ಕೊಪ್ಪಳ ಬೆಂಗಳೂರು ಮಧ್ಯ ನಾನ್ ಎಸಿ ಸ್ಲೀಪರ್ ಬಸ್ ಸಂಚಾರದಿಂದ ಜನರಿಗೆ ಅನುಕೂಲವಾಗಲಿದೆ - ಸಚಿವ ಶಿವರಾಜ ಎಸ್.ತಂಗಡಗಿ
ಕೊಪ್ಪಳ 14 : ಕೊಪ್ಪಳ- ಬೆಂಗಳೂರು ಮತ್ತು ಕೊಪ್ಪಳ ಬೀದರ ಮಧ್ಯ ಬಸ್ ಸಂಚಾರದಿಂದ ನಮ್ಮ ಭಾಗದ ಜನರಿಗೆ ಅನುಕೂಲವಾಗಲಿದೆ. ಇದು ಜನರ ಬಹುದಿನಗಳ ಬೇಡಿಕೆಯಾಗಿತ್ತು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಹೇಳಿದರು.ಅವರು ಸೋಮವಾರ ಕೊಪ್ಪಳ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಕೊಪ್ಪಳ ವಿಭಾಗದ ನೂತನ ನಾಲ್ಕು ಅಮೋಘವರ್ಷ ನಾನ್ ಎಸಿ ಸ್ಲೀಪರ್ ಹೊಸ ಬಸ್ಸುಗಳಿಗೆ ಚಾಲನೆ ನೀಡಿ ಮಾತನಾಡಿದರು.ಕೊಪ್ಪಳದಿಂದ ಬೆಂಗಳೂರು ಮತ್ತು ಬೀದರ ಮಧ್ಯ ಸಂಚರಿಸಲು ಬಸ್ಸುಗಳ ಅವಶ್ಯಕತೆ ಇತ್ತು ಹಾಗಾಗಿ ಇಂದು ಈ ಬಸ್ಸುಗಳಿಗೆ ಚಾಲನೆ ನೀಡಿದ್ದೆನೆ. ಕೊಪ್ಪಳ ವಿಭಾಗಕ್ಕೆ ನಾಲ್ಕು ಅಮೋಘವರ್ಷ ನಾನ ಎಸಿ ಸ್ಲೀಪರ್ ಬಸ್ಸುಗಳನ್ನು ನೀಡಿದ್ದು ಅವುಗಳಲ್ಲಿ ಎರಡು ಕೊಪ್ಪಳ- ಬೆಂಗಳೂರು ಮಾರ್ಗದಲ್ಲಿ ಕಾರ್ಯಾಚರಣೆ ಮಾಡಲಿವೆ ಈ ಬಸ್ಸು ರಾತ್ರಿ. 10 ಗಂಟೆಗೆ ಕೊಪ್ಪಳ ಕೇಂದ್ರ ಬಸ್ ನಿಲ್ದಾಣದಿಂದ ಹೊರಡಲಿದೆ.ಕೊಪ್ಪಳ- ಬೀದರ ಮಧ್ಯ 2 ಬಸ್ಸುಗಳು ಸಂಚರಿಸಲಿದ್ದು. ಕೊಪ್ಪಳದಿಂದ ರಾತ್ರಿ 8:25 ಬಸ್ಸು ಬಿಡಲಿದೆ. ಇವುಗಳು ವಾರದ ಎಲ್ಲಾ ದಿನಗಳಲ್ಲಿ ಸಂಚರಿಸಲಿದ್ದು ಸಾರ್ವಜನಿಕರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು. ಕೊಪ್ಪಳದಿಂದ ಬೆಂಗಳೂರು ಹಾಗೂ ಬೀದರಿಗೆ ಈ ನಾನ ಎಸಿ ಸ್ಲೀಪರ್ ಬಸ್ಸುಗಳ ಸಂಚಾರದಿಂದ ಜನರಿಗೆ ಬಹಳ ಅನುಕೂಲವಾಗಲಿದೆ ಎಂದು ಹೇಳಿದರು
ಸಚಿವರು ನೂತನ ಬಸ್ಸುಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ ನಂತರ ಬಸ್ಸುಗಳ ಒಳಗಡೆ ಹೋಗಿ ಬಸ್ಸಿನ ಆಸನಗಳ ವ್ಯವಸ್ಥೆ ಹಾಗೂ ಅದರಲ್ಲಿರುವ ಸೌಲಭ್ಯಗಳ ಪರೀಶೀಲಿಸಿದ ನಂತರ ಎಲ್ಲವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗಬೇಕು ಮತ್ತು ಪ್ರಯಾಣಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಗಳಾಗದ ರೀತಿಯಲ್ಲಿ ಜನರಿಗೆ ಸೇವೆ ನೀಡುವಂತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ. ಕೊಪ್ಪಳ ಸಂಸದರಾದ ಕೆ. ರಾಜಶೇಖರ ಬಸವರಾಜ ಹಿಟ್ನಾಳ, ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್. ಎಲ್ ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಕ.ಕ.ರ.ಸಾ.ನಿಗಮದ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ವೆಂಕಟೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಲಬುರಯಲ್ಲಿನ ಉದ್ಯೋಗ ಮೇಳ, ಸಮೃದ್ಧಿ ಸಮ್ಮೇಳನಕ್ಕೆ ಹೆಚ್ಚುವರಿ ಬಸ್‌ಗಳ ಸೌಕರ್ಯಕೊಪ್ಪಳ 14: ಏ.16 ರಂದು ಕಲಬುರಗಿಯಲ್ಲಿ ನಡೆಯಲಿರುವ 'ಉದ್ಯೋಗ ಮೇಳ" ಸಮೃದ್ಧಿ ಸಮ್ಮೇಳನಕ್ಕೆ ಕಲ್ಯಾಣ ಕರ್ನಾಟಕದ ಕೊಪ್ಪಳ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳು ಭಾಗವಹಿಸಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕೊಪ್ಪಳ ವಿಭಾಗದ ಕುಷ್ಟಗಿ, ಗಂಗಾವತಿ, ಕುಕನೂರು, ಯಲಬುರ್ಗಾ ಮತ್ತು ಕೊಪ್ಪಳ ಭಾಗದಿಂದ ಹೆಚ್ಚುವರಿ ಬಸ್ಸುಗಳ ಸೌಕರ್ಯಗಳನ್ನು ಎಪ್ರಿಲ್ 15 ರಿಂದ 16 ರ ವರೆಗೆ ಕಲ್ಪಿಸಲಾಗಿದೆ.
ಸಾರ್ವಜನಿಕರು ಹಾಗೂ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೊಪ್ಪಳ ವಿಭಾಗದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹಿರಿಯ ನಿಯಂತ್ರಣಾಧಿಕಾರಿ ಮಹಾದೇವ ಮುಂಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.