ವಿಭಿನ್ನತೆಯಲ್ಲಿ ಏಕತೆ ಮೂಲಮಂತ್ರ ನೀಡಿದ ಮಹಾನುಭಾವ ಡಾ. ಅಂಬೇಡ್ಕರ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್

The great Dr. Ambedkar gave the mantra of unity in diversity: District Collector Mohammad Roshan

ವಿಭಿನ್ನತೆಯಲ್ಲಿ ಏಕತೆ ಮೂಲಮಂತ್ರ ನೀಡಿದ ಮಹಾನುಭಾವ ಡಾ. ಅಂಬೇಡ್ಕರ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ 

ಬೆಳಗಾವಿ.ಏ14: ನಮ್ಮ ದೇಶದ ಮೂಲ ತತ್ವ, ನಮ್ಮ ಜೀವನದ ಮೂಲ ಮೌಲ್ಯ, ವಿಭಿನ್ನತೆಯಲ್ಲಿ ಏಕತೆ ಮೂಲಕ ನಾವೆಲ್ಲರೂ ಒಂದೇ ಎಂಬ ಮೂಲ ಸಿದ್ಧಾಂತವನ್ನು ನೀಡಿದ್ದು ಡಾ.ಬಿ.ಆರ್‌.ಅಂಬೇಡ್ಕರ ಅವರು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ನುಡಿದರು.  

ನಗರದ ಡಾ.ಬಾಬಾಸಾಹೇಬ ಅಂಬೇಡ್ಕರ ಉದ್ಯಾನವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ(ಏ.14) ಜರುಗಿದ ಡಾ.ಬಾಬಾಸಾಹೇಬ ಅಂಬೇಡ್ಕರ ಅವರ 134ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಬಾಬಾಸಾಹೇಬರ ಮಹಾನ ವಿಚಾರ ಧಾರೆಗಳನ್ನು ಶಾಯರಿ ಮೂಲಕ ವ್ಯಕ್ತ ಪಡಿಸಿ ಅವರು ಕೇವಲ ಒಬ್ಬ ವ್ಯಕ್ತಿಯಾಗಿರದೇ ಒಂದು ದೊಡ್ಡ ಶಕ್ತಿ ಎಂಬ ವಿಚಾರವನ್ನು ನಾವೆಲ್ಲರೂ ಮನಗಾಣಬೇಕು. ಅವರನ್ನು ಕೇವಲ ಒಂದೇ ಜಾತಿಗೆ ಸೀಮಿತಗೊಳಿಸಬಾರದು. ಡಾ.ಬಿ.ಆರ್‌.ಅಂಬೇಡ್ಕರ ಅವರು ಭಾರತದ ಗುರುತಾಗಿದ್ದು ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಹೊಂದಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಹೇಳಿದರು.  

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಿಚಾರವಾದಿ ಭೀಮಪುತ್ರ ಸಂತೋಷ ಅವರು ಡಾ.ಬಿ.ಆರ್‌.ಅಂಬೇಡ್ಕರ ಅವರ ಜೀವನ ಸಾಧನೆಗಳ ಕುರಿತು ಮಾತನಾಡಿ ಡಾ.ಬಿ.ಆರ್‌.ಅಂಬೇಡ್ಕರ ಅವರು ಈ ದೇಶದ ನಿಜವಾದ ಅಗ್ರಗಣ್ಯ ನಾಯಕರಾಗಿದ್ದಾರೆ. ಅಂಬೇಡ್ಕರ ಅವರು ಪುತ್ಥಳಿಯಲ್ಲಿ ಇಲ್ಲ ಅವರು ಪುಸ್ತಕದಲ್ಲಿದ್ದು ಅವರನ್ನು ಅರಿತುಕೊಳ್ಳಲು ಪ್ರತಿಯೊಬ್ಬರು ಸಂವಿಧಾನವನ್ನು ಓದಬೇಕು ಎಂದರು.  

ಬಾಬಾಸಾಹೇಬ ಅವರು ಈ ದೇಶದ ಹೃದಯವಿದ್ದಂತೆ. ಅಂಬೇಡ್ಕರ ಅವರನ್ನು ಅಸ್ಪೃಶ್ಯರ ರೀತಿ ಕಾಣಲಾಗುತ್ತಿತ್ತು. ಆದರೆ ಇಡೀ ಜಗತ್ತಿನಲ್ಲಿ ಅವರಲ್ಲಿನ ಜ್ಞಾನವನ್ನು ಮುಟ್ಟಲು ಯಾರಿಂದಲೂ ಸಾಧ್ಯವಾಗಿಲ್ಲ. ಬಾಬಾ ಸಾಹೇಬರನ್ನು ಆಚರಿಸದೆ ಅವರನ್ನು ಅನುಸರಿಸಬೇಕು ಇದರಿಂದಾಗಿ ಸಮಾಜವನ್ನು ಸಮ ಸಮಾಜ ಮಾಡಲು ಸಾಧ್ಯವಾಗುತ್ತದೆ. ಶತ್ರುಗಳು ಓದಿಗೆ ಮಾತ್ರ ಹೆದರುತ್ತಾರೆ. ಸಮಾಜದಲ್ಲಿ ಪ್ರತಿಯೊಬ್ಬರು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೇ ನೀಡಲು ತಿಳಿಸಿದರು.  

