ಎಂಎಲ್‌ಸಿ ಸಿಟಿ ರವಿ ಸಚಿವೆ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಪ್ರಕರಣ; ಪೊಲೀಸರ ಹಸ್ತಕ್ಷೇಪ ಸ್ವೀಕಾರಾರ್ಹವಲ್ಲ: ಸಭಾಪತಿ ಬಸವರಾಜ ಹೊರಟ್ಟಿ

Objectionable statement case against MLC CT Ravi ; Police interference unacceptable: Speaker Basavar

ಬೆಂಗಳೂರು  23: ಬಿಜೆಪಿ ಎಂಎಲ್‌ಸಿ ಸಿಟಿ ರವಿ ಅವರು ವಿಧಾನ ಪರಿಷತ್ತಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಪ್ರಕರಣವು ಮುಗಿದ ಅಧ್ಯಾಯವಾಗಿದ್ದು, ಈ ಪ್ರಕರಣದಲ್ಲಿ ಪೊಲೀಸರ ಹಸ್ತಕ್ಷೇಪ ಸ್ವೀಕಾರಾರ್ಹವಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಹೇಳನಕಾರಿ ಮಾತುಗಳನ್ನಾಡಿರುವುದು ಮುಗಿದ ಅಧ್ಯಾಯವಾಗಿದೆ. ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ನಡೆದ ಘಟನೆಯನ್ನು ಕೂಲಂಕಷವಾಗಿ ಚರ್ಚಿಸಲಾಗಿದೆ ಎಂದು ಹೇಳಿದರು.

ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ನಂತರ ಬಿಜೆಪಿ ಎಂಎಲ್‌ಸಿ ಸಿಟಿ ರವಿ ಅವರನ್ನು ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ಬಂಧಿಸಲಾಗಿದೆ. ಸದ್ಯ, ನಾವು ಎರಡೂ ಕಡೆಯಿಂದ ಯಾವುದೇ ದೂರುಗಳನ್ನು ಸ್ವೀಕರಿಸಿಲ್ಲ. ಈ ಬಗ್ಗೆ ದೂರು ನೀಡಿದರೆ, ನಾವು ಕ್ರಮ ಕೈಗೊಳ್ಳುತ್ತೇವೆ. ಪರಿಷತ್ತಿನ ಒಳಗೆ ನಡೆದ ಘಟನೆಯಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಬಾರದು, ಸದನದೊಳಗೆ ನಡೆದಿರುವ ವಿಚಾರದಲ್ಲಿ ಪೊಲೀಸರಿಗೆ ಕ್ರಮ ಕೈಗೊಳ್ಳಲು ಅಧಿಕಾರವಿಲ್ಲ ಎಂದರು.

'ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರು ಪರಿಷತ್ತಿನ ಒಳಗೆ ಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ನಮ್ಮ ಬಳಿ ವಿಡಿಯೋ ಮತ್ತು ಆಡಿಯೋ ರೆಕಾರ್ಡಿಂಗ್ ಲಭ್ಯವಿದ್ದರೆ ಈ ವಿಷಯವನ್ನು ಪರಿಗಣಿಸಲಾಗುವುದು. ಬೇರೆ ಯಾವುದೇ ಪಕ್ಷವು ವಿಡಿಯೋ ಅಥವಾ ಆಡಿಯೋ ಒದಗಿಸಿದರೆ, ನಾವು ಅದನ್ನು ಎಫ್‌ಎಸ್‌ಎಲ್ ಗೆ ಕಳುಹಿಸುತ್ತೇವೆ. ಆ ದಿನ ಅಧಿವೇಶನ ಮುಗಿದ ನಂತರ ಯಾವುದೇ ವಿಡಿಯೋ ರೆಕಾರ್ಡಿಂಗ್ ಮಾಡಿಲ್ಲ ಎಂದು ಹೇಳಿದರು.

ಈ ಪ್ರಕರಣವನ್ನು ನೈತಿಕ ಸಮಿತಿಗೆ ಒಪ್ಪಿಸಿ, ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೊರಟ್ಟಿ ಈ ಹಿಂದೆ ಹೇಳಿಕೆ ನೀಡಿದ್ದರು.