ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ ಸ್ಥಳಾಂತರ ವಿರೋಧಿಸಿ ಪ್ರತಿಭಟನೆ

Protest against the relocation of the office of the Joint Director of the Handloom and Textiles Depa

ಬಳ್ಳಾರಿ 23: ಬಳ್ಳಾರಿಯಲ್ಲಿರುವ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯನ್ನು ಕಲ್ಬುರ್ಗಿಗೆ ಸ್ಥಳಾಂತರ ಮಾಡುವ ಪ್ರಯತ್ನವನ್ನು ಕೈಬಿಟ್ಟು, ಬಳ್ಳಾರಿಯಲ್ಲೇ ಮುಂದುವರೆಸಲು ಆಗ್ರಹಿಸಿ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.  

ಸಮಾಜಿಕ ಹೋರಾಟಗಾರ, ಲೆಕ್ಕಪರಿಶೋಧಕ ಸಿರಿಗೇರಿ ಪನ್ನರಾಜ್ ಮತ್ತು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು ಪ್ರತಿಭಟನೆಯ ನೇತೃತ್ವವಹಿಸಿದ್ದು, ಬಳ್ಳಾರಿಯಲ್ಲಿರುವ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯನ್ನು ಕಲ್ಬುರ್ಗಿಗೆ ಸ್ಥಳಾಂತರ ಮಾಡುವ ಪ್ರಯತ್ನವನ್ನು ಕೈಬಿಟ್ಟು, ಬಳ್ಳಾರಿಯಲ್ಲೇ ಮುಂದುವರೆಸಬೇಕು. ಈ ಕಚೇರಿ ಕಲ್ಬುರ್ಗಿಗೆ ಸ್ಥಳಾಂತರವಾದಲ್ಲಿ ಸಾರ್ವಜನಿಕರ ಸಹಕಾರದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದರು. ಬ್ರಿಟೀಷರ ಕಾಲದ ಆಡಳಿತದಿಂದಲೂ ಈಗಲೂ ಬಳ್ಳಾರಿ ಜಿಲ್ಲೆ ಹಾಗೂ ನೆರೆಯ ಆಂಧ್ರದ ಗಡಿ ಗ್ರಾಮಗಳಲ್ಲಿ ಸಿದ್ದ ಉಡುಪು ಉದ್ಯಮ ಗೃಹ ಉದ್ಯಮವಾಗಿದೆ. ಪ್ರಸ್ತುತ ಬಳ್ಳಾರಿಯಲ್ಲಿ 1,500 ರಿಂದ 2,000 ಗಾಮೆಂರ್ಟ್ ತಯಾರಿಕಾ ಘಟಕಗಳಿವೆ. ಜೀನ್ಸ್‌ ಗಾರ್ಮೆಂಟ್, ಜೀನ್ಸ್‌ ವಾಷಿಂಗ್ ಮತ್ತು ಜಾಬ್ ವಕಿಂರ್ಗ್ ಘಟಕಗಳು ಕಾರ್ಯನಿರ್ವಹಿಸುತ್ತಿವೆ.  

ಬಳ್ಳಾರಿ ನಗರದಲ್ಲಿಯೇ 50,000 ಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಿಗಳಿದ್ದಾರೆ. ಪ್ರತೀ ವರ್ಷ ರೂ. 2,000 ಕೋಟಿ ವ್ಯವಹಾರ ನಡೆಯುತ್ತಿದೆ ಎಂದರು. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಅವರು, ಬಳ್ಳಾರಿಯನ್ನು ಕೇಂದ್ರವನ್ನಾಗಿಸಿ ಬಳ್ಳಾರಿ ಜೀನ್ಸ್‌ ಅಪ್ಪರಲ್ ಪಾರ್ಕ್‌ (4ನೇ ಹಂತ, ಮುಂಡ್ರಗಿ ಕೈಗಾರಿಕಾ ಪ್ರದೇಶ): 80+ ಜೀನ್ಸ್‌ ವಾಷಿಂಗ್ ಘಟಕಗಳು, 1000+ ಉದ್ಯೋಗದ ಯೋಜನೆ ಪ್ರಸ್ತಾವನೆಯಲ್ಲಿದೆ. ಅಲ್ಲದೇ, ಬಳ್ಳಾರಿ ಗಾಮೆಂರ್ಟ್ ಇಂಡಸ್ಟ್ರಿ 12 ಎಕರೆ ಭೂಮಿಯಲ್ಲಿ 100 ಕೋಟಿ ರೂ ಬಂಡವಾಳದೊಂದಿದೆ. ರೂಪನಗುಡಿ ರಸ್ತೆಯಲ್ಲಿ ಆದಿತ್ಯ ಟೆಕ್ಸಟೈಲ್ ಪಾರ್ಕ್‌ ಪ್ರೈ. ಲಿ. 17 ಎಕರೆ ಭೂಮಿಯಲ್ಲಿ 200 ಕೋಟಿ ಬಂಡವಾಳದ ಜೊತೆ 15,000 ಉದ್ಯೋಗದ ಗುರಿ ಹಾಗೂ ಇದೇ ರೀತಿಯಲ್ಲಿ ಹತ್ತಕ್ಕೂ ಹೆಚ್ಚಿನ ಯೋಜನೆಗಳು ಪ್ರಸ್ತಾವನೆಯ ಹಂತದಲ್ಲಿವೆ. ಇಂಥಹಾ ಪ್ರಸಂಗದಲ್ಲಿ ಜಂಟಿ ನಿರ್ದೇಶಕರ ಕಚೇರಿಯನ್ನು ‘ವಿನಾಕಾರಣ’ ಸ್ಥಳಾಂತರ ಮಾಡುತ್ತಿರುವುದು ಸೂಕ್ತವಲ್ಲ ಎಂದರು. ಜವಳಿ ಮತ್ತು ಕೈಮಗ್ಗ ಜಂಟಿ ನಿರ್ದೇಶಕರ ಕಚೇರಿಯನ್ನು ಕಲಬುರ್ಗಿಗೆ ಸ್ಥಳಾಂತರಿಸುವುದರಿಂದ ಆಡಳಿತಾತ್ಮಕವಾಗಿ ಹಿ ತಾಂತ್ರಿಕವಾಗಿ ಸಾಕಷ್ಟು ಸಮಸ್ಯೆಗಳಾಗುತ್ತವೆ.  