ದೇಶದಲ್ಲಿ ಹುಟ್ಟಿ ಎಂದಿಗೂ ಮುಳುಗದ ಸೂರ್ಯ ಬಾಬಾಸಾಹೇಬರು, ಅವರು ಸಂವಿಧಾನ ಪೀಠಿಕೆ ಬರೆಯುವಂತಹ ಸಂದರ್ಭದಲ್ಲಿ ಭಾರತದ ನಾಗರಿಕರಾದ ನಾವು ಎಂಬ ಪದವನ್ನು ಬಳಸುವದರ ಮೂಲಕ ದೇಶದ ಐಕ್ಯತೆಗೆ ಪ್ರಾಮುಖ್ಯತೇ ನೀಡಿದರು.   

ಬಾಬಾಸಾಹೇಬ ಅಂಬೇಡ್ಕರ ಅವರ ವಾಹನ ಕೇವಲ ಬಟ್ಟೆ ಅಂಗಡಿ ಹಾಗೂ ಗ್ರಂಥಾಲಯದ ಹತ್ತಿರ ಮಾತ್ರ ನಿಲುಗಡೆಯಾಗುತ್ತಿತ್ತು. ಇದರಿಂದಾಗಿ ಜನ ಪ್ರೇರೆಪಣೆಗೊಂಡು ಒಳ್ಳೆ ಬಟ್ಟೆ ಧರಿಸಲು ಹಾಗೂ ಓದಿನ ಕಡೆ ಹೆಚ್ಚಿನ ಗಮನ ನೀಡಲಿ ಎಂಬ ಕಾರಣವಿತ್ತು ಎಂದು ತಿಳಿಸಿದರು.  


ಬಾಬಾಸಾಹೇಬರಿಗೆ ಹಣ ಮತ್ತು ಸಂಪತ್ತು ಮುಖ್ಯವಾಗಿರಲಿಲ್ಲ. ಅವರಿಗೆ ದೇಶದ ಜನರ ಭವಿಷ್ಯವೇ ಪ್ರಮುಖವಾಗಿತ್ತು. ಆದ್ದರಿಂದ ಬಾಬಾಸಾಹೇಬರನ್ನು ಕೇವಲ ಜಯಂತಿಗೆ ಸೀಮಿತಗೊಳಿಸದೆ ಅವರನ್ನು ಹಾಗೂ ಅವರ ಸಿದ್ಧಾಂತಗಳನ್ನು ಅನುಸರಿಸುವ ಮೂಲಕ ಸಧೃಢ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗುವಂತೆ ಭೀಮಪುತ್ರ ಸಂತೋಷ ಕರೆ ನೀಡಿದರು.  

ಮಹಾನಗರ ಪಾಲಿಕೆ ಮಹಾ ಪೌರರಾದ ಮಂಗೇಶ ಪವಾರ ಉಪ ಮಹಾ ಪೌರರಾದ ವಾಣಿ ವಿಲಾಸ ಜೋಶಿ, ನಗರ ಸೇವಕರುಗಳಾದ ಶ್ರೇಯಸ್, ಜಯತೀರ್ಥ, ಸಿದ್ದರಾಯ ಮೇತ್ರಿ, ಪೋಲಿಸ್ ಆಯುಕ್ತರಾದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ಗಣ್ಯರುಗಳಾದ ಬಸವರಾಜ, ಮಲ್ಲೇಶ ಚೌಗಲೆ, ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಂಘಟನೆಯ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೆಶಕ ರಾಮನಗೌಡ ಕನ್ನೋಳಿ ಸ್ವಾಗತಿಸಿದರು.  

ಹನುಮಂತ ಪೂಜಾರ ಅವರು ಸಂವಿಧಾನದ ಪ್ರಸ್ತಾವನೆಯನ್ನು ವಾಚಿಸಿದರು. ಬೌದ್ಧ ಮಹಾಸಭಾ ಅಧ್ಯಕ್ಷರಾದ ಯಮನಪ್ಪ ಗಡಿನಾಯಕ ಅವರು ಬೌದ್ಧ ಮಹಾಸಭಾದ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ವಿಧ್ಯಾರ್ಥಿಯಾದ ಧನರಾಜ ತಳವಾರ ಡಾ.ಬಿ.ಆರ್‌.ಅಂಬೇಡ್ಕರ ಅವರ ಕುರಿತು ಮಾತನಾಡಿದರು.   


ವಿವಿಧ ಕ್ಷೇತ್ರಗಳ ಸಾಧಕಾರಿಗೆ ಸನ್ಮಾನ, ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಗಳನ್ನು ಹಾಗೂ ಪೌರಕಾರ್ಮಿಕರಿಗೆ ಸುರಕ್ಷಾ ಕಿಟ್ ಗಳನ್ನು ಗಣ್ಯರುಗಳಿಂದ ವಿತರಿಸಲಾಯಿತು.