ಬಳ್ಳಾರಿ,ಏ.24: ಗ್ರಾಮೀಣ ಜನರ ಆರೋಗ್ಯ ಸೇವೆಗಳಿಗಾಗಿ ತುರ್ತು ಸಂದರ್ಭದಲ್ಲಿ ಉಪಯುಕ್ತವಾದ ಅಂಬುಲೆನ್ಸ್ ಸೇವೆಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಲಕುಂದಿ ಗ್ರಾಮ ಪಂಚಾಯತ್, ಪ್ರಾಥಮಿಕ ಆರೋಗ್ಯ ಕೇಂದ್ರ ಶಿಡಿಗಿನಮೊಳ ಇವರೊಂದಿಗೆ ವಿ.ಆರ್.ಕೆ.ಪಿ ಸ್ಪಾಂಜ್ ಅಂಡ್ ಪವರ್ ಪ್ಲಾಂಟ್ ಎಲ್.ಎಲ್.ಪಿ ಹಲಕುಂದಿ ಇವರು ಹಲಕುಂದಿ, ಹೊನ್ನಳ್ಳಿ ತಾಂಡ ಹಾಗೂ ಹೊನ್ನಳ್ಳಿ ಗ್ರಾಮಗಳಿಗೆ ಒಳಗೊಂಡಂತೆ ತುರ್ತು ಸನ್ನಿವೇಶಗಳಲ್ಲಿ ಸಹಾಯಕವಾಗುವ ಮಿನಿ ಅಂಬುಲೆನ್ಸ್ ಚಾಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆರೋಗ್ಯದ ಸಮಸ್ಯೆಗಳು ವ್ಯಕ್ತಿಗೆ ಯಾವ ಸಂದರ್ಭದಲ್ಲಿ ಯಾವ ರೀತಿ ಬಂದೆರುಗುವುದನ್ನು ಊಹಿಸಲು ಯಾರಿಗೂ ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಮನೆಯ ಹತ್ತಿರವೇ ಆಗಮಿಸಿ ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆದುಕೊಂಡು ಹೋಗುವ ಸೌಲಭ್ಯವನ್ನು ಅವಶ್ಯಕತೆ ಇರುವ ತುರ್ತು ಸಂದರ್ಭದಲ್ಲಿ ಪಡೆಯುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಜನತೆಯು ಕೈ ಜೋಡಿಸಬೇಕು ಎಂದು ಹೇಳಿದರು.
ಸರ್ಕಾರವು ಸಾರ್ವಜನಿಕರ ಸೇವೆಗೆ ತುರ್ತು ಸಂದರ್ಭಗಳಲ್ಲಿ ಮನೆಯಿಂದ ಹತ್ತಿರದ ಆಸ್ಪತ್ರೆಗಳಿಗೆ ತೆರಳಲು 108 ತುರ್ತು ವಾಹನದ ಸೌಲಭ್ಯ ಒದಗಿಸಿದ್ದು, ಪ್ರಸ್ತುತ ಸಮುದಾಯದ ಆರೋಗ್ಯ ಸೇವೆಯನ್ನು ಮನಗಂಡು ವಿ.ಆರ್.ಕೆ.ಪಿ ಕಂಪನಿಯ ಸಿಎಸ್‌ಆರ್ ಅನುದಾನದ ಅಡಿ ಒದಗಿಸಿರುವ ಅಂಬುಲೆನ್ಸ್ ಅನ್ನು ಗರ್ಭಿಣಿ ಮಹಿಳೆಯರು, ಅಪಘಾತ ಸಂದರ್ಭದಲ್ಲಿ, ಬೆಂಕಿ ಅವಘಡ ಮತ್ತು ಇತರೆ ಯಾವುದೇ ತುರ್ತು ಸನ್ನಿವೇಶಗಳಲ್ಲಿ ಸದುಪಯೋಗ ಪಡಿಸಿಕೊಂಡು ಆರೋಗ್ಯ ಸುಧಾರಣೆಗೆ ಕೈ ಜೋಡಿಸಲು ವಿನಂತಿಸಿದರು.
ವಿ.ಆರ್.ಕೆ.ಪಿ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ಸಂದೀಪ್ ಮಾತನಾಡಿ ಸಿ.ಎಸ್.ಆರ್ ಅನುದಾನದಡಿ ರೂ.8 ಲಕ್ಷ ವೆಚ್ಚದಲ್ಲಿ ಅಂಬುಲೆನ್ಸ್ ಒದಗಿಸಲಾಗಿದ್ದು, ಇಬ್ಬರು ತರಬೇತಿ ಪಡೆದ ವಾಹನ ಚಾಲಕರು ಸರತಿಯ ಮೇಲೆ ಕಾರ್ಯನಿರ್ವಹಿಸುತ್ತಾರೆ. ಅಂಬುಲೆನ್ಸ್‌ನಲ್ಲಿ ಆಕ್ಸಿಜನ್ ಸೌಲಭ್ಯ ಹಾಗೂ ಸ್ಟ್ರೆಚರ್ ಹೊಂದಿದ ಬೆಡ್‌ನೊಂದಿಗೆ ರೋಗಿಗಳೊಂದಿಗೆ ಪಾಲಕರು ಕುಳಿತುಕೊಳ್ಳುವ ಆಸನದ ವ್ಯವಸ್ಥೆ ಇದ್ದು, ಸಾರ್ವಜನಿಕರು ಬಳ್ಳಾರಿಯ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುವ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.
ಹಲಕುಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹೊನ್ನೂರಮ್ಮ ಅಂಬುಲೆನ್ಸ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಸುವರ್ಣಮ್ಮ, ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಆರ್.ಅಬ್ದುಲ್ಲಾ, ವೈದ್ಯಾಧಿಕಾರಿ ಡಾ.ಸಂತೋಷ್ ಹೆಬ್ಬಾಳ್, ಗ್ರಾಮ ಪಂಚಾಯಿತಿ ಸದಸ್ಯರಾದ ಕೇಶವ್, ನಾಗರಾಜ್, ಕಟ್ಟಿಮನಿ ಬಸಪ್ಪ, ಶಿವಣ್ಣ, ಬುಡೇಂಸಾಬ್, ಕುಮಾರಸ್ವಾಮಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ಹೆಚ್ ದಾಸಪ್ಪನವರ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಂ.ಪ್ರಭಾಕರ್, ಕಾರ್ಯದರ್ಶಿ ರುದ್ರ್ಪ, ವಿ.ಆರ್.ಕೆ.ಪಿ ಕಂಪನಿಯ ಸಹಾಯಕ ಜನರಲ್ ಮ್ಯಾನೇಜರ್ ಗೌರಿ ಪ್ರಸಾದ್, ಪಿ.ಆರ್.ಒ ಪೀರಸಾಬ್, ಮುಖಂಡರಾದ ಗಾದಿಲಿಂಗಪ್ಪ, ತಿಮ್ಮನಗೌಡ, ಸಿಹೆಚ್‌ಒ ವಿಜಯಕುಮಾರ್, ಹೆಚ್‌ಐಒ ಹನುಮಂತಪ್ಪ, ಆಶಾಕಾರ್ಯಕರ್ತೆಯರಾದ ಪಲ್ಲವಿ, ರೇಣುಕ, ಗಂಗಮ್ಮ ಚೆನ್ನಮ್ಮ ಉಪಸ್ಥಿತರಿದ್ದರು.