ಟ್ಯಾಕ್ಸಿ ದರ ನಿಗದಿ; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು, ಫೆ11,  ಬೆಂಗಳೂರು ನಗರದಲ್ಲಿ ಸಂಚರಿಸುವ ಟ್ಯಾಕ್ಸಿಗಳಿಗೆ ಪ್ರಯಾಣದ ದರ ನಿಗದಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ದರ ನಿಗದಿಯ ಅಧಿಸೂಚನೆ ಪ್ರಶ್ನಿಸಿ ವಕೀಲ ಮಹಮ್ಮದ್  ದಸ್ತಗೀರ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ನೇತೃತ್ವದ ವಿಭಾಗೀಯ  ಪೀಠ, ರಾಜ್ಯ ರಸ್ತೆ ಪ್ರಾಧಿಕಾರದ ಕಾರ್ಯದರ್ಶಿ, ಬೆಂಗಳೂರು ನಗರ ಪ್ರಾದೇಶಿಕ ಸಾರಿಗೆ  ಪ್ರಾಧಿಕಾರ, ಬೆಂಗಳೂರು ಗ್ರಾಮಾಂತರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಹಾಗೂ ಕಾನೂನು  ಮಾಪನಶಾಸ್ತ್ರ ಇಲಾಖೆ ನಿಯಂತ್ರಕರಿಗೆ ನೋಟಿಸ್ ಜಾರಿಗೊಳಿಸಿತು. 

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ ) ವ್ಯಾಪ್ತಿಯ ಟ್ಯಾಕ್ಸಿಗಳು ಹಾಗೂ ಅಗ್ರಿಗೇಟರ್  ನಿಯಮದ ಅಡಿಯಲ್ಲಿ ಬರುವ ಟ್ಯಾಕ್ಸಿಗಳನ್ನು ಎ,ಬಿ,ಸಿ ಮತ್ತು ಡಿ ವರ್ಗ ಎಂದು ವಿಂಗಡಿಸಿ, ಪ್ರತಿ ವರ್ಗಕ್ಕೆ ಪ್ರತ್ಯೇಕ ದರ ನಿಗದಿಪಡಿಸಿ ಸರ್ಕಾರ 2018ರ ಮಾರ್ಚ್ 3ರಂದು ಮೋಟಾರು ವಾಹನಗಳ ಅಧಿನಿಯಮ-1988ರ ಕಲಂ 67ರ ಉಪ ಕಲಂ 1(ಡಿ) (ಐ)  ಅಡಿಯಲ್ಲಿ ಅಧಿಸೂಚನೆ ಹೊರಡಿಸಿತ್ತು.ಇದನ್ನು ಪ್ರಶ್ನಿಸಿರುವ ಅರ್ಜಿದಾರರು ಎಲ್ಲಾ  ಬಗೆಯ ಟ್ಯಾಕ್ಸಿಗಳು ನ್ಯಾಯಸಮ್ಮತ ಮಾಪನಾಂಕ ಮೀಟರ್‌ ಅಳವಡಿಸಿಕೊಂಡಿರುವುದನ್ನು ಸರ್ಕಾರ  ಖಾತರಿಪಡಿಸಬೇಕು ಎಂದು ಕೋರಿದ್ದಾರೆ.