ಕೊಪ್ಪಳ ಬಚಾವೋ: ಗೋಡೆ ಬರಹದ ಮೂಲಕ ಕ್ವಿಟ್ ಬಲ್ಡೋಟಾ ವಿಭಿನ್ನ ಪ್ರತಿಭಟನೆ

Save Koppal: Quit Baldota, a different protest through wall writing

ಕೊಪ್ಪಳ ಬಚಾವೋ: ಗೋಡೆ ಬರಹದ ಮೂಲಕ ಕ್ವಿಟ್ ಬಲ್ಡೋಟಾ ವಿಭಿನ್ನ ಪ್ರತಿಭಟನೆ

ಕೊಪ್ಪಳ 25: ನಗರದ ಪಕ್ಕದಲ್ಲಿಯೇ ಸ್ಥಾಪನೆಗೊಳ್ಳುತ್ತಿರುವ ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣ ಸೇರಿ ಇತರೆ ಕಾರ್ಖಾನೆಗಳ ಆರಂಭ, ವಿಸ್ತರಣೆ ವಿರೋಧಿಸಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆ ಸದಸ್ಯರು ಇಂದು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಗೋಡೆ ಬರಹದ ಮೂಲಕ ಕ್ವಿಟ್ ಬಲ್ಡೋಟಾ ಪ್ರತಿಭಟನೆ ನಡೆಸಿದರು. ಕಾರ್ಖಾನೆ ವಿರುದ್ಧ ಜನಾಂದೋಲನದ ಭಾಗವಾಗಿ ನಡೆಯುತ್ತಿರುವ ಹೋರಾಟ ತೀವ್ರಗೊಳಿಸಲಾಗಿದೆ, ಇಂದು ಕಿನ್ನಾಳ ರಸ್ತೆ ಅಂಡರ್ ಪಾಸ್ ಬ್ರಿಡ್ಜ್‌, ಭಾಗ್ಯನಗರ ಬ್ರಿಡ್ಜ್‌ ಮುಂತಾದ ಕಡೆಗೆ ಆಕ್ರೋಶದಗೋಡೆ ಬರಹ ಆರಂಭಿಸಲಾಗಿದೆ. ಕೊಪ್ಪಳದ ವಿವಿದೆಡೆ ಮತ್ತು ಬಾದಿತ ಪ್ರದೇಶಗಳ ಹಳ್ಳಿಗಳಲ್ಲಿ ಕಾರ್ಖಾನೆಗಳಿಂದ ಆಗುತ್ತಿರುವ ಹಾನಿಯ ಬಗ್ಗೆ ಜನಜಾಗೃತಿ ಗೋಡೆ ಬರಹಗಳನ್ನು ಬರೆಯಲಾಗುತ್ತಿದೆ. ಗೋಡೆ ಬರಹದ ನಂತರ ಹೊಸ ಬಗೆಯ ಪ್ರತಿಭಟನೆ ಮಾಡುವದು, ಸರಕಾರಕ್ಕೆ ಜನರ ಅಭಿಪ್ರಾಯ ತಿಳಿಸುವ ನಿಟ್ಟಿನಲ್ಲಿ ಹೋರಾಟ ರೂಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ವೇಳೆ ಕಾರ್ಖಾನೆ ವಿರುದ್ಧ ಘೋಷಣೆ ಕೂಗಿ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆಯ ಪ್ರೊ. ಅಲ್ಲಮಪ್ರಭು ಬೆಟ್ಟದೂರ್, ಕೆ. ಬಿ. ಗೋನಾಳ, ಬಸವರಾಜ ಶೀಲವಂತರ್, ಮಹಾಂತೇಶ್ ಕೊತಬಾಳ, ಮಂಜುನಾಥ ಜಿ. ಗೊಂಡಬಾಳ, ಶರಣು ಗಡ್ಡಿ, ರಮೇಶ ತುಪ್ಪದ, ಸಂತೋಷ ದೇಶಪಾಂಡೆ, ಡಾ. ಶ್ರೀನಿವಾಸ ಹ್ಯಾಟಿ, ಡಾ. ಮಂಜುನಾಥ ಸಜ್ಜನ್, ಶರಣು ಡೊಳ್ಳಿನ, ಮುದುಕಪ್ಪ ಹೊಸಮನಿ ಸೇರಿ ಅನೇಕರು ಇದ್ದರು. ಕಲಾವಿದರಾದ ರಾಜು ತೇರದಾಳ, ಕೃಷ್ಣಾ ಚಿತ್ರಗಾರ, ಸಾಹಿತ್ಯ ಗೊಂಡಬಾಳ ಗೋಡೆ ಬರಹ ಬರೆದರು.