ಅಥಣಿ 28: ಮುರಗುಂಡಿ ಗ್ರಾಮದ ಅಗ್ರಹಾರಿಣಿ ಚಿಕ್ಕ ನದಿಯ ದಡದ ಸುಂದರ ವನದ ಆವರಣದಲ್ಲಿ ಮುರಸಿದ್ದೇಶ್ವರ ದೇವರ ದೇವಸ್ಥಾನವಿದ್ದು, ಈ ದೇವಸ್ಥಾನದ ಜಾತ್ರೆ ಯುಗಾದಿಯ ಸಮಯದಲ್ಲಿ ಸಂಭ್ರಮದಿಂದ ನಡೆಯುತ್ತದೆ.
ನರಕಾಸುರನ ವಧೆಗೆ ಮುರಾರಿ ಎನ್ನುವ ಹೆಸರಿನಿಂದ ಅವತರಿಸಿದ ಕೃಷ್ಣನೇ ಇಲ್ಲಿನ ಮುರಸಿದ್ಧೇಶ್ವರನೆಂದು ಒಂದು ಧಾರ್ಮಿಕ ನಂಬಿಕೆ ಮತ್ತೊಂದು ಶಂಕರ ಕೈಲಾಸದಿಂದ ಬಂದು ನೆಲೆಸಿದಾಗ ಆತನ ಸುತ್ತ ಹುತ್ತ ಬೆಳೆದು ಅದರ ಮೇಲೆ ಮುರಗಿ ಹೊಡೆಯುತ್ತ ಮರ ಬೆಳೆದಿತ್ತು ಈ ಕಾರಣಕ್ಕೆ ಈತನನ್ನು ಮುರಸಿದ್ಧೇಶ್ವರ ಎಂದು ಕರೆಯಲಾಯಿತು ಆದ್ದರಿಂದ ಶಿವ-ವಿಷ್ಣುವಿನ ಅವತಾರವೇ ಮುರಸಿದ್ಧೇಶ್ವರ ಎನ್ನುವ ಪ್ರತೀತಿ ಇದೆ.
ಶತಮಾನಗಳಿಂದ ನಡೆದುಕೊಂಡು ಬಂದ ಮುರಸಿದ್ಧೇಶ್ವರ ಜಾತ್ರೆ ಜಿಲ್ಲೆಯ ವಿಶೇಷತೆಗಳಲ್ಲೊಂದು. ಈ ಜಾತ್ರಾ ಮಹೋತ್ಸವದಲ್ಲಿ ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರ ದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಹಾಲುಮತ ಸೇರಿದಂತೆ ಎಲ್ಲ ಸಮಾಜಗಳ ಭಕ್ತರು ಆಗಮಿಸುತ್ತಾರೆ. ಶ್ರೀ ಮುರಸಿದ್ಧೇಶ್ವರ ಜಾತ್ರೆಯ ವಿಶೇಷತೆ ಎಂದರೆ ಪ್ರತಿ ವರ್ಷ ಜಾತ್ರೆಗಾಗಿ ಬರುವ ಜನ ತಮ್ಮ ಮಕ್ಕಳನ್ನು ಮುರಸಿದ್ಧೇಶ್ವರ ಜೋಳಿಗೆಯಲ್ಲಿ ಹಾಕುತ್ತಾರೆ ಇದರಿಂದ ಮಕ್ಕಳು ಆರೋಗ್ಯವಂತರು ಮತ್ತು ಧೈರ್ಯ ಶೀಲರು ಆಗುತ್ತಾರೆ ಎನ್ನುವ ನಂಬಿಕೆ ಭಕ್ತರಲ್ಲಿದೆ.
