ಗವಾನ ಗ್ರಾಮದಲ್ಲಿ ಅಂಬೇಡ್ಕರ ಸ್ಮಾರಕ ಬೃಹತ್ ಪುತ್ಥಳಿ ನಿರ್ಮಿಸುವ ಚಿಂತನೆ: ಜೊಲ್ಲೆ
ಚಿಕ್ಕೋಡಿ 12: ಸಂವಿಧಾನ ಶಿಲ್ಪಿ ಅಂಬೇಡ್ಕರ ನಿಪ್ಪಾಣಿಗೆ ಆಗಮಿಸಿ 100 ವರ್ಷ ಪೂರೈಸಿದ ಸವಿನೆನಪಿಗಾಗಿ ಗವಾನ ಗ್ರಾಮದಲ್ಲಿ 10 ಎಕರೆ ಜಾಗದಲ್ಲಿ ಸ್ಮಾರಕ ಮತ್ತು ಕುದುರೆ ಮೇಲೆ ಕುಳಿತಿರುವ ಬೃಹತ್ ಪುತ್ಥಳಿ ನಿರ್ಮಾಣ ಮಾಡುವ ಚಿಂತನೆ ಇದೆ. ಏಪ್ರಿಲ್ 15ರಂದು ನಿಪ್ಪಾಣಿಯಲ್ಲಿ ನಡೆಯುವ ಬೃಹತ್ ಸಮಾವೇಶಕ್ಕೆ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಅಂಬೇಡ್ಕರ ಅಭಿಮಾನಿಗಳು ಸಹಸ್ರ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಇಡೀ ಜಗತ್ತಿನಲ್ಲಿ ದೊಡ್ಡ ಸಂವಿಧಾನ ರಚಿಸಿದ ಅಂಬೇಡ್ಕರ ಕೃಪೆಯಿಂದ ನಾನು ನಿಪ್ಪಾಣಿ ಶಾಸಕಿಯಾಗಲು ಅರ್ಹತೆ ಕಲ್ಪಿಸಿದ್ದಾರೆ. ಅಂಬೇಡ್ಕರ ಶತಾಬ್ದಿ ಕಾರ್ಯಕ್ರಮ ಮಾಡಲು ರಾಜ್ಯ ಮತ್ತು ಕೇಂದ್ರ ಬಿಜೆಪಿ ವರಿಷ್ಠರು ಎಲ್ಲ ರೀತಿಯ ಸಹಕಾರ ಕೊಟ್ಟಿದ್ದಾರೆ ಎಂದರು.
ಚಳಿಗಾಲದ ಅಧಿವೇಶನ ಸಂಧರ್ಭದಲ್ಲಿ ನಿಪ್ಪಾಣಿಗೆ ಬಾಬಾಸಾಹೇಬ ಅಂಬೇಡ್ಕರ್ ಬಂದು 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೃಹತ್ ಸಮಾವೇಶ ಆಗಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೆ.ಆದರೆ ಸರ್ಕಾರದಿಂದ ಯಾವ ರೀತಿಯ ಬೆಂಬಲ ಸಿಗಲಿಲ್ಲ.ಗಾಂಧೀಜಿಯವರ ಬೆಳಗಾವಿ ಬಂದು ನೂರು ವರ್ಷವಾಯಿತು. ಅಲ್ಲಿ ಬೃಹತ್ ಸಮಾವೇಶವಾಯಿತು. ಆದರೆ ಅಂಬೇಡ್ಕರರವರು ನಿಪ್ಪಾಣಿಗೆ ಬಂದು ನೂರು ವರ್ಷ ಪೂರೈಸಿದೆ. ಸರ್ಕಾರಕ್ಕೆ ಅಂಬೇಡ್ಕರ್ ರವರ ಸ್ಮರಣೆ ಯಾಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯ ಬಿಜೆಪಿ ಮುಖಂಡರಾದ ಆರ್.ಆಶೋಕ, ಚಲವಾದಿ ನಾರಾಯಣಸ್ವಾಮಿ, ಎನ್.ಮಹೇಶ ಮತ್ತು ಕೆಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದಲ್ಲಿ ಭೀಮಯಾತ್ರೆಗೆ ಅದ್ದೂರಿ ಚಾಲನೆ ಸಿಕ್ಕಿದೆ. ಈಗ ಬೆಂಗಳೂರಿನಿಂದ ಭೀಮರಥ ನಿಪ್ಪಾಣಿ ಕಡೆ ಬರುತ್ತಿದೆ. ಏ 15 ರಂದು ನಿಪ್ಪಾಣಿಗೆ ಆಗಮೀಸಲಿದೆ ಎಂದರು.
