ಎಸ್ಎಸ್ಎಲ್ಸಿಯಲ್ಲಿ ರಾಜ್ಯಕ್ಕೆ ದ್ವಿತಿಯ ಸ್ಥಾನ ಪ್ರಜ್ವಲ್ಗೆ ಪೇಜಾವರ ಮಠದ ಶ್ರೀಗಳಿಂದ ಆಶೀರ್ವಾದ
ವಿಜಯಪುರ 03: ಇಂದು ಪ್ರಪಂಚವು ಆಂಗ್ಲ ಭಾಷೆಯ ಕಡೆಗೆ ವಾಲುತ್ತಿರುವ ಸನ್ನಿವೇಶದಲ್ಲಿ ಪಟ್ಟಣದಲ್ಲಿದ್ದುಕೊಂಡು ಕನ್ನಡ ಮಾಧ್ಯಮದಲ್ಲಿ ಓದಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಳ್ಳುವುದು ಎಂದರೆ ಅದೊಂದು ದೊಡ್ಡ ಮಟ್ಟದ ಸಾಧನೆಯಾಗಿದೆ. ಆ ಸಾಧನೆಯ ಹಾದಿಯನ್ನು ಕ್ರಮಿಸುವಲ್ಲಿ ಯಶಸ್ವಿಯಾಗಿರುವ ಪ್ರಜ್ವಲ್ ಪತ್ತಾರಗೆ ಶುಭವಾಗಲಿ ಎಂದು ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿಯವರು ಹೇಳಿದರು. ನಗರದ ಎಕ್ಸಲಂಟ್ ಕನ್ನಡ ಮಾಧ್ಯಮ ಶಾಲೆಗೆ ಆಗಮಿಸಿದ ಪೂಜ್ಯರು 2024-25 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡ ವಿದ್ಯಾರ್ಥಿ ಪ್ರಜ್ವಲ್ ಪತ್ತಾರ ಹಾಗೂ ಅವನ ಪಾಲಕರಿಗೆ ಆಶೀರ್ವದಿಸಿ ಮಾತನಾಡಿದ ಅವರು ಗುಣ ಮಟ್ಟದ ಶಿಕ್ಷಣ ನೀಡುವ ಶಾಲೆಗಳಿಂದ ಜನಗಳು ಅತ್ಯುತ್ತಮವಾದ ಫಲಿತಾಂಶವನ್ನು ನೀರೀಕ್ಷಿಸುತ್ತಿರುತ್ತಾರೆ. ಅವರ ನೀರೀಕ್ಷೆಗೆ ತಕ್ಕಂತೆ ಎಕ್ಸಲಂಟ್ ಶಾಲೆಯ ವಿದ್ಯಾರ್ಥಿ 624 ಅಂಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಅದ್ವಿತೀಯ ಸಾಧನೆ ಮಾಡಿದ್ದು ಎಲ್ಲ ಮಕ್ಕಳಿಗೂ ಮಾದರಿಯಾಗುವಂತಹದು. ಹೆತ್ತವರ ಕನಸನ್ನು ಈಡೇರಿಸುವುದು ಮಕ್ಕಳ ಮೊದಲ ಕರ್ತವ್ಯವಾಗಿರಬೇಕು. ಆ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಶ್ರೇಯ ಪ್ರಜ್ವಲ್ಗೆ ಸಲ್ಲುತ್ತದೆ. ಅಷ್ಟು ಮಾತ್ರವಲ್ಲ ಇವರ ಸಾಧನೆಯ ಹಿಂದಿರುವ ಶಾಲೆಯ ಆಡಳಿತ ಮಂಡಳಿ, ಕಲಿಸಿದ ಶಿಕ್ಷಕ ಶಿಕ್ಷಕಿಯರ ಪಾತ್ರವನ್ನು ನೆನೆಯಲೇ ಬೇಕಾಗುತ್ತದೆ. ಅವರ ನಿರಂತರ ಮಾರ್ಗದರ್ಶನದ ಪರಿಣಾಮವಾಗಿಯೇ ಇಂದು ಈ ಸಾಧನೆ ಮಾಡುವುದಕ್ಕೆ ಸಾಧ್ಯವಾಗಿದ್ದು ಅವರಿಗೂ ಭಗವಂತ ಒಳಿತು ಮಾಡಲಿ ಎಂದು ಶುಭ ಹಾರೈಸಿದರು. ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯು ಗುಣ ಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ನಾಡಿಗೆ ಉತ್ತಮವಾಗಿರುವ ಜ್ಞಾನಿಗಳನ್ನು ನಿರಂತರವಾಗಿ ನೀಡುತ್ತ ಬರುತ್ತಿರುವುದು ಮಕ್ಕಳ ಈ ಸಾಧನೆಯ ಮೂಲಕ ತಿಳಿದು ಬರುತ್ತದೆ. ಮುಂದಿನ ದಿನಗಳಲ್ಲಿಯೂ ಸಹ ಇನ್ನೂ ಹೆಚ್ಚಿನ ಪ್ರತಿಭೆಗಳು ಈ ಸಂಸ್ಥೆಯ ಮೂಲಕ ಹೊರ ಬರುವಂತಾಗಲಿ. ಸಂಸ್ಥೆಯು ಉತ್ತರೋತ್ತರವಾಗಿ ಬೆಳಯಲಿ. ಇಂದು ಬಂದಿರುವ ಫಲಿತಾಂಶ ಮುಂದಿನ ಬಾರಿ ನೂರ್ಮಡಿಯಾಗಲಿ ಎಂದು ಆಶೀರ್ವದಿಸಿದರು. ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಕೌಲಗಿ, ಸಂಸ್ಥೆಯ ಗೌರವ ಸದಸ್ಯ ರಾಜಶೇಖರ ಕೌಲಗಿ, ಎಕ್ಸಲಂಟ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ಎಂ. ಆಯ್. ಬಿರಾದಾರ, ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಪ್ರಜ್ವಲ್ ಪತ್ತಾರ ಅವರ ತಂದೆ ರಾಜಶೇಖರ್ ಪತ್ತಾರ, ತಾಯಿ ರಾಜಶ್ರೀ ಪತ್ತಾರ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.