ತಾಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಸ್ಥಳಕ್ಕೆ ಭೇಟಿ
ಮಹಾಲಿಂಗಪುರ 13: ಕಳೆದ ಮಂಗಳವಾರ ಪಟ್ಟಣದ ಕೆಂಗೇರಿಮಡ್ಡಿಯ 13ನೇ ವಾರ್ಡನಲ್ಲಿ ಅಕ್ರಮವಾಗಿ ನಿರ್ಮಿಸಲಾದ ಶೆಡ್ಗಳನ್ನು ರಬಕವಿ-ಬನಹಟ್ಟಿ ತಹಶಿಲ್ದಾರ ಗೀರೀಶ ಸ್ವಾದಿ ನೇತೃತ್ವದ ತಾಲೂಕು ಆಡಳಿತ ತೆರವುಗೊಳಿಸಿದ್ದರಿಂದ ಬೀದಿಗೆ ಬಿದ್ದು ಗೋಳಾಡುತ್ತಿರುವ ಕುಟುಂಬದವರನ್ನು ಶನಿವಾರ ತಾಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಭೇಟಿ ಮಾಡಿ ಅವರ ಸಮಸ್ಯಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಅಲ್ಲಿಯ ನಿವಾಸಿಗಳು ತಮ್ಮ ಗೋಳು ತೋಡಿಕೊಳ್ಳುತ್ತಾ ನಮಗೆ ಶೆಡ್ ತೆರವುಗೊಳಿಸುವ ಕುರಿತು ನೊಟೀಸ್ ನೀಡಿಲ್ಲ, ಜೆಸಿಬಿಯೊಂದಿಗೆ ಆಗಮಿಸಿದ ಅಧಿಕಾರಿಗಳಿಗೆ ನಮಗೆ 3-4 ತಾಸು ಸಮಯ ಕೊಡಿ ಮನೆಯಲ್ಲಿಯ ವಸ್ತುಗಳನ್ನು ಬೇರೆಡೆ ಇಡುತ್ತೇವೆ ಎಂದರೂ ಏನೂ ಕರುಣೆ ತೋರದೆ ಮನೆಯಲ್ಲಿರುವ ಚಿಕ್ಕ ಮಕ್ಕಳನ್ನು ಹೊರಗಡೆ ಎಳೆದು ನಮ್ಮ ವಸ್ತುಗಳ ಸಮೇತ ಶೆಡ್ಗಳನ್ನು ಸರ್ವನಾಶ ಮಾಡಿದರು. ಈಗ ನಾವು ರಸ್ತೆಯಲ್ಲಿಯೇ ಅಡುಗೆ ಮಾಡಿ ಊಟ ಮಾಡುತ್ತಿದ್ದೇವೆ.ಶಾಲೆಯಲ್ಲಿ ವಾಸವಿದ್ದೇವೆ. ನಮ್ಮ ಬದುಕನ್ನು ಮೂರಾಬಟ್ಟೆ ಮಾಡಲಾಗಿದೆ. ಚುನಾವಣೆ ಬಂದಾಗ ಕೈಮುಗಿದು ನಿಲ್ಲುವ ನಾಯಕರಾರು ನಮ್ಮ ಕಡೆ ತಿರುಗಿ ನೋಡಿಲ್ಲ. ನಮ್ಮ ಗೋಳಾಟ ಕೇಳುವವರಿಲ್ಲ. ಇಂತಹ ಪರಸ್ಥಿತಿ ನಮ್ಮ ವೈರಿಗೆ ಬರಬಾರದು ಎಂದು ಕಣ್ಣೀರು ಹರಿಸಿದರು. ಅಷ್ಟೊಂದು ದೂರದಿಂದ ನೀವು ಬಂದು ನಮ್ಮ ಕಷ್ಟದ ಪರಿಸ್ಥಿತಿ ಆಲಿಸುತ್ತಿದ್ದೀರಿ. ಇದರಿಂದ ನಮಗೆ ಸ್ವಲ್ಪ ಆಶೆ ಕುದುರಿದೆ ಹೇಗಾದರೂ ಮಾಡಿ ನಮಗೆ ಜಾಗ ಸಿಗುವಂತೆ ಮಾಡಿರಿ ಎಂದು ಕಣ್ಣೀರಿಟ್ಟು ವೀಣಾ ಅವರ ಕಾಲು ಹಿಡಿದು ಬೇಡಿಕೊಂಡರು.
