ಲೋಕದರ್ಶನ ವರದಿ
ಬ್ಯಾಡಗಿ01: ಪ್ರತಿಯೊಂದು ರಂಗದಲ್ಲಿಯೂ ಹೆಣ್ಣು ಮಕ್ಕಳ ಸಾಧನೆಯು ಮುಂಚೂಣಿಯಲ್ಲಿದ್ದು, ಉತ್ತಮ ಭವಿಷ್ಯಕ್ಕಾಗಿ ಲಿಂಗ ಅಸಮಾನತೆಯನ್ನು ತೋರದೆ ಗಂಡು - ಹೆಣ್ಣು ಸಮಾನರು ಎಂಬ ನಿಲುವನ್ನು ಪ್ರತಿಯೊಬ್ಬರೂ ಹೊಂದುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮಲಿಂಗಪ್ಪ ಅರಳಿಗುಪ್ಪಿ ಕರೆ ನೀಡಿದರು.
ಸ್ಥಳೀಯ ತಾಲೂಕಾ ಪಂಚಾಯತ ಸಾಮಥ್ರ್ಯ ಸೌಧದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕ ಪಂಚಾಯತ ಹಾಗೂ ಶಿಶು ಅಭಿವೃದ್ಧಿ ಯೋಜನೆ ಇವರುಗಳ ಸಂಯುಕ್ತಾಶ್ರಯದಲ್ಲಿ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯಡಿ ಏರ್ಪಡಿಸಿದ್ದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹೆಣ್ಣು ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮಾಜದ ಅನಿಷ್ಠ ಪದ್ಧತಿ ಗಳಾದ ಬಾಲ್ಯವಿವಾಹ, ಹೆಣ್ಣು ಭ್ರೂಣ ಹತ್ಯೆಗಳ ತಡೆಗೆ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲ ಸಮುದಾಯಗಳ ಮೂಲಕ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕಾ ಶಿರಸ್ತೇದಾರ ರಾಜಣ್ಣ ಬಂಕಾಪುರ, ಗಂಡು - ಹೆಣ್ಣು ಸಮಾನತೆಯಿದ್ದರೆ ರಾಷ್ಟ್ರದ ಅಭಿವೃದ್ಧಿ ಸಾಧ್ಯ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಣ್ಣು ಮಕ್ಕಳಿಗಾಗಿ ಸುಕನ್ಯಾ ಸಮೃದ್ಧಿ, ಮುದ್ರಾ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದು, ಅವುಗಳ ಸದುಪಯೋಗ ಪಡೆದುಕೊಂಡು ಪಾಲಕರು ಸಹ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಬದ್ಧರಾಗಿರಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮತ್ತೂರು ಗ್ರಾ.ಪಂ. ಅಧ್ಯಕ್ಷೆ ರೆಹನಾಭಾನು ನದಾಫ ವಹಿಸಿದ್ದರು. ಅತಿಥಿಗಳಾಗಿ ಗ್ರಾ.ಪಂ. ಕಾರ್ಯದರ್ಶ ಫಕ್ಕೀರಪ್ಪ ಯತ್ನಳ್ಳಿ, ಲಲಿತಾ ಕೆಸರಳ್ಳಿಮಠ ಆಗಮಿಸಿದ್ದರು.
ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ಲಾವಣ್ಯ ಕೋನಪ್ಪನವರ, ರೇಷ್ಮಾ ಬಡ್ಡಿಯವರ, ಪ್ರತಿಭಾ ಕಾರಂಜಿಯಲ್ಲಿ ಭಾಷಣ ಸ್ಪರ್ಧಾ ವಿಜೇತರಾದ ಹೀನಾ ಕೌಸರ್ ಕಾಟೇನಹಳ್ಳಿ, ಸೌಮ್ಯ ಹೊಂಡದಗೌಡ್ರ, ಕ್ರೀಡಾ ವಿಭಾಗದಲ್ಲಿ ವಿಜೇತರಾದ ಕಾವ್ಯ ಲಿಂಗಣ್ಣನವರ, ಸೀತಾ ಲಮಾಣಿ ಅವರುಗಳನ್ನು ಸನ್ಮಾನಿಸಿ ನಗದು ಬಹುಮಾನ ವಿತರಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತಯರು, ಆರೋಗ್ಯ ಸಹಾಯಕರು ಹಾಗೂ ಆಶಾ ಕಾರ್ಯಕರ್ತಯರು ಉಪಸ್ಥಿತರಿದ್ದರು. ಅಂಗನವಾಡಿ ಮೇಲ್ವಚಾರಕಿಯರಾದ ಉಮಾ ಕಾರಜೋಳ ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿದರು. ಚನ್ನಮ್ಮ ನಾಗವ್ವನವರ ವಂದಿಸಿದರು.