ರಾಜ್ಯದ 9,839 ಗ್ರಾಮ ಆಡಳಿತ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ, ಎಫ್‌ಐಆರ್ ದಾಖಲಿಸುವಂತೆ ತಹಶೀಲ್ದಾರರಿಗೆ ಮನವಿ
ಮುಂಡರಗಿ 16: ರಾಜ್ಯಾದ್ಯಂತ ಗ್ರಾಮ ಆಡಳಿತ ಅಧಿಕಾರಿಗಳ ವೃಂದದ ವತಿಯಿಂದ ಇ-ಪೌತಿ ಖಾತಾ ಆಂದೋಲನವನ್ನು ವಿರೋಧಿಸಿದ್ದು, ಹಾಸನ ಜಿಲ್ಲೆಯ ಗ್ರಾಮ ಆಡಳಿತ ಅಧಿಕಾರಿ ಹಗೂ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿಯಾಗಿರುವ ಶಿವಾನಂದ ನಾಯ್ಕ ಅವರನ್ನು ಅಮಾನತ್ತುಗೊಳಿಸಿ ಎಫ್.ಐ.ಆರ್ ದಾಖಲಿಸಿದಂತೆ ರಾಜ್ಯದ 9,839 ಗ್ರಾಮ ಆಡಳಿತ ಅಧಿಕಾರಿಗಳನ್ನು ಕೂಡ ಅಮಾನತ್ತುಗೊಳಿಸಿ, ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿ ಜಿಲ್ಲೆಯ ಗ್ರಾಮ ಆಡಳಿತ ಅಧಿಕಾರಿಗಳು ತಹಶೀಲ್ದಾರ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಖಾಸಗಿ ಒಡೆತನದ ಕೃಷಿ ಜಮೀನುಗಳ ಹಕ್ಕುಬದಲಾವಣೆ ವಿಚಾರವು ಖಾತೆದಾರರ ಅಥವಾ ವಾರಸುದಾರರ ವೈಯಕ್ತಿಕ ವಿಚಾರಗಳಾಗಿದ್ದು, ಸದರಿ ಜಮೀನುಗಳ ಹಕ್ಕುಬದಲಾವಣೆ ವಿಚಾರವು ಸಹ ಉತ್ತರಾಧಿಕಾರಿಗಳ ವೈಯಕ್ತಿಕ ವಿವೇಚನೆಗೆ ಬಿಟ್ಟ ವಿಚಾರವೇ ಆಗಿದೆ. ಒತ್ತಾಯಪೂರ್ವಕ ಹಕ್ಕುಬದಲಾವಣೆ ಕ್ರಮ ಸರಿಯಲ್ಲ. ಗ್ರಾಮ ಆಡಳಿತ ಅಧಿಕಾರಿಗಳು ಅಭಿಯಾನ ಮಾದರಿಯಲ್ಲಿ ತಾವೇ ಸ್ವತಃ ರೈತರನ್ನು ಸಂಪರ್ಕಿಸಿ ಮರಣ ಪ್ರಮಾಣ ಪತ್ರ, ವಂಶವೃಕ್ಷ, ಪಹಣಿ, ಮ್ಯುಟೇಷನ್ ಮತ್ತಿತರ ದಾಖಲಾತಿಗಳನ್ನು ಸಂಗ್ರಹಿಸಿ ಹಕ್ಕುದಾಖಲೆಗೆ ಒತ್ತಡ ಹೇರುವ ಕ್ರಮವನ್ನು ಸರಿಯಲ್ಲ ಎಂದು ತಿಳಿಸಿದರು ಜೊತೆಗೆ ಜಮೀನಿನ ಮಾಲಿಕರ ಇಚ್ಛೆಯಿಲ್ಲದೇ ಒತ್ತಾಯ ಪೂರ್ವಕ ಹಕ್ಕುಬದಲಾವಣೆ ಕ್ರಮವು ಸರ್ವತಹ ಸಮಂಜಸವಾದುದಲ್ಲ. ಆದ್ದರಿಂದ ತಮ್ಮ ಜಮೀನುಗಳ ಹಕ್ಕುಬದಲಾವಣೆಯ ಆಯ್ಕೆಯನ್ನು ನಿಯಮಾನುಸಾರ ಮೃತ ಖಾತೆದಾರರ ಒಡೆತನದಲ್ಲಿರುವ ಜಮೀನುಗಳ ವಾರಸುದಾರರ ಇಚ್ಛೆಗೆ ಬಿಡುವುದು