ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರೀಶೀಲನಾ ಸಭೆ

Quarterly KDP Progress Review Meeting

ಅಭಿವೃದ್ಧಿ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೂಚನೆ 

ಬೆಳಗಾವಿ,ಮೇ.13: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಬೇಸಿಗೆ ತೀವ್ರವಾಗಿರುವುದರಿಂದ ಕುಡಿಯುವ ನೀರು ಪೂರೈಕೆಯಲ್ಲಿ ಸಮಸ್ಯೆಗಳಾಗದಂತೆ ನಿಗಾವಹಿಸಬೇಕು ಎಂದು ಲೋಕೊಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ (ಮೇ 13) ಜರುಗಿದ 2024-25ನೇ ಸಾಲಿನ ನಾಲ್ಕನೇ ತ್ರೈಮಾಸಿಕ ಕೆ.ಡಿ.ಪಿ.ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಜಲಜೀವನ್ ಮಿಷನ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿರುವ ಎಲ್ಲ ಕಾಮಗಾರಿಗಳನ್ನು ಆದಷ್ಟು ಬೇಗನೇ ಪೂರ್ಣಗೊಳಿಸಬೇಕು. ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿಗಳನ್ನು ಪೂರ್ಣಗೊಳಿಸುವುದರ ಜೊತೆಗೆ ಇತರೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸರಕಾರಕ್ಕೆ ಸಲ್ಲಿಸಬೇಕಾದ ಪ್ರಸ್ತಾವನೆಗಳನ್ನು ತ್ವರಿತವಾಗಿ ಸಲ್ಲಿಸುವಂತೆ ಸೂಚಿಸಿದರು.  

ಜಲಜೀವನ ಮಿಷನ್ ಹಾಗೂ ಮೇಲ್ಮಟ್ಟದ  ಜಲ ಸಂಗ್ರಹಾಗಾರಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆಯಾ ಮತಕ್ಷೇತ್ರಗಳ ಶಾಸಕರುಗಳೊಡನೆ ಸಭೆ ಜರುಗಿಸಿ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು.   

ಜಿಲ್ಲೆಗೆ ಮಂಜೂರಾಗಿರುವ ಕ್ಯಾನ್ಸರ್ ಆಸ್ಪತ್ರೆಯನ್ನು ಬೆಳಗಾವಿ ನಗರದಲ್ಲಿ ಅದರಲ್ಲೂ ಈಗಿರುವ ಬಿಮ್ಸ್‌ ಆವರಣದಲ್ಲಿ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಇದಕ್ಕಾಗಿ ಸೂಕ್ತ ನಿವೇಶನ ಗುರುತಿಸಲಾಗುವುದು ಎಂದರು.  

ಜಿಲ್ಲೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನುರಿತ ತಜ್ಞ ವೈದ್ಯರ ಹಾಗೂ ಸಿಬ್ಬಂದಿಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕುರಿತು ಮುಖ್ಯಮಂತ್ರಿಯವರ ಗಮನಕ್ಕೂ ತರಲಾಗಿದೆ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸರಕಾರ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ.  ಜಿಲ್ಲೆಯಲ್ಲಿ ನಿರ್ಮಾಣವಾದಂತಹ ಆಸ್ಪತ್ರೆಗಳಲ್ಲಿ ವೈದ್ಯರ  ಕೊರತೆ ನಿವಾರಣೆಗೆ ಜಿಲ್ಲೆಯ ಶಾಸಕರೊಂದಿಗೆ ಚರ್ಚಿಸಲಾಗುವುದು ಎಂದರು.   

ವಿಕಲಚೇತನರಿಗೆ ವಿತರಿಸಲಾಗುವ ತ್ರಿಚಕ್ರವಾಹನಗಳನ್ನು ಆಯಾ ಆರ್ಥಿಕ ವರ್ಷದಲ್ಲಿಯೇ ವಿತರಿಸಲು ಕ್ರಮವಹಿಸಬೇಕು. ಯಾವುದೇ ಕಾರಣಕ್ಕೂ ವಾಹನಗಳ ವಿತರಣೆಯಲ್ಲಿ ವಿಳಂಬವಾಗಬಾರದು.  