ಬಳ್ಳಾರಿಯ ರೆಡಿಮೇಡ್ ಗಾರ್ಮೆಂಟ್ ಉದ್ಯಮವು ನಿರುತ್ಸಾಹಗೊಳ್ಳಲಿದೆ. ಬಳ್ಳಾರಿಯ ಅಭಿವೃದ್ಧಿ, ಉದ್ಯಮಿಗಳ, ಕಾರ್ಮಿಕರ ಮತ್ತು ಹೂಡಿಕೆದಾರರ ಭವಿಷ್ಯ ಮಸುಕಾಗಲಿದೆ. ಗಾರ್ಮೆಂಟ್ ಉದ್ಯಮಕ್ಕೆ ಪೂರಕವಾದ ಯಾವುದೇ ಕೈಗಾರಿಕಾ ಘಟಕಗಳು ಮತ್ತು ರೆಡಿಮೇಡ್ ಗಾರ್ಮೆಂಟ್ ಉದ್ಯಮಗಳು ಇಲ್ಲದೇ ಇರುವ ಕಲ್ಬುರ್ಗಿಗೆ ಈ ಕಚೇರಿಯನ್ನು ಬಳ್ಳಾರಿಯಲ್ಲಿಯೇ ಮುಂದುವರೆಸಬೇಕು. ಸರ್ಕಾರ ಕಲ್ಬುರ್ಗಿಗೇ ಜವಳಿ ಮತ್ತು ಕೈಮಗ್ಗ ಜಂಟಿ ನಿರ್ದೇಶಕರ ಪ್ರತ್ಯೇಕ ಕಚೇರಿಯನ್ನು ತೆರೆಯಲಿ ಎಂದು ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.  

ಗಾಂಧಿಭವನದಿಂದ ಪ್ರಾರಂಭವಾದ ಪ್ರತಿಭಟನೆಯು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಮಾವೇಶಗೊಂಡು, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳು ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷರಾದ ಬಿ. ಮಹಾರುದ್ರಗೌಡ, ಉಪಾಧ್ಯಕ್ಷರಾದ ಎಸ್‌. ದೊಡ್ಡನಗೌಡ, ಗೌರವ ಕಾರ್ಯದರ್ಶಿಗಳಾದ ಕೆ.ಸಿ. ಸುರೇಶಬಾಬು, ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ, ವಿ. ರಾಮಚಂದ್ರ, ಬಳ್ಳಾರಿ ಜಿಲ್ಲಾ ಕಾಟನ್ ಅಸೋಸಿಯೇಷನ್, ಬಳ್ಳಾರಿ ಗಾಮೆಂರ್ಟ್ಸ್‌ ತಯಾರಕರ ಸಂಘ, ಬಳ್ಳಾರಿ ಜೀನ್ಸ್‌ ವಾಷಿಂಗ್ ಅಸೋಸಿಯೇಷನ್, ಬಳ್ಳಾರಿ ಟೈಲರಿಂಗ್ ಅಸೋಸಿಯೇಷನ್, ಬಳ್ಳಾರಿ ಜಿಲ್ಲಾ ಇಂಡಸ್ಟ್ರೀಸ್ ಅಸೋಸಿಯೇಷನ್ ಹಾಗೂ ಬಳ್ಳಾರಿ ಜಿಲ್ಲೆಯ ವಿವಿಧ ಸಂಘಟನೆಗಳ ಒಕ್ಕೂಟ ಪಾಲ್ಗೊಂಡಿದ್ದವು.