ಜಮೀನು ದಾಖಲೀಕರಣ ಕಾರ್ಯ ತ್ವರಿತಗೊಳಿಸಿ ಪೂರ್ಣಗೊಳಿಸಿ: ಪಿ.ಸುನೀಲ ಕುಮಾರ್

Speed ​​up and complete the land registration process: P. Sunil Kumar

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭೂ ಸುರಕ್ಷಾ ಯೋಜನೆ 

ವಿಜಯಪುರ ಏ. 11: ಭೂ ಸುರಕ್ಷತೆ ದೃಷ್ಟಿಕೋನದಿಂದ ಜಮೀನು ದಾಖಲೀಕರಣ ಪ್ರಕ್ರಿಯನ್ನು ತ್ವರಿತಗೊಳಿಸಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಂದಾಯ ಇಲಾಖೆಯ ಆಯುಕ್ತರಾದ ಪಿ.ಸುನೀಲ ಕುಮಾರ ಅವರು ಸೂಚಿಸಿದರು.  

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ ಕಂದಾಯ ಇಲಾಖೆ ವಿವಿಧ ವಿಷಯಗಳ ಪ್ರಗತಿ ಪರೀಶೀಲನೆ ನಡೆಸಿದ ಅವರು, ಪ್ರತಿದಿನ ಒಬ್ಬ ಆಪರೇಟರ್ ಒಂದು ಸಾವಿರದಿಂದ 2 ಸಾವಿರದಷ್ಟು ದಾಖಲಿಕರಣ ಕಾರ್ಯ ತ್ವರಿತಗೊಳಿಸುವ ಮೂಲಕ ದಾಖಲೀಕರಣ ಕಾರ್ಯಕ್ಕೆ ವೇಗ ನೀಡಿ, ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.  

ರೈತರು ತಮ್ಮ ಜಮೀನಿನ ಮಾಹಿತಿಗಾಗಿ ಪದೇ ಪದೇ ಅಲೆದಾಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ದಾಖಲೀಕರಣ ಅಗತ್ಯವಾಗಿದೆ. ಹಾಗೂ ಜಮೀನುಗಳ ಮೇಲೆ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಮಾಲೀಕರಿಗೆ ಈ ದಾಖಲಿಕರಣ ನೆರವಾಗುತ್ತದೆ ಎಂದು ಅವರು ಹೇಳಿದರು.  

ಜಮೀನಿನ ಕುರಿತು ತಿದ್ದುಪಡಿಗೆ ಜಿಲ್ಲಾಧಿಕಾರಿಗಳಿಗೆ ಅವಕಾಶವಿದ್ದು,.ಅಧಿಕಾರಿಗಳು ಜಮೀನಿನ ಕುರಿತು ಸ್ಥಳಕ್ಕೆ ಭೇಟಿ ನೀಡಿ ಖುದ್ದಾಗಿ ಪರೀಶೀಲನೆ ನಡೆಸಬೇಕು. ಹಾಗೂ ಆಧಾರ ಜೋಡಣೆಗೆ ಒತ್ತು ನೀಡಬೇಕು ಎಂದು ಅವರು ಹೇಳಿದರು.  

