ಅಸ್ಪೃಶ್ಯತೆ ಆಚರಣೆ ಬಿಡಿ ಎಲ್ಲರೂ ಕೈಜೋಡಿಸಿ: ಪಿಎಸ್‌ಐ ತಿಪ್ಪರಡ್ಡಿ

Stop practicing untouchability, everyone should join hands: PSI Tipparaddi

ದೇವರಹಿಪ್ಪರಗಿ 22: ಜಾತಿ, ಬೇಧ ಬಿಟ್ಟು ಎಲ್ಲರೂ ಮನುಷ್ಯರೆಂಬ ಭಾವನೆ ಬೆಳೆಸಿಕೊಳ್ಳಬೇಕು. ಎಲ್ಲರಿಗೂ ಹೋಟೆಲ್, ಅಂಗಡಿ, ದೇವಸ್ಥಾನ, ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶಿಸಲು ಮುಕ್ತ ಅವಕಾಶ ಇದೆ. ಗ್ರಾಮಗಳಲ್ಲಿ ಅಸ್ಪೃಶ್ಯತಾ ಆಚರಣೆ ಬಿಟ್ಟು ಎಲ್ಲರೂ ಕೈ ಜೋಡಿಸಬೇಕು ಎಂದು ದೇವರಹಿಪ್ಪರಗಿ ಪಿಎಸ್‌ಐ ಬಸವರಾಜ ತಿಪ್ಪರಡ್ಡಿ ಹೇಳಿದರು. ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಪೋಲಿಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಸ್ಪೃಶ್ಯತೆ ಆಚರಣೆ ನಿಷೇಧ ಕಾನೂನು ಕುರಿತು ಗುರುವಾರ ನಡೆದ ತಿಳುವಳಿಕೆ ಸಭೆಯಲ್ಲಿ ಮಾತನಾಡಿದ ಅವರು,ಎಲ್ಲರಿಗೂ ಸಂವಿಧಾನ ಸಮಾನ ಹಕ್ಕು ನೀಡಿದೆ.  

ಹಾಗಾಗಿ ಜಾತಿ ಮತ, ಮೇಲು ಕೀಳು ಎಂಬ ಭಾವನೆ ತೊಲಗಲಿ. ನಾವೆಲ್ಲ ಮನುಷ್ಯರೆಂಬ ಭಾವನೆ ಮೊಳಗಬೇಕು. ಎಲ್ಲಾ ಸಮುದಾಯಗಳನ್ನು ಗೌರವಿಸಿ ಒಗ್ಗಟ್ಟಿನಿಂದ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಅಸ್ಪೃಶ್ಯತೆ ಬಗ್ಗೆ ಕುಂದು ಕೊರತೆಗಳು ಗ್ರಾಮದಲ್ಲಿ ಕಂಡು ಬಂದರೆ ಇಲಾಖೆಗೆ ತಿಳಿಸಿ, ಕಾನೂನನ್ನು ಗೌರವಿಸುವ ಮೂಲಕ ಪ್ರತಿಯೊಬ್ಬರೂ ಶಾಂತಿ , ಸಹಬಾಳ್ವೆ, ಸಮಾನತೆ,ಸಹೊದರತ್ವ ಗುಣದಿಂದ ಬಾಳೋಣ ಎಂದರು.ಇದೇ ಸಂದರ್ಭದಲ್ಲಿ ಮುಖಂಡರುಗಳಾದ ನಿಂಗಪ್ಪ ಸಿಂದಗಿ, ಪ್ರಭು ದೊಡ್ಡಮನಿ, ಶರಣಪ್ಪ ಹಾದಿಮನಿ, ಸಿದ್ದು ಭೈರವಾಡಗಿ, ವಿಠ್ಠಲ ತಳಕೇರಿ ಸೇರಿದಂತೆ ಹಲವಾರು ಜನ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.