ಇಂಗ್ಲೀಷ್ನಲ್ಲಿ ಪ್ರಮಾಣ ವಚನ: ಸುರೇಶ್ ಅಂಗಡಿ ವಿರುದ್ಧ ಕನ್ನಡಪರ ಕಾರ್ಯಕರ್ತರಿಂದ ಪ್ರತಿಭಟನೆ

ಬೆಳಗಾವಿ,  ಜೂನ್ 19:  ಲೋಕಸಭಾ ಸದಸ್ಯ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು  ಸಂಸತ್ನಲ್ಲಿ ಅಧಿವೇಶನದ ಮೊದಲ ದಿನ ಇಂಗ್ಲಿಷ್ನಲ್ಲಿ ಪ್ರಮಾಣವಚನ ಸ್ವೀಕರಿಸಿದ ವಿರುದ್ಧ ಕರ್ನಾಟಕ  ರಕ್ಷಣಾ ವೇದಿಕೆ (ಕರಾವೇ) ಕಾರ್ಯಕರ್ತರು  ಬುಧವಾರ  ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. 

ನಾರಾಯಣ ಗೌಡ ಬಣದ ನೂರಾರು  ಕಾರ್ಯಕರ್ತರು ರಾಣಿ ಚನ್ನಮ್ಮ ವೃತ್ತದಿಂದ ಪ್ರತಿಭಟನಾ ಮೆರವಣಿಯನ್ನು ನಡೆಸಿದರು. ಬಳಿಕ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಕಾರ್ಯಕರ್ತರನ್ನು ತಡೆದಿದ್ದು, ಆ ನಂತರ, ಪ್ರತಿಭಟನಾಕಾರರು ಸ್ವಲ್ಪ ಸಮಯದವರೆಗೆ ರಸ್ತೆಯ ಮೇಲೆ ಕುಳಿತು ಘೋಷಣೆಗಳನ್ನು ಕೂಗಿದರು. . 

'ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯ ಕನ್ನಡ ವಿರೋಧಿ ನೀತಿಯನ್ನು ನಾವು ವಿರೋಧಿಸಿ ಪ್ರತಿಭಟನೆ  ನಡೆಸುತ್ತಿರುವಾಗಲೇ ಸುರೇಶ್ ಅಂಗಡಿ ಅವರು ಇಂಗ್ಲಿಷ್ನಲ್ಲಿ ಪ್ರಮಾಣ ವಚನ ಸ್ವೀಕರಿಸುವುದು  ತಪ್ಪು.' ಎಂದು ಕರವೇ ಜಿಲ್ಲಾಧ್ಯಕ್ಷ ಮಹಾದೇವ್ ತಲ್ವಾರ್ ಆರೋಪಿಸಿದ್ದಾರೆ. 

ಸುರೇಶ್ ಅಂಗಡಿ ಅವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿರುವ ಮತ್ತೊಬ್ಬ  ಕರವೇ ನಾಯಕ ದೀಪಕ್, ಜಿಲ್ಲೆಯಲ್ಲಿ ಸಚಿವರ ಕಾರ್ಯಕ್ರಮಗಳನ್ನು ಬಹಿಷ್ಕರಿಸುವ ಬೆದರಿಕೆ ಹಾಕಿದ್ದಾರೆ.  

ಪ್ರತಿಭಟನಾಕಾರರು ಸುರೇಶ್ ಅಂಗಡಿಯ ಪ್ರತಿಕೃತಿಯನ್ನು ಸುಟ್ಟು, ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. 

ಸಂಸತ್ನಲ್ಲಿ ಬಹುತೇಕ ನೂತನ ಲೋಕಸಭಾ ಸದಸ್ಯರು ಈ ಬಾರಿ ಪ್ರಾದೇಶಿಕ ಭಾಷೆಗಳಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಅಂತೆಯೇ ರಾಜ್ಯದ ಸುರೇಶ್ ಅಂಗಡಿ, ಅನಂತ್ ಕುಮಾರ್ ಹೆಗಡೆ ಹೊರತುಪಡಿಸಿ ಎಲ್ಲ ಸದಸ್ಯರು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದರು. ಅನಂತ್ ಕುಮಾರ್ ಹೆಗಡೆ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.