ಮುದ್ದೇಬಿಹಾಳ: 'ಶಾಸಕ ನಡಹಳ್ಳಿಯಿಂದ ಅಭಿವೃದ್ಧಿ ರಾಜಕಾರಣ'

ಲೋಕದರ್ಶನ ವರದಿ

ಮುದ್ದೇಬಿಹಾಳ 13: ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ನನ್ನ ಶಾಸಕತ್ವದ ಅವಧಿಯಲ್ಲಿ ಸರ್ಕಾರಕ್ಕೆ ಕಳಿಸಿದ್ದ ಯೋಜನೆಗಳನ್ನು ತಾನು ಮಾಡಿದ್ದು ಎಂದು ಹೇಳಿಕೊಳ್ಳುತ್ತ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಸಿ.ಎಸ್.ನಾಡಗೌಡ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೆಲ ದಾಖಲೆಗಳನು ಮಾಧ್ಯಮದವರಿಗೆ ನೀಡಿ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ಸಕರ್ಾರಕ್ಕೆ ಕಳಿಸಿದ ಇನ್ನೂ ಕೆಲವು ಯೋಜನೆಗಳು ಪೆಂಡಿಂಗ್ ಇದ್ದು ಅವುಗಳನ್ನು ಮಂಜೂರು ಮಾಡಿಸಿಕೊಂಡು ಬಂದಲ್ಲಿ ನಿಮಗೆ ಶಬ್ಬಾಸ್ಗಿರಿ ಕೊಡುವುದರ ಜೊತೆಗೆ ಒಳ್ಳೇ ಕೆಲಸ ಮಾಡಿದರೆ ನಿಮ್ಮನ್ನು ಗೌರವಿಸುತ್ತೇನೆ. ಆದರೆ ನನ್ನ ಅವಧಿಯಲ್ಲಿನ ಪ್ರಪೋಜಲ್ ಮಂಜೂರಾದ ಮೇಲೆ ನೀವೇ ಮಾಡಿದ್ದು ಎಂದು ಹೇಳಿಕೊಳ್ಳೋದು ಸರಿ ಅಲ್ಲ ಎಂದು ಹರಿಹಾಯ್ದರು.

ನಾಲತವಾಡದಿಂದ ಬಲದಿನ್ನಿ ರಸ್ತೆ ಮಂಜೂರು ಮಾಡಿಸಿದ್ದು ನಾನು. ನಡಹಳ್ಳಿ ಅವರು ಅಲ್ಲಿನ ಜನರಿಗೆ ತಾವೇ ಮಾಡಿಸಿದ್ದು ಎಂದು ಹೇಳಿದ್ದಾರೆ. ಇದನ್ನು ಯಾವ ದೇವರ ಗುಡಿಯಲ್ಲಿ ಆಧಾರ ಹಾಕಿ ಹೇಳ್ತಾರೋ ಹೇಳಿ ಸಾಬೀತುಪಡಿಸಲಿ. ನಾನೂ ಇದಕ್ಕೆ ಸಿದ್ದನಿದ್ದೇನೆ ಎಂದು ಸವಾಲು ಹಾಕಿದ ಅವರು ನಾಲತವಾಡ ಪಟ್ಟಣದ ಅಭಿವೃದ್ಧಿಯಲ್ಲಿ ರಾಜಕಾರಣ ಮಾಡಲಾಗುತ್ತಿದೆ. ಅಲ್ಲಿನ ಪಟ್ಟಣ ಪಂಚಾಯಿತಿಗೆ ಚುನಾಯಿತ ಸದಸ್ಯರಿದ್ದರೂ ಕಡೆಗಣಿಸಲಾಗುತ್ತಿದೆ. ಅವರ ಗಮನಕ್ಕೆ ತರದೆ ರಸ್ತೆ ಅಗಲೀಕರಣ, ಮತ್ತಿನ್ನೊಂದು ಕೆಲಸ ಮಾಡಲು ಮುಂದಾಗಿದ್ದು ಸರಿ ಅಲ್ಲ. ಅತಿಕ್ರಮಣ ಮಾಡಲು ಹೇಳುವವರೇ ಈಗ ಏಕಾಏಕಿ ಅತಿಕ್ರಮಣ ತೆಗೀರಿ ಅಂದ್ರೆ ಹೇಗೆ. ನಾಲತವಾಡದಲ್ಲೇನು ಗುಲಾಮರ ರಾಜ್ಯ ಇದೆಯೇ. ನೀವು ಹೇಳಿದಾಗ, ಹೇಳಿದಂತೆ ನಡೆದುಕೊಳ್ಳಬೇಕೇ. ಪಪಂ ಆಡಳಿತಾಧಿಕಾರಿಗಳು, ಅಧಿಕಾರಿಗಳು ಚುನಾಯಿತ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಾಲತವಾಡ ಪಟ್ಟಣ ಪಂಚಾಯಿತಿ ಸದಸ್ಯರು, ಸ್ಥಳೀಯ ಕಾಂಗ್ರೆಸ್ ಮುಖಂಡರು ಇದ್ದರು.