ಬಳ್ಳಾರಿ 03: ಮಕ್ಕಳ ಜನನ ನಿಯಂತ್ರಣಕ್ಕಾಗಿ ಪುರುಷರಿಗೆ ಇರುವ ಸರಳ ವಿಧಾನವಾದ ಎನ್‌ಎಸ್‌ವಿ (ನೋ ಸ್ಕಾಲ್‌ಪೇಲ್ ವ್ಯಾಸೆಕ್ಟುಮಿ) ಶಸ್ತ್ರಚಿಕಿತ್ಸೆಯನ್ನು ಮಾಡಿಸುವ ಮೂಲಕ ಸಂತಸದ ಕುಟುಂಬ ಹೊಂದಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು.
ಸಂಡೂರು ತಾಲ್ಲೂಕಿನ ತೋರಣಗಲ್ಲು ಗ್ರಾಮದ ದಂಪತಿಗಳು ನಿರ್ಧಾರ ಕೈಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಸರಳವಾದ ಸುರಕ್ಷಿತ, ಹೊಲಿಗೆಯಿಲ್ಲದ, ಗಾಯವಿಲ್ಲದ "ನೋ ಸ್ಕಾಲ್‌ಪೇಲ್ ವ್ಯಾಸೆಕ್ಟುಮಿ" (ಎನ್‌ಎಸ್‌ವಿ) ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ದಂಪತಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ದಂಪತಿಗಳು ಮಕ್ಕಳು ಬೇಡವೆಂದು ನಿರ್ಧರಿಸಿದಾಗ ಕೇವಲ ಮಡದಿಗೆ ಮಾತ್ರ ಲ್ಯಾಪರೊಸ್ಕೋಪಿಕ್ ಅಥವಾ ಟ್ಯುಬೆಕ್ಟುಮಿ ಶಸ್ತ್ರಚಿಕಿತ್ಸೆ ಮಾಡಿಸುವುದು ವಾಡಿಕೆಯಾಗಿದೆ. ಆದರೂ ಸಹಿತ ದಂಪತಿಗಳು ಕೇವಲ ತಮ್ಮ ಪತ್ನಿಗೆೆ ಮಾತ್ರ ಶಸ್ತ್ರಚಿಕಿತ್ಸೆಗೆ ಒಳಪಡಿಸುತ್ತಾರೆ. ಆದರೆ ಅತ್ಯಂತ ಸರಳ-ಸುಲಭವಾದ “ನೋ ಸ್ಕಾಲ್‌ಪೇಲ್ ವ್ಯಾಸೆಕ್ಟುಮಿ” (ಎನ್‌ಎಸ್‌ವಿ) ಶಸ್ತ್ರಚಿಕಿತ್ಸೆಗೆ ಪತಿಯು ಮುಂದೆ ಬರುವ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.
ಮುಖ್ಯವಾಗಿ ಪತ್ನಿಯು ಗಂಡಾಂತರ ಗರ್ಭಿಣಿಯೆಂದು ನಿರ್ಧರಿಸುವ ಅಂಶಗಳಾದ 30 ವರ್ಷ ವಯಸ್ಸಿನ ನಂತರ ಗರ್ಭಿಣಿಯಾದಲ್ಲಿ, ಎತ್ತರ 142 ಸೆಂ.ಮೀ. ಗಿಂತ ಕಡಿಮೆ ಇದ್ದಲ್ಲಿ, ಸಕ್ಕರೆ ಖಾಯಿಲೆ ಅಥವಾ ರಕ್ತದೊತ್ತಡ 140/90 ಗಿಂತ ಹೆಚ್ಚು ಇದ್ದಲ್ಲಿ, ಅವಳಿ-ಜವಳಿ ಮಕ್ಕಳಾದಲ್ಲಿ, ಹೆರಿಗೆ ಶಸ್ತ್ರಚಿಕಿತ್ಸೆ ಮೂಲಕವಾದಲ್ಲಿ ಅಥವಾ ಯಾವುದಾದರೂ ಕಾಯಿಲೆಗೆ ದೀರ್ಘಾವಧಿ ಚಿಕಿತ್ಸೆ ಪಡೆಯುತ್ತಿದ್ದರೆ ಇಂತ ಪತಿಯು ಎಸ್‌ಎಸ್‌ವಿ ಶಸ್ತ್ರಚಿಕಿತ್ಸೆ ಮಾಡಿಸಲು ತಿಳಿಸಿ, ಇದಕ್ಕಾಗಿ ರೂ.1100/- ಪ್ರೋತ್ಸಾಹ ಧನವಿದೆ ಎಂದು ತಿಳಿಸಿದರು.
ಕುಟುಂಬ ಕಲ್ಯಾಣ ಕಾರ್ಯಕ್ರಮ ಭಾಗವಾಗಿರುವ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆಯಲ್ಲಿ ಪತಿಯು ಭಾಗವಹಿಸುವ ಕುರಿತು ಎನ್.ಎಸ್.ವಿ ಶಸ್ತ್ರಚಿಕಿತ್ಸೆಯ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಬೇಕಿದೆ ಎಂದರು.
ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಪೂರ್ಣಿಮ ಕಟ್ಟಿಮನಿ ಅವರು ಮಾತನಾಡಿ, ಸಾಮಾನ್ಯವಾಗಿ ಎನ್‌ಎಸ್‌ವಿ ಶಸ್ತ್ರಚಿಕಿತ್ಸೆ ಗಾಯವಿಲ್ಲದ ಹೋಲಿಗೆ ಇಲ್ಲದ ಶಸ್ತ್ರಚಿಕಿತ್ಸೆಯ ಕುರಿತು ಜಿಲ್ಲೆಯಲ್ಲಿ ಜಾಗೃತಿ ನೀಡಲಾಗುತ್ತಿದ್ದು, ಪುರುಷತ್ವ ಕುಂದುವುದು ಎಂಬ ತಪ್ಪು ನಂಬಿಕೆಗಳನ್ನು ಹೋಗಲಾಡಿಸಲು ನಿರಂತರವಾಗಿ ಜಾಗೃತಿ ನೀಡಲಾಗುತ್ತಿದೆ. ಇದಕ್ಕಾಗಿ ದಂಪತಿಗಳು ಮುಂದೆ ಬರಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್, ಆರೋಗ್ಯ ನೀರೀಕ್ಷಣಾಧಿಕಾರಿ ನಿಜಾಮುದ್ದೀನ್, ಆಶಾ ಕಾರ್ಯಕರ್ತೆ ರಾಜೇಶ್ವರಿ, ತಜ್ಞರಾದ ಡಾ.ಮಲ್ಲಿಕಾರ್ಜುನ್, ಡಾ.ಕಾಶಿ ಪ್ರಸಾದ್ ಅಭಿನಂದನೆ ಸಲ್ಲಿಸಿದರು.