ಇನ್ನೊಂದೆಡೆ ಹಲವರು ಏಕಾಏಕಿ ತೆರವುಗೊಳಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಿರಾಶ್ರಿತರ ಗೋಳನ್ನು ಆಲಿಸಿದ ವೀಣಾ ಕಾಶಪ್ಪನವರ ನಿಮ್ಮಲ್ಲಿ ಅನೇಕರು ವಯಸ್ಸಿನಲ್ಲಿ ನನಗಿಂತ ಹಿರಿಯರು ಇದ್ದೀರಿ. ನೀವು ನನ್ನ ಕಾಲು ಹಿಡಿಯಬಾರದು. ನೀವು ಆಶೀರ್ವಾದ ಮಾಡಬೇಕು. ಮಾಧ್ಯಮಗಳಲ್ಲಿ ನಿಮಗೆ ಆಗಿರುವ ನೋವಿನ ಕುರಿತು ವರದಿ ನೋಡಿ ನಾನು ಈಗಾಗಲೇ ಕಂದಾಯ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಸರ್ಕಾರಿ ಶಾಲೆಯಲ್ಲಿ ವಸತಿಗೆ ವ್ಯವಸ್ಥೆ ಮಾಡುವಂತೆ ನಾನು ಅಂದೇ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಈಗ 2-3 ದಿನ ಸರ್ಕಾರಿ ರಜೆ ಇರುವದರಿಂದ ಮಂಗಳವಾರ ಅಧಿಕಾರಿಗಳು ನಿಮ್ಮ ಕಡೆ ಗಮನ ಹರಿಸಿ ಏನಾದರೂ ವ್ಯವಸ್ಥೆ ಮಾಡುವದಾಗಿ ತಿಳಿಸಿದ್ದಾರೆ. ಇದರ ಕುರಿತು ಜಿಲ್ಲಾಧಿಕಾರಿಗಳ ಜೊತೆ ಕೂಡಾ ಮಾತನಾಡಿದ್ದೇನೆ. ಅವರು ಕೂಡಾ ಶೆಡ್ ತೆರವುಗೊಳಿಸಲು ನಾನು ತಿಳಿಸಿಲ್ಲ ಅಂತಾ ಹೇಳಿದ್ದಾರೆ. ವಿಭಾಗಾಧಿಕಾರಿಗಳೂ ಹಾಗೂ ಜಿಲ್ಲಾಧಿಕಾರಿಗಳೂ ಇಬ್ಬರೂ ಮಹಿಳೆಯರೇ ಇದ್ದಾರೆ. ಅವರು ನಿಮ್ಮಂತಹ ಮಹಿಳೆಯರ ದು:ಖ ಅರ್ಥ ಮಾಡಿಕೊಳ್ಳುತ್ತಾರೆ ಎಂದು ನಂಬಿದ್ದೇನೆ. ನನ್ನ ವಾಸಸ್ಥಾನ ದೂರ ಇರಬಹುದು ಆದರೆ ನನ್ನ ಮನಸ್ಸು ಇಲ್ಲೇ ಇರುತ್ತದೆ. ನಿಮಗೆ ಪರ್ಯಾಯ ವ್ಯವಸ್ಥೆ ಆಗುವವರೆಗೂ ನನಗೆ ಸಮಾಧಾನ ಇರುವದಿಲ್ಲ. ಒಂದು ವೇಳೆ ವ್ಯವಸ್ಥೆ ಮಾಡದಿದ್ದರೆ ನಾನೂ ಹೋರಾಟಕ್ಕೂ ಸಿದ್ಧ ಎಂದರು.
ಶೆಡ್ ಅನಧಿಕೃತವಾಗಿದ್ದರೆ ನಿವಾಸಿಗಳಿಗೆ ಮುಂಚಿತವಾಗಿ ತಿಳಿಸಿ ಸಮಯ ನೀಡಿ ತೆರವುಗೊಳಿಸಬೇಕಾಗಿತ್ತು. ಏಕಾಏಕಿ ತೆರವುಗೊಳಿಸಬಾರದಿತ್ತು. ಶಾಸಕ ಸಿದ್ದು ಸವದಿ ಅವರ ಪ್ರತಿಕ್ರಿಯೆಯನ್ನು ಮಾಧ್ಯಮದಲ್ಲಿ ನೋಡಿದೆ. ಅವರು ಇಲ್ಲಿಯ ನಿವಾಸಿಗಳ ಕುರಿತು ಮುಂಜಾಗೃತ ಕ್ರಮ ಕೈಗೊಳ್ಳಬೇಕಾಗಿತ್ತು. ಮಾನವೀಯತೆಯಿಂದ ನಿರಾಶ್ರಿತರಾದ ನಂತರವಾದರೂ ಇಲ್ಲಿಗೆ ಭೇಟಿ ನೀಡಿ ನಿರಾಶ್ರಿತರಿಗೆ ಆಸರೆಯಾಗಬೇಕಾಗಿತ್ತು. ಸುಮಾರು 80-85 ವಯಸ್ಸಿನ ಹಿರಿಯ ಹೆಣ್ಣುಮಕ್ಕಳು ರಸ್ತೆಯಲ್ಲಿ ಕುಳಿತು ಕಣ್ಣೀರಿಡುತ್ತಿದ್ದಾರೆ. ಇವರ ಕುರಿತು ಚಿಂತಿಸಬೇಕಾಗಿತ್ತು ಎಂದರು.
ಇಲ್ಲಿಯ ಜನತೆ ಬೀದಿಗೆ ಬಿದ್ದಿದ್ದಾರೆ ಆದರೆ ಶಾಸಕರು ವಿದೇಶ ಪ್ರವಾಸದಲ್ಲಿದ್ದಾರೆ ಇದು ಸರಿಯೇ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಅದು ತಪ್ಪು ಎಂದರು.