ರಾಜ್ಯದಲ್ಲಿ ಶಫ ನಿಂಬಾಳ್ಕರಗೆ 2ನೇ ಸ್ಥಾನ ಽ ಬಾಗಲಕೋಟೆಗೆ 16ನೇ ಸ್ಥಾನ

Shafa Nimbalkar ranks 2nd in the state, Bagalkot ranks 16th

ಜಿಲ್ಲೆಗೆ ಶೇ.67.78 ರಷ್ಟು ಎಸ್‌.ಎಸ್‌.ಎಲ್‌.ಸಿ ಫಲಿತಾಂಶ 

ಬಾಗಲಕೋಟೆ:  2025ರ ಎಸ್‌.ಎಸ್‌.ಎಲ್‌.ಸಿ ಪರೀಕ್ಷಾ ಫಲತಾಂಶ ಶುಕ್ರವಾರ ಪ್ರಕಟವಾಗಿದ್ದು, ಬಾಗಲಕೋಟೆ ಜಿಲ್ಲೆ ಶೇ.67.78 ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ 16ನೇ ಸ್ಥಾನ ಪಡೆದುಕೊಂಡಿದೆ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶಕ ಎಚ್‌.ಜಿ.ಮಿರ್ಜಿ ತಿಳಿಸಿದ್ದಾರೆ. 

ಜಿಲ್ಲೆಯಲ್ಲಿ 15063 ಬಾಲಕರು ಮತ್ತು 15410 ಬಾಲಕಿಯರು ಸೇರಿ ಒಟ್ಟು 30473 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 8836 ಬಾಲಕರು, 11820 ಬಾಲಕಿಯರು ಸೇರಿ ಒಟ್ಟು 20656 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಈ ಬಾರಿಯು ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಬಾಲಕರು ಶೇ.58.66 ರಷ್ಟು ತೇರ್ಗಡೆ ಹೊಂದಿದರೆ, ಬಾಲಕಿಯರು ಶೇ.76.70 ರಷ್ಟು ತೇರ್ಗಡೆ ಹೊಂದಿರುತ್ತಾರೆ. ಕಳೆದ 2023-24ನೇ ಸಾಲಿನಲ್ಲಿ ಶೇ.77.92 ರಷ್ಟು ಫಲಿತಾಂಶ ಪಡೆಯುವ ಮೂಲಕ 13ನೇ ಸ್ಥಾನ ಪಡೆದುಕೊಂಡರೆ, 2022-23ನೇ ಸಾಲಿನಲ್ಲಿ ಶೇ.84.21 ರಷ್ಟು ಫಲಿತಾಂಶ ಪಡೆಯುವ ಮೂಲಕ 27ನೇ ಸ್ಥಾನ ಪಡೆದುಕೊಂಡಿದೆ.  

625ಕ್ಕೆ 624 ಅಂಕ ಪಡೆದ ಬೀಳಗಿ ತಾಲೂಕಿನ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಶಫಾ ಎಸ್‌. ನಿಂಬಾಳ್ಕರ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಶಫಾ ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಜಿಲ್ಲೆಯ ಟಾಪರ್ ಸ್ಥಾನದಲ್ಲಿ 625ಕ್ಕೆ 623 ಅಂಕ ಪಡೆದ 4 ವಿದ್ಯಾರ್ಥಿಗಳು, 625ಕ್ಕೆ 622 ಅಂಕ ಪಡೆದವರು 5, 621 ಅಂಕ ಪಡೆದವರು 7, 620 ಅಂಕ ಪಡೆದವರು 11, 619 ಅಂಕ ಪಡೆದವರು 9, 618 ಅಂಕ ಪಡೆದವರು 17, 617 ಅಂಕ ಪಡೆದ 20, 616 ಅಂಕ ಪಡೆದ 16 ಹಾಗೂ 615 ಅಂಕವನ್ನು 23 ಜನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.  

ಬಾದಾಮಿ ತಾಲೂಕಿನಲ್ಲಿ 5168 ಪೈಕಿ 3632 (ಶೇ.70.28) ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರೆ, ಬಾಗಲಕೋಟೆ ತಾಲೂಕಿನಲ್ಲಿ 4628 ಪೈಕಿ 2941 (ಶೇ.63.55), ಬೀಳಗಿ ತಾಲೂಕಿನಲ್ಲಿ 2734 ಪೈಕಿ 1599 (ಶೇ.58.49), ಹುನಗುಂದ ತಾಲೂಕಿನಲ್ಲಿ 4999 ಪೈಕಿ 3460 (ಶೇ.69.21), ಜಮಖಂಡಿ ತಾಲೂಕಿನಲ್ಲಿ 7771 ಪೈಕಿ 5466 (ಶೇ.70.34) ಹಾಗೂ ಮುಧೋಳ ತಾಲೂಕಿನಲ್ಲಿ 5173 ಪೈಕಿ 3558 (ಶೇ.68.78) ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ ಎಂದು ಎಚ್‌.ಜಿ.ಮಿರ್ಜಿ ತಿಳಿಸಿದ್ದಾರೆ.  

625ಕ್ಕೆ 624 ಅಂಕ ಪಡೆದ ಶಫ ನಿಂಬಾಳ್ಕರ 

ಜಿಲ್ಲೆಯ ಬೀಳಗಿ ತಾಲೂಕಿನ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಶಫಾ ಶಾರೀಕಹ್ಮದ ನಿಂಬಾಳ್ಕರ 625ಕ್ಕೆ 624 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ದ್ವೀತಿಯ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಇಂಗ್ಲೀಷ ವಿಷಯಕ್ಕೆ 124, ಕನ್ನಡ, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಕ್ಕೆ ತಲಾ 100 ಅಂಕ ಪಡೆದುಕೊಂಡಿದ್ದಾರೆ. ಸಾಧನೆ ಮಾಡಿದ ವಿದ್ಯಾರ್ಥಿಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪಂಚಾಯತ ಸಿಇಓ ಶಶಿಧರ ಕುರೇರ ಹಾಗೂ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಪ್ರಭಾರಿ ಉಪನಿರ್ದೇಶ ಎಚ್‌.ಜಿ.ಮಿರ್ಜಿ, ಎಸ್‌.ಎಸ್‌.ಎಲ್‌.ಸಿ ಪರೀಕ್ಷಾ ನೋಡಲ್ ಅಧಿಕಾರಿ ಎಸ್‌.ಎಸ್‌.ಹಾಲವರ ಅಭಿನಂದನೆ ಸಲ್ಲಿಸಿದ್ದಾರೆ.