ಸಾರ್ವಜನಿಕರಿಗೆ ಭೂದಾಖಲೆಗಳು ನಿರ್ಣಾಯಕ ದಾಖಲೆಗಳಾಗಿರುತ್ತವೆ. ಅಂತಹ ದಾಖಲೆಗಳನ್ನು ತ್ವರಿತ ಹಾಗೂ ಸುಲಭವಾಗಿ ಒದಗಿಸುವುದರಿಂದ ಸಾಕಷ್ಟು ಅನಾನೂಕೂಲತೆಯನ್ನು ನಿವಾರಿಸಬಹುದಾಗಿದೆ. ಸೀಮಿತ ಮಾನವ ಸಂಪನ್ಮೂಲ ಬಳಕೆ, ದಾಖಲೆ ಹುಡುಕುವ ಜಟಿಲತೆ-ಹಾನಿಯನ್ನು ಡೀಜೀಟಲಿಕರಣದಿಂದ ತಪ್ಪಿಸಿ, ಭೂದಾಖಲೆಗಳನ್ನು ಸಂರಕ್ಷಿಸಿ ನಿರ್ವಹಿಸಬಹುದಾಗಿದೆ. ಈ ಭೂ ಸುರಕ್ಷಾ ಯೋಜನೆಯಿಂದ ಮಹತ್ವದ ಭೂ ದಾಖಲೆಗಳ ಡಿಜಿಟಲ್ ರೂಪದಲ್ಲಿ ಶಾಶ್ವತವಾಗಿ ಸಂರಕ್ಷಿಸಬಹುದಾಗಿದೆ. ಭೌತಿಕ ಕಡತಗಳ ಬಳಕೆ ತಗ್ಗಿ, ಕಡತಗಳು ಶಿಥಿಲಾವಸ್ಥೆಗೊಳ್ಳುವುದು ತಪ್ಪಿಸಬಹುದಾಗಿದೆ. ಸಾರ್ವಜನಿಕರ ಕಚೇರಿ ಅಲೆದಾಟ ತಪ್ಪಿಸಿ, ಸಮಯದ ವ್ಯರ್ಥವೂ ಆಗುವುದಿಲ್ಲ ಆದ್ದರಿಂದ ಎಲ್ಲ ಡಿಜಿಟಲೀಕರಣ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಅವರು ಸೂಚನೆ ನೀಡಿದರು.  

ನಮೂನೆ-1ರಿಂದ 5 ರಡಿ ಅರ್ಜಿಗಳ ಇಂಡೀಕರಣ ಮತ್ತು ವಿಲೇವಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು.  ಪಹಣಿ ಪತ್ರಿಕೆಯೊಂದಿಗೆ ಆಧಾರ ಜೋಡಣೆ  ಜಿಲ್ಲೆಯಲ್ಲಿ ಶೇ.84.47 ರಷ್ಟು ಪ್ರಗತಿ ಸಾಧಿಸಿದ್ದು, ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ತ್ವರಿತಗತಿಯಲ್ಲಿ ಪಹಣಿ ಪತ್ರಿಕೆಯೊಂದಿಗೆ ಆಧಾರ ಜೋಡಣೆ ಮಾಡಬೇಕು. ಲ್ಯಾಂಡ್ ಬೀಟ್ ಅರ್ಜಿಗಳ ಇಂಡೀಕರಣ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಶೇ.98ರಷ್ಟು ಪ್ರಗತಿಯಾಗಿದೆ ಎಂದು ಅವರು ಹೇಳಿದರು.  

ಕಂದಾಯ ನ್ಯಾಯಾಲಯಗಳ ಪ್ರಕರಣಗಳಿಗೆ ಸಂಬಂಧಿಸಿದಂತೆ ತಹಶೀಲ್ದಾರ ಹಂತದಲ್ಲಿ  3 ತಿಂಗಳ ಹಾಗೂ ಉಪ ವಿಭಾಗಾಧಿಕಾರಿಗಳ ಹಂತದಲ್ಲಿ 6 ತಿಂಗಳಕ್ಕೂ ಮೇಲ್ಪಟ್ಟ ಯಾವುದೇ ಬಾಕಿ ಉಳಿಸಿಕೊಳ್ಳದೇ ವಿಲೇವಾರಿ ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.  

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿಗಳಾದ ಸೋಮಲಿಂಗ ಗೆಣ್ಣೂರು, ವಿಜಯಪುರ ಉಪ ವಿಭಾಗಾಧಿಕಾರಿಗಳಾದ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ಹೇಮಲತಾ ವಸ್ತ್ರದ ಸೇರಿದಂತೆ ಜಿಲ್ಲೆಯ ವಿವಿಧ ತಹಶೀಲ್ದಾರಗಳು, ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.