ಬಳ್ಳಾರಿ 12: ಭಾಷೆ ಬೇರೆಯಾದರೂ ಭಾವ ಒಂದೇ ಎನ್ನುವುದನ್ನು ಸರ್ವಜ್ಞ ಮತ್ತು ವೇಮನರ ವಚನ ಚಿಂತನೆಗಳಿಂದ ಅರಿಯಬಹುದು ಎಂದು ನಿವೃತ್ತ ಉಪನ್ಯಾಸಕರಾದ ಎನ್ ಬಸವರಾಜ್ ತಿಳಿಸಿದರು.
ನಂತರ ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ಜಿಲ್ಲಾ ಘಟಕವು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ದಿ. ವೈ. ಲಿಂಗಾರೆಡ್ಡಿ ಮತ್ತು ದಿ. ಪಾರ್ವತಮ್ಮ ದತ್ತಿ ಹಾಗೂ ದಿ. ಯರ್ರಗುಡಿ ನಾರಾಯಣ ರಾವ್ ಮತ್ತು ದಿ. ಸುಮಿತ್ರಮ್ಮ ದತ್ತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು ಸರ್ವಜ್ಞ ಮತ್ತು ವೇಮನರ ತಾತ್ವಿಕ ನಿಲುವುಗಳು ಮನುಕುಲವನ್ನು ಸಂಕುಚಿತತೆಗಳಿಂದ ಮುಕ್ತಗೊಳಿಸಿ ಮಾನವನನ್ನು ಮಹೋನ್ನತ ಸ್ಥಾನಕ್ಕೆ ಒಯ್ಯುವ ನಿಟ್ಟಿನಲ್ಲಿ ಇಬ್ಬರೂ ಪ್ರತಿಪಾದಿಸಿದ್ದಾರೆಂದು ಎನ್. ಬಸವರಾಜ್ ಅಭಿಪ್ರಾಯಪಟ್ಟರು.ದತ್ತಿ ದಾನಿಗಳಾದ ಖ್ಯಾತ ಮಕ್ಕಳ ತಜ್ಞರಾದ ಡಾ. ವೈ.ಸಿ. ಯೋಗಾನಂದ ರೆಡ್ಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಪಠ್ಯ ಪುಸ್ತಕಗಳ ಜೊತೆಗೆ ಸಾಹಿತ್ಯಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ನಿರಂತರವಾಗಿ ತೊಡಗಿಕೊಳ್ಳುವಂತೆ ಕರೆ ನೀಡಿದರು.ಮತ್ತೋರ್ವ ದತ್ತಿ ದಾನಿಗಳಾದ ಖ್ಯಾತ ನ್ಯಾಯವಾದಿಗಳಾದ ಯರ್ರಗುಡಿ ರಂಗನಾಥ ರಾವ್ ಮಾತನಾಡಿ ದತ್ತಿ ಕಾರ್ಯಕ್ರಮಗಳ ಮೂಲಕ ಜನ ಸಾಮಾನ್ಯರ ಮನೆ-ಮನಕ್ಕೆ ಸಾಹಿತ್ಯವನ್ನು ತಲುಪಿಸುವ ಕಾರ್ಯವನ್ನು ಕಸಾಪ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಡಾ. ಜೆ. ಎಂ. ತಿಪ್ಪೇಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ತಮ್ಮ ಸಂಸ್ಥೆಯು ಶೈಕ್ಷಣಿಕ ತರಬೇತಿ ಜೊತೆಗೆ ನೈತಿಕ ಶಿಕ್ಷಣಕ್ಕೂ ಒತ್ತು ನೀಡುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಅಪ್ಪು ಯುವ ಸೇವಾ ಸಂಸ್ಥೆಯ ಎಸ್.ಎಂ. ಮಂಜುನಾಥ, ಕಸಾಪ ಜಿಲ್ಲಾ ಅಧ್ಯಕ್ಷ ಡಾ ನಿಷ್ಠಿ ರುದ್ರ್ಪ, ಗೌರವ ಕಾರ್ಯದರ್ಶಿ ಡಾ. ಕೆ. ಶಿವಲಿಂಗಪ್ಪ ಹಂದಿಹಾಳು, ಬಿ. ಚಂದ್ರಶೇಖರ ಆಚಾರಿ, ಎ. ಎನ್. ಸಿದ್ದೇಶ್ವರಿ, ವೀಣಾ ಉಪಸ್ಥಿತರಿದ್ದರು.ಗೌರವ ಕೋಶಾಧ್ಯಕ್ಷ ಡಾ. ಬಸವರಾಜ ಗದಗಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.