26ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ-2 ಆರಂಭ: ಕೊಠಡಿ ಮೇಲ್ವಿಚಾರಕರ ಪೂರ್ವಭಾವಿ ಸಭೆ
ನಿಡಗುಂದಿ 23: ಇದೇ ಮೇ 26ರಿಂದ 2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ- 2 ಆರಂಭಗೊಳ್ಳಲಿದ್ದು ಕೊಠಡಿ ಮೇಲ್ವಿಚಾರಕರು ತಮ್ಮ ಜವಾಬ್ದಾರಿಯನ್ನರಿತು ಕಾರ್ಯನಿರ್ವಹಿಸಬೇಕು.ಯಾವುದೇ ರೀತಿಯ ಕಪ್ಪು ಚುಕ್ಕೆ ತಾಗದಂತೆ, ನಕಲು,ಅವ್ಯವಹಾರ ಆಕ್ರಮಕ್ಕೆ ಅವಕಾಶ ಕಲ್ಪಿಸದೇ ಕಟ್ಟುನಿಟ್ಟಾಗಿ ಪಾರದರ್ಶಕ ಪರೀಕ್ಷೆ ನಡೆಸಬೇಕು. ಆ ನಿಟ್ಟಿನಲ್ಲಿ ತಮ್ಮೆಲ್ಲರ ಸಹಕಾರ ಬಹುಮುಖ್ಯ. ಪರೀಕ್ಷಾ ಪಾವಿತ್ರ್ಯತೆ ಕಾಪಾಡುವುದು ನಮ್ಮೆಲ್ಲರ ಮೇಲಿದೆ ಎಂದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಸಿ.ಎಸ್.ರಾಠೋಡ ಹೇಳಿದರು.
ನಿಡಗುಂದಿ ಪಟ್ಟಣದ ನ್ಯೂ ಇಂಗ್ಲೀಷ್ ಪ್ರೌಢಶಾಲೆ
(ಎನ್.ಇ.ಎಚ್.ಎಸ್) ಪರೀಕ್ಷಾ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ-2 ಪರೀಕ್ಷಾ ಕೊಠಡಿ ಮೇಲ್ವಿಚಾರಕರ ಪೂರ್ವಭಾವಿ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಈ ಪರೀಕ್ಷೆಯನ್ನು ವೆಬ್ ಕಾಸ್ಟಿಂಗ್ ಕಣ್ಣಂಚಿನಲ್ಲಿ ನಡೆಸುತ್ತಿದೆ. ಆ ಹಿನ್ನೆಲೆಯಲ್ಲಿ ಈ ಸಲವೂ ಎಲ್ಲ ಕೊಠಡಿಯಲ್ಲಿ ಸಿಸಿ ಕ್ಯಾಮರಾಗಳನ್ನು ಯಥವತ್ತಾಗಿ ಅಳವಡಿಸಲಾಗಿದೆ.ಉಪ ಅಧೀಕ್ಷಕರು, ಪರೀಕ್ಷಾ ಕೇಂದ್ರದ ವೀಕ್ಷಕರು ಸೇರಿದಂತೆ ಸ್ಥಾನಿಕ ಜಾಗೃತದಳ, ಮೊಬೈಲ್ ಸ್ವಾಧೀನಾಧಿಕಾರಿಗಳು ಇರಲಿದ್ದಾರೆ. ಪೋಲಿಸರು ಸುವ್ಯವಸ್ಥೆಗೆ ನಿಯೋಜನೆವಾಗಲಿದ್ದಾರೆ. ಪರೀಕ್ಷಾ ಕೇಂದ್ರದ ವ್ಯಾಪ್ತಿಯಲ್ಲಿ ಕಲಂ 144 ಜಾರಿಗೊಳಿಸುವ ಮೂಲಕ ಶಿಸ್ತುತನದಿಂದ, ಅಚ್ಚುಕಟ್ಟಾಗಿ ಪರೀಕ್ಷೆ ನಡೆಸಲು ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದೆ.ಅವ್ಯವಹಾರ ತಡೆಗಟ್ಟಲು, ಪರೀಕ್ಷಾ ಕೇಂದ್ರದಲ್ಲಿ ಶಿಸ್ತು, ಶಾಂತಿ ಕಾಪಾಡುವ ಹಿತದೃಷ್ಟಿಯಿಂದ ಈ ವ್ಯವಸ್ಥೆ ಕೈಗೊಳ್ಳಲಾಗಿದೆ. ಅನಧಿಕೃತ ವ್ಯಕ್ತಿಗಳಿಗೆ ಪರೀಕ್ಷಾ ಕೇಂದ್ರದ ಪ್ರವೇಶವನ್ನು ನಿರ್ಬಂಧಿತವಾಗಿರುತ್ತದೆ. ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಫೋನ್ ಮತ್ತು ಇತರೇ ಸಂಪರ್ಕ ಸಲಕರಣೆಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ನಿಯೋಜಿತ ಸಿಬ್ಬಂದಿಗಳು, ಕೊಠಡಿ ಮೇಲ್ವಿಚಾರಕರು ಜಾಗರೂಕತೆಯಿಂದ ತಮ್ಮ ಹೊಣೆಗಾರಿಕೆ ನಿಭಾಯಿಸಿದರೆ ಪರೀಕ್ಷೆ ಸುಸೂತ್ರವಾಗಿ ಜರುಗಿ ಸಫಲತೆ ಕಾಣಬಹುದಾಗಿದೆ ಎಂದರು.
