ    

ಬೆಳಗಾವಿ 20: ಗುಣಮಟ್ಟ ಕಾಯ್ದುಕೊಂಡು, ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಕ್ರಮ ಕೈಗೊಳ್ಳುವಂತೆ *ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಇಂದು ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೋಳಿ, ಶಾಸಕರಾದ ನಿಖಿಲ್ ಕತ್ತಿ ಅವರೊಂದಿಗೆ ಬೆಳಗಾವಿ ವಿಭಾಗದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯ ಕಾಮಗಾರಿಗಳ ಪರೀಶೀಲನೆ ನಡೆಸಿ ಮಾತನಾಡಿದರು.ಸುಲ್ತಾನಪುರ ಏತ ನೀರಾವರಿ ಯೋಜನೆಯ ಮೂಲಕ 19 ಕೆರೆಗಳನ್ನು ತುಂಬುವ ಕಾಮಗಾರಿ, ಯರನಾಳದಲ್ಲಿನ ಬ್ರಿಡ್ಜ್‌ ಕಂ ಬ್ಯಾರೇಜ್‌ನ ಪರೀವೀಕ್ಷಣೆ ನಡೆಸಿದ ನಂತರ ಹುನ್ನೂರು ಪ್ರವಾಸಿ ಮಂದಿರಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.   

ಬೆಳಗಾವಿ ವಿಭಾಗದ ಅಡಿಯಲ್ಲಿ ಕೈಗೊಳ್ಳಲಾಗುತ್ತಿರುವ ಏತ ನೀರಾವರಿ, ಬ್ರಿಡ್ಜ್‌ ಕಂ ಬ್ಯಾರೇಜ್ ಹಾಗೂ ಚೆಕ್ ಡ್ಯಾಂ ಕಾಮಗಾರಿಗಳ ಪ್ರಗತಿಯ ಬಗ್ಗೆ ಸಮಗ್ರ ಮಾಹಿತಿಯನ್ನು ಸಚಿವರು ಪಡೆದುಕೊಂಡರು. ಅನಗತ್ಯ ವಿಳಂಬವಾಗುತ್ತಿರುವ ಯೋಜನೆಗಳ ಬಗ್ಗೆ ಮಾಹಿತ ಪಡೆದುಕೊಂಡ ಸಚಿವರು ಇದಕ್ಕೆ ಕಾರಣರಾದ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.  

   

ಗುಣಮಟ್ಟವನ್ನು ಕಾಯ್ದುಕೊಂಡು ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು. ಯಾವ ಕಾಮಗಾರಿಗಳಲ್ಲಿ ಅನಗತ್ಯ ವಿಳಂಬವಾಗುತ್ತಿದಿಯೋ ಅಂತಹ ಕಡೆಗಳಲ್ಲಿ ಟೆಂಡರ್‌ಗಳನ್ನು ರದ್ದುಗೊಳಿಸಿ ರಿ ಟೆಂಡರ್ ಪ್ರಕ್ರಿಯೆ ಪ್ರಾರಂಭಗೊಳಿಸುವಂತೆ ಇದೇ ಸಂಧರ್ಭದಲ್ಲಿ ಅಧಿಕಾರಿಗಳಿಗೆ ಸಚಿವರಾದ ಭೋಸರಾಜು ಸೂಚನೆ ನೀಡಿದರು.