ಒಂದು ದೇಶ, ಒಂದು ಚುನಾವಣೆಗೆ ಒಂದು ಬಾರಿ ಸಂವಿಧಾನ ತಿದ್ದುಪಡಿ ಅಗತ್ಯ: ಪಿ. ರಾಜೀವ
ಬೆಳಗಾವಿ 25: ಆಡಳಿತಕ್ಕೆ ನಿರಂತರ ಅಡ್ಡಿಯಾಗುತ್ತಿರುವ ಹಾಗೂ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುತ್ತಿರುವ ನಿರಂತರ ಚುನಾವಣೆಗಳನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ‘ಒಂದು ದೇಶ, ಒಂದು ಚುನಾವಣೆ’ ಜಾರಿಗೆ ಒಂದು ಬಾರಿ ಸಂವಿಧಾನಕ್ಕೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿಯಾದ ಪಿ. ರಾಜೀವ ಅವರು ಹೇಳಿದ್ದಾರೆ.
ಲಿಂಗರಾಜ ಮಹಾವಿದ್ಯಾಲಯ ರಾಜ್ಯಶಾಸ್ತ್ರ ವಿಭಾಗ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿದರು.
ಒಂದು ದೇಶ, ಒಂದು ಚುನಾವಣೆ ಕುರಿತು ಗಂಭೀರ ಚರ್ಚೆಗಳು ನಡೆಯಬೇಕಿವೆ. ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಇದನ್ನು ಕೊನೆಗಾಣಿಸಬೇಕಾಗಿದೆ. ರಾಜಕೀಯ ನಾಯಕತ್ವ ಮತ್ತು ಆಡಳಿತ ಯಂತ್ರಕ್ಕೆ ನಿರಂತರ ಚುನಾವಣೆಗಳು ಅಡ್ಡಿಯಾಗಿವೆ. ಇದರಿಂದ ದೂರಗಾಮಿ ನೀತಿಗಳ ರೂಪಿಸುವ ಸಂಬಂಧ ನಡೆಯಬೇಕಾದ ಚರ್ಚೆಗಳಿಗೆ ಕಾಲಾವಕಾಶವೇ ಇಲ್ಲವಾಗಿದೆ ಎಂದರು.
ಯಾವುದೇ ರಾಜ್ಯಗಳಲ್ಲಿ ಚುನಾವಣೆ ನಡೆದರೂ ಹಿರಿಯ ಐಎಎಸ್ ಅಧಿಕಾರಿಗಳನ್ನು ವೀಕ್ಷಕರಾಗಿ ಕಳುಹಿಸಲಾಗುತ್ತದೆ. ಸಚಿವರಿಂದ ಪ್ರಧಾನಿವರೆಗೂ ಎಲ್ಲರೂ ತಮ್ಮ ಗಮನವನ್ನು ಚುನಾವಣೆಯತ್ತಲೇ ಕೇಂದ್ರೀಕರಿಸಿರುತ್ತಾರೆ. ಹೊಸ ಯೋಜನೆಗಳು ಜಾರಿಗೆ ಬಂದಿಲ್ಲ ಮತ್ತು ಸರ್ಕಾರದ ಆಡಳಿತ ಯಂತ್ರವೂ ಮಂದ ಗತಿಯಲ್ಲಿ ಸಾಗಿರುವುದನ್ನು ಗಮನಿಸಬಹುದು ಎಂದು ಹೇಳಿದರು.
ಲಿಂಗರಾಜ ಮದಾವಿದ್ಯಾಲಯದ ಪ್ರಾಚಾರ್ಯರು ಡಾ. ಹೆಚ್.ಎಸ್. ಮೇಲಿನಮನಿ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ವಿ.ಪಿ.ಹಿರೇಮಠ, ಪ್ರೋ. ಸುನೀತ್ ಮುಡಲಗಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಮುಖ್ಯಸ್ಥರು ಸಿದ್ದನಗೌಡ ಪಾಟೀಲ, ಹಾಗೂ ಡಾ. ನಂದನ ಕಟಾಂಬಳೆ, ಡಾ. ಹೆಚ್. ಎಂ. ಚೆನ್ನಪ್ಪಗೋಳ. ಡಾ. ಜಿ.ಎನ್. ಶೀಲಿ, ಡಾ. ಪಾಂಡುರಂಗ ಗಾಣಿಗೇರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.