ಕೊಳಗೇರಿ ಅಭಿವೃದ್ಧಿ ನಿಗಮದ ಅಧಿಕಾರಿ ಸಭೆಗೆ ಆಗಮಿಸದೆ ಇರುವುದು  ಹಾಗೂ ಸಮರ​‍್ಕ ಮಾಹಿತಿ ನೀಡದೇ ಇರುವದರಿಂದ ಅವರ ವಿರುದ್ಧ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿ, ತಮ್ಮ ಹಂತದಲ್ಲಿ ಕೊಳಗೇರಿ ಅಭಿವೃದ್ಧಿ ನಿಗಮದಿಂದ  ಮನೆಗಳ  ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಭೆ ಜರುಗಿಸಿ ಮಾಹಿತಿ ನೀಡಲು ತಿಳಿಸಿದರು.  

ಅಂಗನವಾಡಿ ಕೇಂದ್ರಗಳಿಗೆ ಪೂರೈಸಲಾಗುವ ಮೊಟ್ಟೆ ಸೇರಿದಂತೆ ವಿವಿಧ ಆಹಾರ ಸಾಮಗ್ರಿಗಳ ಗುಣಮಟ್ಟತೆಯನ್ನು ಪರೀಶೀಲಿಸಬೇಕು. ಜಿಲ್ಲೆಯಲ್ಲಿ ಖಾಲಿ ಇರುವಂತಹ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಿಕೊಳ್ಳಲು ಸೂಚಿಸಿದರು.  

ಪ್ರಸಕ್ತ ಸಾಲಿನ ಎಸ್‌.ಎಸ್‌.ಎಲ್‌.ಸಿ. ಫಲಿತಾಂಶ ತೃಪ್ತಿದಾಯಕವಾಗಿಲ್ಲ ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಳಮಟ್ಟದಿಂದ ಉತ್ತಮವಾಗಿ ಕಾರ್ಯನಿರ್ವಹಿಸಿ ಫಲಿತಾಂಶ ಸುಧಾರಣೆಗೆ ಒತ್ತು ನೀಡಲು ಗಂಭಿರವಾಗಿ ಚಿಂತಿಸಲು ತಿಳಿಸಿದರು.  

ಅರಣ್ಯ ಇಲಾಖೆ ಹಕ್ಕು ಪತ್ರ ವಿತರಣೆಗೆ ಸಂಬಂಧಿಸಿದಂತೆ ಇಲಾಖಾ ಅಧಿಕಾರಿಗಳು ತರಬೇತಿ ನೀಡುವದರ ಜೊತೆಗೆ ನಿಯಮಿತವಾಗಿ ಜರಗುವು ಸಭೆಗಳಿಗೆ ಹಾಜರಾಗಬೇಕು.  

ಮುಂದಿನ ಸಭೆಯ ಒಳಗಾಗಿ ಸಚಿವರ ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿ ಇಲಾಖಾವಾರು ಪ್ರಗತಿ ಪರೀಶೀಲನಾ ಸಭೆಗಳನ್ನು ಆಯೋಜಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಸದರಿ ಸಭೆಗೆ ಶಾಸಕರು ಹಾಜರಾಗಲು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು  ತಿಳಿಸಿದರು.  

ಸಭೆಯಲ್ಲಿ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿದ ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ,  ಅವರು, ಶಾಸಕರ ಕ್ಷೇತ್ರ ಪ್ರದೇಶಾಭಿವೃದ್ಧಿ ಅನುದಾನದಡಿ ಕಾಮಗಾರಿಗಾರಿಗಳನ್ನು ಕೈಗೊಳ್ಳುವಂತೆ ಪ್ರಸ್ತಾವನೆ ನೀಡಲಾಗಿರುತ್ತದೆ. ಆದರೆ ಅಧಿಕಾರಿಗಳ ಮಟ್ಟದಲ್ಲಿ ಬಹಳ ನಿಧಾನಗತಿಯ ಕಾರ್ಯದಿಂದಾಗಿ ಅನುದಾನ ಬಳಕೆಗೆ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ಆದ್ದರಿಂದ ಶಾಸಕರು ಅನುದಾನ ಬಿಡುಗಡೆಗೊಳಿಸುವ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು" ಎಂದು ಒತ್ತಾಯಿಸಿದರು.  

ಕೊಳಗೇರಿ ಅಭಿವೃದ್ಧಿ ನಿಗಮದ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಕೌಜಲಗಿ ಅವರು,  ಮನೆ ನಿರ್ಮಾಣಕ್ಕೆ ಈಗಾಗಲೇ ಹಣ ತುಂಬಿರುವ ಫಲಾನುಭವಿಗಳಿಗೆ ಕೂಡಲೇ ಮನೆ ನಿರ್ಮಿಸಿಕೊಡಲು ಕ್ರಮ ವಹಿಸಬೇಕು ಎಂದು ತಿಳಿಸಿದರು.  