ಪರೀಕ್ಷಾರ್ಥಿಗಳಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಇಲ್ಲಿ ಒದಗಿಸಲಾಗುತ್ತದೆ. ಬೆಳಕಿರುವ ಕೊಠಡಿಯಲ್ಲಿ ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ.ಯಾವುದೇ ಆತಂಕವಿಲ್ಲದೇ ಮುಕ್ತವಾಗಿ, ಧೈರ್ಯವಾಗಿ ಪರೀಕ್ಷೆ ಎದುರಿಸಲು ಮಕ್ಕಳಿಗಾಗಿ ಕೂರಲು ಸೂಕ್ತ ಆಸನದ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಮಂಡಳಿ ಮಾರ್ಗಸೂಚಿ ನಿಯಮದಂತೆ ನಾವು,ನೀವುಗಳೆಲ್ಲ ಕಾರ್ಯನಿರ್ವಹಿಸಿ ಪರೀಕ್ಷೆ ಯಶಸ್ಸುಗೋಳಿಸೋಣ ಎಂದು ಮುಖ್ಯ ಅಧೀಕ್ಷಕ ಸಿ.ಎಸ್.ರಾಠೋಡ ನುಡಿದರು.
ಉಪನ್ಯಾಸಕ ಎಂ.ಬಿ.ಮುಲ್ಲಾ ಮಾತನಾಡಿ, ಈ ಪರೀಕ್ಷಾ ಕೇಂದ್ರ ಮೊದಲಿನಿಂದಲೂ ಪಾರದರ್ಶಕ ಪರೀಕ್ಷೆ ನಡೆಸುತ್ತಾ ಬಂದಿದೆ. ಯಾವುದೇ ರೀತಿಯ ಕಪ್ಪುಚಕ್ಕೆ ಹೊಂದಿಲ್ಲ. ಎಲ್ಲರ ಸಹಕಾರ ಮನೋಭಾವದಿಂದ ಈ ಶಾಲೆ, ಸಂಸ್ಥೆ ಪ್ರಗತಿ ಕಾಣುತ್ತಿದೆ ಎಂದರು.
ಕಸ್ಟೂಡಿಯನ್ ಎಲ್.ಆರ್.ಜಾಲಿಬೆಂಚಿ, ಹೆಬ್ಬಾಳ ಹೈಸ್ಕೂಲಿನ ಎಸ್.ಪಿ.ಬಿರಾದಾರ, ಎಂ.ಬಿ.ಬಳಬಟ್ಟಿ, ಎಂ.ಬಿ.ಸದಬ, ಡಿ.ಎ.ಗುಂಡಿನಮನಿ, ಸೋಮಲಿಂಗ ಪರಮಣ್ಣ, ಎಂ.ಎಚ್.ಬಳಬಟ್ಟಿ, ಸರಸ್ವತಿ ಈರಗಾರ, ಎಸ್.ಎಚ್.ನಾಗಣಿ, ಜಿ.ಆರ್.ಜಾಧವ ಇತರರಿದ್ದರು.
ಎಂ.ಎಂ.ಕುಲಕರ್ಣಿ ಸ್ವಾಗತಿಸಿ ನಿರೂಪಿಸಿದರು. ಎಸ್.ಎ.ಕೋನರೆಡ್ಡಿ ವಂದಿಸಿದರು.