ನಿಪ್ಪಾಣಿ ನಗರದಲ್ಲಿ ಮೂರು ದಿನಗಳ ಕಾಲ ವಾಸ ಇದ್ದ ಅಂಬೇಡ್ಕರ ಅವರು ಕುದುರೆ ಮೇಲೆ ಗವಾನ ಗ್ರಾಮದವರೆಗೆ ವಾಯುವಿಹಾರಕ್ಕೆ ಹೋಗುತ್ತಿದ್ದರು. ಅಲ್ಲಿ 10 ಎಕರೆ ಜಾಗ ಖರೀದಿ ಮಾಡಿ ಸ್ಮಾರಕ ನಿರ್ಮಾಣ ಮಾಡಲು ಚಿಂತನೆ ಮಾಡಲಾಗಿದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ 1 ಕೋಟಿ ರೂ ಅನುದಾನ ಮಂಜೂರಾಗಿತ್ತು. ಈಗ ನನ್ನ ಶಾಸಕರ ಅನುದಾನದಲ್ಲಿ 1 ಕೋಟಿ ರೂ ಕೊಡಲಾಗುತ್ತದೆ. ಒಟ್ಟು 2 ಕೋಟಿ ರೂ ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಮಾಡುವ ಸಂಕಲ್ಪ ಇದೆ ಎಂದರು.
ಅಂಬೇಡ್ಕರ ಕುದುರೆ ಮೇಲೆ ಹೋಗುವ ಪೋಟೋ ಎಲ್ಲಿಯೂ ಇಲ್ಲ, ಆದರೆ ನಿಪ್ಪಾಣಿಯಲ್ಲಿ ಆ ಪೋಟೋ ಸಿಕ್ಕಿದೆ. ಮುಂಬರುವ ದಿನಗಳಲ್ಲಿ ಕುದುರೆ ಮೇಲೆ ಕುಳಿತಿರುವ ಅಂಬೇಡ್ಕರ ಬೃಹತ್ ಪುತ್ಥಳಿ ನಿರ್ಮಾಣ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮಕ್ಕೆ ಗಣ್ಯರು: ಕೇಂದ್ರ ಸಚಿವ ಚಿರಾಗ ಪಾಸ್ವಾನ, ಪ್ರಲ್ಹಾದ ಜೋಶಿ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್ ಮತ್ತು ರಾಜ್ಯದ ಬಿಜೆಪಿ ಎಲ್ಲ ವರಿಷ್ಠರು ಕಾರ್ಯಕ್ರಮಕ್ಕೆ ಆಗಮೀಸಲಿದ್ದಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಸ್ಪೋಕೋ ಉಪಾಧ್ಯಕ್ಷ ಮಹೇಶ ಭಾತೆ, ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶಾಂಭವಿ ಅಶ್ವಥಪೂರ, ದುಂಡಪ್ಪ ಬೆಂಡವಾಡೆ, ಬಾಬಾಸಾಹೇಬ ಕೆಂಚನ್ನವರ, ಪವನ ಮಹಾಜನ, ಸಂಜಯ ಮೈಶಾಳೆ ಸೇರಿದಂತೆ ಮುಂತಾದವರು ಇದ್ದರು.