ಕೆಲ ಕಚೇರಿಗಳಲ್ಲಿ ಶಾಸಕರ ಅನುದಾನದಡಿ ಕೈಗೊಳ್ಳಲಾಗುವ ಕಾಮಗಾರಿಗಳ ಟೆಂಡರ ಪ್ರಕ್ರಿಯೆ ವಿಳಂಬವಾಗುತ್ತಿರುವುದು ಅತ್ಯಂತ ಗಂಭೀರ ಸಂಗತಿಯಾಗಿದೆ. ಇದರಿಂದಾಗಿ ಸ್ಥಳೀಯವಾಗಿ  ಜನಪ್ರತಿನಿಧಿಗಳು ಮುಜುಗರ ಅನುಭವಿಸಬೇಕಾದ ಪ್ರಸಂಗ ಎದುರಿಸಬೇಕಾಗಿದೆ ಈ ಕುರಿತು ಮೇಲಾಧಿಕಾರಿಗಳು ಗಮನ ಹರಿಸಬೇಕು ಎಂದರು.   

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಎಸ್‌.ಎಸ್‌.ಎಲ್‌.ಸಿ. ಫಲಿತಾಂಶ ತೃಪ್ತಿದಾಯಕವಾಗಿಲ್ಲ. ಬೆಳಗಾವಿ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿದ್ದರೂ  ಈ ಫಲಿತಾಂಶ ಕಳಪೆ ಆಗಿರುವುದ ಕಳವಳಕಾರಿ ಸಂಗತಿಯಾಗಿದ್ದು, ಈ ಕುರಿತು ಶಿಕ್ಷಣ ಇಲಾಖೆ ಗಂಭೀರವಾಗಿ ಚಿಂತಿಸಿ ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಮುಂದಾಗುವಂತೆ ಶಾಸಕ ಕೌಜಲಗಿ ಅವರು ಅಧಿಕಾರಿಗಳಿಗೆ ತಿಳಿಸಿದರು.   

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರಸ ಶಾಸಕರಾದ ಆಸಿಫ್(ರಾಜು) ಸೇಠ್ ಅವರು, ವಿಕಲಚೇತನರಿಗೆ ವಿತರಿಸಲಾಗುವ ತ್ರಿಚಕ್ರ ವಾಹನಗಳನ್ನು ಆಯಾ ಆರ್ಥಿಕ ಸಾಲಿನಲ್ಲಿಯೇ ವಿತರಿಸಬೇಕು. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ವಿಷಯಗಳಿಗೆ ಪ್ರಾಮುಖ್ಯತೆ ನೀಡಬೇಕು ಎಂದು ತಿಳಿಸಿದರು.  

ಬೆಳಗಾವಿ ನಗರದಲ್ಲಿ ಸ್ಥಾಪಿಸಲಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನುರಿತ ತಜ್ಞ ವೈದ್ಯರ ಹಾಗೂ ಸಿಬ್ಬಂದಿಗಳನ್ನು ಶೀಘ್ರವೇ ಭರ್ತಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು   

ಕೊಳಗೇರಿ ಅಭಿವೃದ್ಧಿ ನಿಗಮದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು,  ಮನೆ ನಿರ್ಮಾಣ ಕುರಿತಂತೆ ಕೆಲ ಗುತ್ತಿಗೆದಾರರು ಫಲಾನುಭವಿಗಳಿಂದ ಹಣ ಪಡೆದು ಮನೆ ನಿರ್ಮಿಸದೇ ಹಣ ಹಿಂತಿರುಗಿಸದೆ ಇರುವಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.  

ರಾಯಬಾಗ ಶಾಸಕರಾದ ಧುರ್ಯೋಧನ ಐಹೊಳೆ ಅವರು ಮಾತನಾಡಿ, ರಾಯಬಾಗದಲ್ಲಿನ ಸರಕಾರಿ ಆಸ್ತಿ ಕಬಳಿಸಿದವರ ವಿರುದ್ಧ ದೂರು ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೇ ಸರಕಾರಿ ಆಸ್ತಿಗೆ ಕಂಪೌಂಡ ನಿರ್ಮಿಸಲು ತಿಳಿಸಿದರು.   

ತಮ್ಮ ಕ್ಷೇತ್ರದ ಅಂಗನವಾಡಿ ಕೇಂದ್ರಗಳಲ್ಲಿ ಆಹಾರ ಸಾಮಗ್ರಿಗಳ ಪೂರೈಕೆ ಸಮರ​‍್ಕವಾಗಿ ಅಗದೇ ಇರುವುದರ ಕುರಿತು ಸಭೆಯಲ್ಲಿ ಗಮನ ಸೆಳೆದರು.  

