ಕಂಪ್ಲಿ 23: ಸ್ಥಳೀಯ ಧರ್ಮಸ್ಥಳ ಕ್ಷೇಮಾಭಿವೃದ್ಧಿಯ ತಾಲೂಕು ಯೋಜನಾ ಕಛೇರಿಯಲ್ಲಿ ಬುಧವಾರ ಆಯೋಜಿಸಿದ್ದ ಬೀಳ್ಕೊಡಿಗೆ ಸಮಾರಂಭದಲ್ಲಿ ಬೇರೆ ಕಡೆ ವರ್ಗಾವಣೆಗೊಂಡ ತಾಲೂಕು ಯೋಜನಾಧಿಕಾರಿ ಹಾಲಪ್ಪ ಇವರಿಗೆ ಸನ್ಮಾನದೊಂದಿಗೆ ಬೀಳ್ಕೊಡಲಾಯಿತು.
ನಂತರ ಸನ್ಮಾನ ಸ್ವೀಕರಿಸಿ ಹಾಲಪ್ಪ ಮಾತನಾಡಿ, ಕಂಪ್ಲಿಯಲ್ಲಿ ನೂತನ ತಾಲೂಕು ಯೋಜನಾ ಕಛೇರಿ ಆರಂಭದಿಂದಲೂ ಸುಮಾರು ಐದು ವರ್ಷಗಳ ಕಾಲ ಯೋಜನಾಧಿಕಾರಿಯಾಗಿ ಸೇವೆ ಮಾಡಿರುವುದು ತೃಪ್ತಿ ತಂದಿದೆ. ಈ ಭಾಗದ ಜನರ ಮಾತು ಒರಟಾದರೂ, ವಿಶಾಲವಾದ ಹೃದಯವುಳ್ಳವರಾಗಿದ್ದಾರೆ. ಇಲ್ಲಿನ ಸಿಬ್ಬಂದಿಗಳ ಸಹಕಾರದೊಂದಿಗೆ ಸೇವಾನುಭವವಾಗಿದೆ. ಕೇಂದ್ರ ಕಛೇರಿಯ ಯೋಜನಾಧಿಕಾರಿಗಳ ಆದೇಶದಂತೆ ಮಂಡ್ಯ ಜಿಲ್ಲೆಗೆ ವರ್ಗಾವಣೆಗೊಂಡಿದ್ದು, ಇದರಿಂದ ಅನಿರ್ವಾಯವಾಗಿ ಹೋಗಬೇಕಾಗಿದೆ. ಇಷ್ಟು ದಿನ ಕಂಪ್ಲಿ ಜನತೆ ನೀಡಿರುವ ಪ್ರೀತಿ, ಸಹಕಾರಕ್ಕೆ ಚಿರರುಣಿಯಾಗಿರುವೆ. ಮುಂದಿನ ದಿನದಲ್ಲಿ ಮತ್ತೊಮ್ಮೆ ಅವಕಾಶ ಸಿಕ್ಕರೆ, ಕಂಪ್ಲಿಯಲ್ಲಿ ಸೇವೆ ಮಾಡಲಾಗುವುದು ಎಂದರು. ತದನಂತರ ಮುಖಂಡ ಡಾ.ವೆಂಕಟೇಶ ಸಿ.ಭರಮಕ್ಕನವರ್ ಮಾತನಾಡಿ, ಧರ್ಮಸ್ಥಳ ಯೋಜನೆಯೊಂದಿಗೆ ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜನರ ಪರಿವರ್ತನೆ ಮಾಡಲಾಗಿದೆ.
ಹಾಲಪ್ಪ ಅವರು ಐದು ವರ್ಷ ಸೇವೆ ಸಲ್ಲಿಸಿ, ಇಲ್ಲಿನ ಜನರ ಪ್ರೀತಿ, ವಿಶ್ವಾಸವನ್ನು ಗಳಿಸಿದ್ದಾರೆ. ಇಂತಹ ಯೋಜನಾಧಿಕಾರಿ ಸಿಗುವುದಿಲ್ಲ ಎಂದರು. ವರ್ಗಾವಣೆಗೊಂಡ ಹಾಲಪ್ಪ ಮಾಲತಿ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ರಾಮಾಂಜಿನಿ, ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ರೋಹಿತಾಕ್ಷ, ಕಾನಿಪ ತಾಲೂಕು ಅಧ್ಯಕ್ಷ ಪಿ.ವಿರೇಶ, ಪತ್ರಕರ್ತರಾದ ಯಮನಪ್ಪ, ದ್ಯಾಮನಗೌಡ, ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ, ಉಮಾಮಹೇಶ್ವರಿ, ಧರ್ಮಸ್ಥಳ ಯೋಜನಾ ಕಛೇರಿಯ ಸಿಬ್ಬಂದಿಗಳಾದ ಸಂಜೀವಕುಮಾರ, ಮುರುಗೇಶ, ಮಂಜುಳಾ, ರೇಖಾ, ಚೇತನ್ ಸೇರಿದಂತೆ ಇತರರು ಇದ್ದರು.