ಸುಧಾಕರ ದೈವಜ್ಞ
ಶಿಗ್ಗಾವಿ10: ಹಾವೇರಿ ಜಿಲ್ಲೆಯಲ್ಲಿಯೇ ಶಿಗ್ಗಾವಿ ಅಭಿವೃದ್ದಿ ಹೊಂದಿದ ತಾಲೂಕು ಎಂದು ಗುರುತಿಸಿಕೊಂಡಿದೆ. ಶಿಗ್ಗಾವಿ ಪಟ್ಟಣ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಿದ್ದರೂ ಸಮರ್ಪಕ ಸಾರಿಗೆ ಸೌಲಭ್ಯವಿಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಕ್ಷೇತ್ರವಾದ ಪಕ್ಕದ ಸವಣೂರ ತಾಲೂಕಿನಲ್ಲಿ ಡಿಪೋ ಇದ್ದರೂ ಅದು ಹೆಸರಿಗೆ ಮಾತ್ರ. ಜಿಲ್ಲಾ ಕೇಂದ್ರ ಹಾವೇರಿಗೆ ಶಿಗ್ಗಾವಿಯಿಂದ ಬಸ್ ಸೌಲಭ್ಯವಿಲ್ಲ. ಬೇರೆ ಬೇರೆ ಮಾರ್ಗವಾಗಿ ಬಸ್ಗಳು ಬಂದು ಹೋಗುತ್ತವೆ. ಆದರೆ ತಾಸಿಗೊಂದು ಬಸ್ ಬಂದರೆ ಪುಣ್ಯ ಎನ್ನುವಂತಾಗಿದೆ. ಮುಖ್ಯವಾಗಿ ಹುಬ್ಬಳ್ಳಿಗೆ ಹೋಗಲು ಅನೇಕ ಬಸ್ಗಳು ಇವೆ. ಆದರೆ ಹಾವೇರಿಗೆ ಬಸ್ಗಳ ಕೊರತೆ ಇದೆ. ಬೆಳಗ್ಗೆ 8 ರಿಂದ 11 ಗಂಟೆವರೆಗೆ 2 ರಿಂದ 3 ಬಸ್ಗಳು ಬರುತ್ತವೆ. ಬೆಳಗಿನ ಸಮಯದಲ್ಲಿ ಬೇರೆ ಬೇರೆ ಕಡೆಗೆ ಪ್ರಯಾಣಿಸಲು ಬಸ್ ಸೌಲಭ್ಯವಿಲ್ಲದೆ ಉದ್ಯೋಗಿಗಳು, ಪ್ರಯಾಣಿಕರು ಬಸ್ ಸೌಲಭ್ಯವಿಲ್ಲದೆ ಪರದಾಡುವಂತಾಗಿದೆ.
ಸಂಜೆಯ ಬಳಿಕ ಹಾವೇರಿಯಿಂದ ಶಿಗ್ಗಾವಿ ಕಡೆಗೆ ಬರಬೇಕಾದರೆ ದೇವರೇ ಗತಿ. ಸಂಜೆ 6 ರಿಂದ 8ರವರೆಗೂ 2-3 ಬಸ್ ಮಾತ್ರ ಬರುತ್ತವೆ. ಅವು ಸಹಿತ ಮಧ್ಯದಲ್ಲಿ ಊಟಕ್ಕೆ ಅರ್ಧ ಗಂಟೆಯವರೆಗೆ ನಿಲ್ಲುತ್ತವೆ. ಆದರೂ ಪ್ರಯಾಣಿಕರಿಗೆ ಈ ಬಸ್ಗಳೇ ಅನಿವಾರ್ಯವಾಗಿವೆ.
ಮೊದಲು ಶಿಗ್ಗಾವಿಗೆ ಅನೇಕ ಬಸ್ಗಳು ಬರುತ್ತಿದ್ದವು. ಈಗ ಹಾವೇರಿಯಿಂದ ಹುಬ್ಬಳ್ಳಿ, ಹುಬ್ಬಳ್ಳಿಯಿಂದ ಹಾವೇರಿಗೆ ತಡೆರಹಿತ ಬಸ್ ವ್ಯವಸ್ಥೆ ಇರುವುದರಿಂದ ಇಷ್ಟೆಲ್ಲಾ ಸಮಸ್ಯೆ ಉದ್ಭವಿಸಿದೆ ಎಂದು ನೌಕರರು ಹೇಳುತ್ತಾರೆ. ತಡೆರಹಿತ ಬಸ್ನ್ನು ಶಿಗ್ಗಾವಿಗೆ ನಿಲ್ಲಿಸಲು ಆಗದಿದ್ದರೆ ಸವಣೂರ ಡಿಪೋದಿಂದ ಶಿಗ್ಗಾವಿಯಿಂದ ಹಾವೇರಿಗೆ ಗೃಹ ಸಚಿವ ಬೊಮ್ಮಾಯಿ ಅವರು ಹೆಚ್ಚಿನ ಬಸ್ ವ್ಯವಸ್ಥೆ ಮಾಡಬೇಕು ಎಂದು ಪ್ರಯಾಣಿಕರ ಆಗ್ರಹವಾಗಿದೆ. ಈಗ ಕೊರೊನಾ ನೆಪದಲ್ಲಿ ಬಸ್ನಲ್ಲಿ 30ಕ್ಕಿಂತ ಹೆಚ್ಚು ಜನರನ್ನು ಬಸ್ಸಿನಲ್ಲಿ ಹತ್ತಿಸಿ ಕೊಳ್ಳುವುದಿಲ್ಲ. ಹೀಗಾಗಿ ಬೆಳಿಗ್ಗೆ ಕೆಲಸಕ್ಕೆ ಹೋಗುವವರಿಗೆ, ಸಂಜೆ ಮರಳಲು ತೊಂದರೆಯಾಗಿದೆ.