ವಿಧಾನ ಪರಿಷತ್ ಸದಸ್ಯರಾದ ನಾಗರಾಜ ಯಾದವ ಅವರು ಮಾತನಾಡಿ  ಸೂಪರ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಆಗದೆ ಇದ್ದರೂ ಕಾರ್ಯಾರಂಭ ಮಾಡಿದೆ. ಆದರೆ ಆಸ್ಪತ್ರೆಯಲ್ಲಿ ಪೂರ್ಣ ಪ್ರಮಾಣದ ತಜ್ಞ ವೈದ್ಯರು ಹಾಗೂ ಅಗತ್ಯ ಸಿಬ್ಬಂದಿಗಳು ಇರದೇ ಇರುವುದು ಕಂಡು ಬಂದಿದ್ದು, ರೋಗಿಗಳ ಜೀವನದ ಜತೆ ಚೆಲ್ಲಾಟ ಮಾಡಿದಂತಾಗಬಾರದು ಎಂದು ಕಳವಳ ವ್ಯಕ್ತಪಡಿಸಿದರು.  

ಆಸ್ಪತ್ರೆಗೆ ಕೂಡಲೇ ತಜ್ಞ ವೈದ್ಯರನ್ನು ಭರ್ತಿಮಾಡುವುದು; ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆ ಸೇರಿದಂತೆ ಸಮಗ್ರ ಜಿಲ್ಲೆಯ ಅಭಿವೃದ್ಧಿಗಾಗಿ ಅಗತ್ಯ ಯೋಜನೆ ಅನುಷ್ಠಾನ ಮತ್ತು ಅನುದಾನ ಬಿಡುಗಡೆಗೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಬಳಿ ನಿಯೋಗ ಕೊಂಡೊಯ್ದು ಚರ್ಚಿಸುವುದು ಸೂಕ್ತ ಎಂದು ಪರಿಷತ್ ಸದಸ್ಯ ನಾಗರಾಜ್ ಯಾದವ್ ಸಭೆಯಲ್ಲಿ ಹೇಳಿದರು.  

ಕೆ.ಡಿ.ಪಿ ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಅವರು, ಹಾಜರಾತಿಯನ್ನು ಪರೀಶೀಲಿಸಿ ಗೈರುಹಾಜರಾಗಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.  

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾಗುವಂತಹ ಅನುದಾನಕ್ಕೆ ಸಂಬಂಧಿಸಿದಂತೆ ಕಾಮಗಾರಿಗಳ ಟೆಂಡರ ಪ್ರಕ್ರಿಯೆ ವಿಳಂಬ ಮಾಡುವ ಅಧಿಕಾರಿಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿದರು.  

ಜಿಲ್ಲೆಯ ಪರಿಶಿಷ್ಟ ಜಾತಿ/ಪಂಗಡಗಳ ವಸತಿ ಶಾಲೆಗಳಲ್ಲಿ ಎಸ್‌.ಸಿ.ಪಿ., ಟಿ.ಎಸ್‌.ಪಿ ಯೋಜನೆಯಡಿ ಡಿಜಿಟಲ್ ಗ್ರಂಥಾಲಯ, ವ್ಯಾಯಾಮ ಶಾಲೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಿಕೊಳ್ಳಲು ಸಲಹೆ ನೀಡಿದರು.  

ಶಾಸಕರಾದ ಗಣೇಶ ಹುಕ್ಕೇರಿ ಅವರು ಮಾತನಾಡಿ, ಹೊಲಗಳಲ್ಲಿ ನಿರ್ಮಿಸಲಾಗುವ ಕೃಷಿ ಹೊಂಡಗಳ ನಿರ್ಮಾಣ ಸಂದರ್ಭದಲ್ಲಿ ಹೊಂಡಗಳಿಗೆ ತಡೆಗೊಡೆ ನಿರ್ಮಿಸಿ ಸಾವು ನೋವುಗಳು ಆಗದಂತೆ ನಿಯಂತ್ರಿಸಲು ಕ್ರಮ  ವಹಿಸುವಂತೆ ತಿಳಿಸಿದರು.  

ಕಿತ್ತೂರ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ಮಾತನಾಡಿ,  ಮೀನುಗಾರಿಕೆ ಇಲಾಖೆಯಿಂದ ನೀಡಲಾಗುವ ಕೆರೆಗಳ ಗುತ್ತಿಗೆಯನ್ನು ಅರ್ಹ ಮೀನುಗಾರರಿಗೆ ದೊರಕಬೇಕು ಎಂದರು.  