ಸೂಕ್ತ. ಅಭಿಯಾನ ಮಾದರಿಯಲ್ಲಿ ತರಾತುರಿಯಲ್ಲಿ ಮಾಡಲಾಗುವ ಹಕ್ಕುಬದಲಾವಣೆ ಪ್ರಕರಣಗಳಲ್ಲಿ ವಾರಸುದಾರರು ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ, ಕಾನೂನುಬದ್ದ ಕೆಲವು ವಾರಸುದಾರರನ್ನು ಕೈಬಿಡುವುದು ಹಾಗೂ ವಿವಾಹಿತ ಹೆಣ್ಣುಮಕ್ಕಳನ್ನು ಉದ್ದೇಶಪೂರ್ವಕವಾಗಿ ಕೈಬಿಡುವುದು, ಬಹುಪತ್ನಿತ್ವ ಹಕ್ಕಿನ ವಿವಾದಗಳು ಮುಂತಾದ ಕ್ರಮಗಳಿಂದಾಗಿ ತಪ್ಪಾಗಿ ಹಕ್ಕುದಾಖಲೆಗಳು ದಾಖಲಾಗುವ ಸಂಭವವಿದ್ದು, ಈ ಸಂಬಂಧ ಗ್ರಾಮ ಆಡಳಿತ ಅಧಿಕಾರಿಗಳು ಹಲವು ಬಗೆಯ ಕಾನೂನು ಕ್ರಮಗಳನ್ನು ಎದುರಿಸುವ ಪ್ರಸಂಗಗಳು ಎದುರಾಗುತ್ತವೆ. ಅಲ್ಲದೇ, ಈಗಾಗಲೇ ಮೃತ ಖಾತೆದಾರರ ಹೆಸರಿನಲ್ಲಿರುವ ಪಹಣಿ ದಾಖಲೆಗಳನ್ನು ವಾರಸುದಾರರ ಹೆಸರಿಗೆ ಬದಲಾಯಿಸುವಂತೆ ಅರ್ಜಿ ಸಲ್ಲಿಸಿ ಹಕ್ಕುಬದಲಾವಣೆ ಪಡೆದುಕೊಂಡಿರುವ ಪ್ರಕರಣಗಳಲ್ಲಿಯೇ ಸಾಕಷ್ಟು ಪ್ರಕರಣಗಳಲ್ಲಿ ಸುಳ್ಳು ಮಾಹಿತಿ, ದಾಖಲೆ ನೀಡಿ ಹಕ್ಕುದಾಖಲೆ ಮಾಡಿಕೊಂಡಿರುವ ಸಾವಿರಾರು ಪ್ರಕರಣಗಳಿದ್ದು, ಸದರಿ ಪ್ರಕರಣಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಅಮಾನತ್ತುಗೊಳಿಸಿ ಕ್ರಿಮಿನಲ್ ಪ್ರಕರಣಗಳನ್ನು ಸಹ ದಾಖಲಿಸಿರುವ ನೂರಾರು ಪ್ರಕರಣಗಳಿವೆ. ಪೌತಿ ಖಾತಾ ಬದಲಾವಣೆ ಪ್ರಕ್ರಿಯೆಯು ನಿರಂತರವಾಗಿದ್ದು, ಅವೈಜ್ಞಾನಿಕ ಶ್ರೇಯಾಂಕ ವ್ಯವಸ್ಥೆಯನ್ನು ಕೈಬಿಟ್ಟು ಎಂದಿನಂತೆ ನಿಯಮಬದ್ದವಾಗಿ ಹಾಗೂ ನಿರಂತರವಾಗಿ ಈ ಹಿಂದಿನಿಂದಲೂ ಇರುವಂತೆ ಪೌತಿ ಖಾತೆ ಬದಲಾವಣೆ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಘಟಕದ ಉಪಾಧ್ಯಕ್ಷ ಚಂದ್ರಶೇಖರ ನಾಯಕ, ಮುಂಡರಗಿ ತಾಲೂಕು ಅಧ್ಯಕ್ಷ ಬಸವರಾಜ ಪೊಲೂರ, ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಮೇಟಿ ಹಾಗೂ ತಾಲೂಕಿನ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು ಇದ್ದರು.