ಕ್ರೀಡೆಯೂ ವಿದ್ಯಾಭ್ಯಾಸದಷ್ಟೇ ಮಹತ್ವದ್ದು: ಕರೆಹೊನ್ನ

ಲೋಕದರ್ಶನ ವರದಿ

ಮುಧೋಳ 16: ವಿದ್ಯಾಭ್ಯಾಸದಿಂದ ಮನುಷ್ಯನ ಬುದ್ಧಿಮಟ್ಟ ಹೆಚ್ಚಾದರೆ ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ದೊರೆಯುತ್ತದೆ. ಹೀಗಾಗಿ ವಿದ್ಯಾಭ್ಯಾಸದಷ್ಟೇ ಕ್ರೀಡೆಯೂ ಮಹತ್ವದ್ದು ಎಂದು ಪತ್ರಕರ್ತ ಮಹಾಂತೇಶ ಕರೆಹೊನ್ನ ಹೇಳಿದರು.

      ಟೈಗರ್ ಬಾಯ್ಸ್ ಕ್ರಿಕೆಟ್ ಕ್ಲಬ್ ಹಾಗೂ ಅಕ್ವಾಲಿಂಕ್ ಶುದ್ಧ ಕುಡಿಯುವ ನೀರಿನ ಘಟಕದ ಸಂಯುಕ್ತಾಶ್ರಯದಲ್ಲಿ ನಗರದ ರನ್ನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತಾಲೂಕಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬ್ಯಾಟಿಂಗ್ ನಡೆಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

      ತಾಲೂಕಿನ ವಿವಿಧ ಗ್ರಾಮಗಳಿಂದ 20 ತಂಡಗಳು ಆಗಮಿಸಿದ್ದು, ಪ್ರತಿ ಆಟಗಳಲ್ಲಿ ಉತ್ತಮ ಕ್ರೀಡಾಪಟುಗಳನ್ನು ಗುರುತಿಸುವ ಮೂಲಕ ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಇದರಿಂದ ಎಲೆಮರೆಯ ಕಾಯಿಯಂತಿರುವ ಅನೇಕರಿಗೆ ಇಂತಹ ಪಂದ್ಯಾವಳಿಗಳು ಮುಂದೆ ಉತ್ತಮ ಅವಕಾಶ ನೀಡುವ ವೇದಿಕೆಗಳಾಗಬಲ್ಲವು. ಅಲ್ಲದೇ ಕ್ರೀಡೆಗಳಿಂದ ದೇಹಕ್ಕೆ ವ್ಯಾಯಾಮ ದೊರೆಯುವುದಲ್ಲದೇ, ಮಾನಸಿಕ ಸ್ಥಿರತೆ ದೊರೆಯುತ್ತದೆ. ಅದರಲ್ಲೂ ಮಕ್ಕಳು ಹಾಗೂ ಯುವಜನಾಂಗ ಕ್ರೀಡೆಗಳಲ್ಲಿ ತೊಡಗುವುದರಿಂದ ದುಶ್ಚಟಗಳಿಂದ ದೂರ ಉಳಿದು, ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸಲು ಮಾನಸಿಕವಾಗಿ ಸಧೃಡರಾಗುತ್ತಾರೆ ಎಂದರು. 

      ಈ ಸಂಧರ್ಬದಲ್ಲಿ ಕಲ್ಲೊಳ್ಳೆಪ್ಪ ಬಂಡಿವಡ್ಡರ, ಕಲ್ಮೇಶ ಗೋಸಾರ, ಶಿವು ನ್ಯಾಮಗೌಡ, ಪ್ರಶಾಂತ ಕಾಳೆ, ಅಪ್ಪಾಸಾಹೇಬ್ ಪವಾರ, ಪ್ರವೀಣ ನಿಗಡೆ, ಸತೀಶ ಕಾಳೆ, ಹಣಮಂತ ಜಮಖಂಡಿ, ಸಿದ್ದಾರ್ಥ ಘಾರಗೆ, ತೌಶಿಪ್ ಬಿಸ್ತಿ ಉಪಸ್ಥಿತರಿದ್ದರು