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ರಾಯಬಾಗದಲ್ಲಿ ಸರಕಾರಿ ಆಸ್ತಿ ಮೇಲಿನ ನ್ಯಾಯಾಲಯದಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆ ತೆಗೆಸಲು ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದರು.   

ಜಿಲ್ಲೆಯಲ್ಲಿ ಕೈಗಾರಿಕೆಯನ್ನು ಉತ್ತೇಜಿಸಲು ಕೈಗಾರಿಕಾ ಪ್ರದೇಶ ವಿಸ್ತರಣೆಗೆ ಅಗತ್ಯದ ನಿವೇಶನ ಗುರುತಿಸಿ ಭೂ ಸ್ವಾಧೀನ ಪಡಿಸಿಕೊಳ್ಳಲಾಗುವದು ಎಂದರು. ಸವದತ್ತಿ ಯಲ್ಲಮ್ಮ ದೇವಸ್ಥಾನದ ಅಭಿವೃದ್ದಿ ಕಾರ್ಯ ಪ್ರಗತಿಯಲ್ಲಿದೆ. ಇದರ ಜೊತೆಗೆ ಜೋಗುಳ ಬಾವಿ ಸ್ವಚ್ಛತೆಗೆ ಜಿಲ್ಲಾಡಳಿತದಿಂದ ಕ್ರಮವಹಿಸಲಾಗುವುದು ಎಂದರು.   

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಅವರು ಮಾತನಾಡಿ, ಶಾಲೆಗಳಲ್ಲಿ ಅಗತ್ಯವಿರುವ ಡೆಸ್ಕ್‌ ಗಳನ್ನು ಶೀಘ್ರವೇ ಪೂರೈಸಲಾಗುವದು ಎಂದರು.   

ಜಿಲ್ಲೆಯಲ್ಲಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ನಿರ್ಮಿಸಲಾದ ಕೃಷಿ ಹೊಂಡಗಳಿಗೆ ತಡೆಗೋಡೆ ನಿರ್ಮಿಸಿರುವುದರ ಕುರಿತು ಸಮೀಕ್ಷೆ ಜರುಗಿಸಿ ವರದಿ ನೀಡಲು ಹಾಗೂ ರೈತರಿಗೆ ಜಾಗೃತಿ ಮೂಡಿಸಲು ಕ್ರಮ ವಹಿಸಲು ಸೂಚಿಸಲಾಗುವುದು ಎಂದು ತಿಳಿಸಿದರು.  

ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರಾದ ಎಸ್‌.ಆರ್‌.ಪಾಟೀಲ(ಬ್ಯಾಡಗಿ) ಶಾಸಕರಾದ ವಿಶ್ವಾಸ್ ವೈದ್ಯ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ವಿನಯ ನಾವಲಗಟ್ಟಿ, ಬುಡಾ ಅಧ್ಯಕ್ಷರಾದ ಲಕ್ಷ್ಮಣರಾವ್ ಚಿಂಗಳೆ, ಪೋಲಿಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ನಾಮನಿರ್ದೆಶಿತ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.  

ಸಭೆಯ ನಂತರ ಪ್ರಸಕ್ತ ಸಾಲಿನ ಎಸ್‌.ಎಸ್‌.ಎಲ್‌.ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಪಡೆದ ಬೈಲಹೊಂಗಲ ತಾಲ್ಲೂಕಿನ ದೇವಲಾಪುರ ಗ್ರಾಮದ ವಿದ್ಯಾರ್ಥಿನಿ ರೂಪಾ ಪಾಟೀಲ ಹಾಗೂ ಹೆಚ್ಚು ಅಂಕ ಪಡೆದ ಜಿಲ್ಲೆಯ ಎಲ್ಲ ತಾಲ್ಲೂಕುಗಳ ವಿದ್ಯಾರ್ಥಿಗಳಿಗೆ  ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ಶಾಸಕರುಗಳು ಸನ್ಮಾನ ಮಾಡಿ ಗೌರವಿಸಿದರು.  

ಕಳೆದ ವರ್ಷದ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ನೀಡಲಾಯಿತು.  

ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರಕಟಿಸಲಾಗಿರುವ ಪಂಚ ಗ್ಯಾರಂಟಿ ಯೋಜನೆಗಳ ಯಶೋಗಾಥೆಗಳನ್ನು ಒಳಗೊಂಡ ಕಿರುಪುಸ್ತಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಬಿಡುಗಡೆಗೊಳಿಸಿದರು.