ಜಾತ್ರೆಯ ಮೊದಲ ದಿನ ಮಾರ್ಚ 29 ರ ಅಮಾವಾಸ್ಯೆ ಯಂದು ವಿಶೇಷ ಅಭಿಷೇಕ, ಪೂಜೆ ಅದೇ ದಿನ ರಾತ್ರಿ ಹತ್ತು ಗಂಟೆಗೆ ಸಕಲ ವಾದ್ಯವೈಭವಗಳೊಂದಿಗೆ ಗ್ರಾಮದೊಳಗಿನ ಪಲ್ಲಕ್ಕಿಯೂ ಗ್ರಾಮದ ಹೊರಗಿನ ದೇವಸ್ಥಾನಕ್ಕೆ ಬರುವುದು. ಮಾರ್ಚ 30 ರವಿವಾರ ಯುಗಾದಿ ಹಬ್ಬದಂದು ಮುಂಜಾನೆ ರುದ್ರಾಭಿಷೇಕ ಮುರಸಿದ್ಧೇಶ್ವರ ದೇವ ಋಷಿ ಮುರಗೆಪ್ಪ ಮುತ್ತಪ್ಪ ಮೇತ್ರಿ ಇವರಿಂದ ವಿಜಯಪುರದ ಹೂವಿನ ಮಾಲೆ ಅರ್ಿಸಲಾಗುವುದು ನಂತರ ಮಹಾ ಪ್ರಸಾದ ವಿತರಣೆಯಾಗುವುದು ರಾತ್ರಿ 10 ಗಂಟೆಗೆ ಲೋಕಾಪುರದ ದೇಶಪಾಂಡೆ ಶ್ರೀಕೃಷ್ಣ ಪಾರಿಜಾತ ಸಂಘದಿಂದ ಕೃಷ್ಣ ಪಾರಿಜಾತ ನಾಟಕ ಹಮ್ಮಿಕೊಳ್ಳಲಾಗಿದೆ.
ಮಾರ್ಚ 31 ರಂದು ಮುಂಜಾನೆ ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮುಂಜಾನೆ 8. ಗಂಟೆಗೆ ಸೈಕಲ್ ಮತ್ತು ಓಡುವ ಶರ್ಯತ್ತು ನಡೆಯುವುದು, 11 ಗಂಟೆಗೆ ದೇವರ ಪಲ್ಲಕ್ಕಿ ( ಶಮೀನ್ )ತಿರಗುವುದು ಸಂಜೆ 4 ಗಂಟೆಗೆ ಜಂಗೀ ನಿಕಾಲಿ ಕುಸ್ತಿಗಳು, ರಾತ್ರಿ 10 ಗಂಟೆಗೆ ಡೊಳ್ಳಿನ ಪದಗಳು ಜರುಗಲಿವೆ. ಎಪ್ರಿಲ್ 1 ಮಂಗಳವಾರ ದೇವರ ಪಲ್ಲಕ್ಕಿ ಗ್ರಾಮದೊಳಗಿನ ದೇವಸ್ಥಾನಕ್ಕೆ ತೆರಳುವ ಮೂಲಕ ಜಾತ್ರಾ ಮಹೋತ್ಸವ ಮುಕ್ತಾಯಗೊಳ್ಳುವುದು.
ಮುರಸಿದ್ಧೇಶ್ವರ ದೇವರ ಜಾತ್ರಾ ಮಹೋತ್ಸದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಭಕ್ತರಿಗಾಗಿ ಮಹಾಪ್ರಸಾದ, ವಸತಿ ವ್ಯವಸ್ಥೆ ಕಲ್ಪಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಬೇಕು ಎಂದು ದೃವಸ್ಥಾನ ಟ್ರಸ್ಟ ಕಮೀಟಿ ಸದಸ್ಯ ಹೊಳೆಪ್ಪ ಪೂಜಾರಿ ಮನವಿ ಮಾಡಿದ್ದಾರೆ ಜಾತ್ರಾ ಮಹೋತ್ಸವದ ಆವರಣದಲ್ಲಿ ಸ್ವಚ್ಛತೆ ಜೊತೆಗೆ ಶುದ್ಧ ಕುಡಿಯುವ ನೀರು, ಬೆಳಕಿನ ವ್ಯವಸ್ಥೆ ಅಚ್ಚು ಕಟ್ಟಾಗಿ ಭಕ್ತರಿಗೆ ಅನಕೂಲವಾಗುವಂತೆ ನಿರ್ವಹಿಸಲಾಗಿದೆ ಎಂದು ಗ್ರಾಮ ಪಂಚಾಯತ ಸದಸ್ಯ ಮುತ್ತಪ್ಪ ಮಗಾಡಿ ತಿಳಿಸಿದರು.