ಯಕ್ಸಂಬಾ ಪಟ್ಟಣದ ಅಭಿವೃದ್ಧಿಗೆ 4.50 ಕೋಟಿ ರೂ ಮಂಜೂರು

Rs 4.50 crore sanctioned for the development of Yaksamba town

ಯಕ್ಸಂಬಾ ಪಟ್ಟಣದ ಅಭಿವೃದ್ಧಿಗೆ 4.50 ಕೋಟಿ ರೂ ಮಂಜೂರು 

ಚಿಕ್ಕೋಡಿ 01: ರಾಜ್ಯ ಕಾಂಗ್ರೆಸ್ ಸರ್ಕಾರ  ಜನರಿಗೆ ಗ್ಯಾರಂಟಿ ಯೋಜನೆಗಳ ಹೊರತು ರಾಜ್ಯದ ಅಭಿವೃದ್ಧಿಗೆ ಅನುದಾನ ನೀಡುತ್ತಿದೆ.  ಯಕ್ಸಂಬಾ ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗೆ 4.50 ಕೋಟಿ ರೂ ಅನುದಾನ ಮಂಜೂರಾಗಿದೆ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು. 

ಯಕ್ಸಂಬಾ ಪಟ್ಟಣದ ಮಹಾದೇವ ಮಂದಿರದ ಮುಂಭಾಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಹಿರಿಯರಾದ ಪ್ರಕಾಶ ಹುಕ್ಕೇರಿ ಅವರು ಚಿಕ್ಕೋಡಿ-ದಲಗಾ ಕ್ಷೇತ್ರಕ್ಕೆ ಭರಪೂರ ಅನುದಾನ ಕೊಡುತ್ತಿದ್ದಾರೆ ಎಂದರು. 

ಯಕ್ಸಂಬಾ ಪಟ್ಟಣದ ಮಹಾದೇವ ಮಂದಿರದಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ವರೆಗೆ 1.20 ಕೋಟಿ ರೂ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಅನುದಾನ ಮಂಜೂರಾಗಿದೆ. ಡಾ,ಬಾಬಾಸಾಹೇಬ ಅಂಬೇಡ್ಕರ ಭವನದಿಂದ ಅಂಕಲಿ ರಸ್ತೆವರೆಗೆ 2.50 ಕೋಟಿ ರೂ ಅನುದಾನ ಮಂಜೂರು, ಯಕ್ಸಂಬಾ ಪಟ್ಟಣದ ಚನ್ನಮ್ಮ ಸರ್ಕಲದಿಂದ ಮಹಾದೇವ ಮಂದಿರದವರೆಗೆ 84.50 ಲಕ್ಷ ರೂ ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರಾಗಿದೆ ಎಂದರು. 

ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಮಾದರಿ ಪಟ್ಟಣವಾಗಿ ಯಕ್ಸಂಬಾ ಬೆಳವಣಿಗೆ ಕಂಡಿದೆ. ಪಟ್ಟಣ ಪಂಚಾಯತಿಗೆ ಅನುದಾನ ಒದಗಿಸಿ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಭೂಗತ ಕೆಬಲ್ ಕಾಮಗಾರಿ ಮುಕ್ತಾಯಗೊಂಡಿದೆ. ಪಟ್ಟಣದಲ್ಲಿ ಬಾಕಿ ಉಳಿದಿರುವ ಏನೇ ಕಾಮಗಾರಿ ಇದ್ದರೂ ಅವುಳನ್ನು ಪೂರ್ಣಗೊಳಿಸಿ ಜನರಿಗೆ ಅನುಕೂಲ ಕಲ್ಪಿಸಲಾಗುತ್ತದೆ ಎಂದರು. 

ಪಟ್ಟಣ ಪಂಚಾಯತಿ ಅಧ್ಯಕ್ಷ ಸುನೀಲ ಸಪ್ತಸಾಗರ ಮಾತನಾಡಿ ಯಕ್ಸಂಬಾ ಪಟ್ಟಣದ ಅಭಿವೃದ್ಧಿಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಮತ್ತು ಶಾಸಕ ಗಣೇಶ ಹುಕ್ಕೇರಿ ಕೊಡುಗೆ ದೊಡ್ಡದಿದೆ. ಪಟ್ಟಣ ಪಂಚಯತಿ ಸದಸ್ಯರು ಏನೆ ಕೇಳಿದರೂ ಇಲ್ಲ ಎಂಬ ಉತ್ತರ ಅವರಿಂದ ಬರೋದಿಲ್ಲ, ಅಭಿವೃದ್ಧಿಗಾಗಿ ತಮ್ಮ ಸರ್ವಸ್ವ ಮೂಡಿಪಾಗಿಟ್ಟಿದ್ದಾರೆ ಎಂದರು. 

ಪಟ್ಟಣ ಪಂಚಾಯತಿ ಸದಸ್ಯ ಉಮೇಶ ಸಾತ್ವಾರ, ಕಿರಣ ಮಾಳಿ, ವಿನೋಧ ಚಿತಳೆ, ಚಿದಾನಂದ ಬೆಲ್ಳಿ, ರವಿ ಖೋತ, ಅರುಣ ಮಗದುಮ್ಮ, ಶಿವರಾಜ ಚಿತಳೆ, ಅಂಕುಶ ಖೋತ, ವಿಠ್ಠಲ ನಾಯಿಕ, ಜಮೀರ ಮಕಾನಾದಾರ, ಮಹಾದೇವ ಮಾಳಗೆ ಮುಂತಾದವರು ಇದ್ದರು.